

Pahalgam Attack : ಏಪ್ರಿಲ್ 22ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಸಂಬಂಧಿಸಿದ ತನಿಖೆಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಪ್ರಮುಖ ಯಶಸ್ಸನ್ನು ಸಾಧಿಸಿದೆ. ದಾಳಿಕೋರರಿಗೆ ಆಶ್ರಯ ಮತ್ತು ಸಾರಿಗೆ ಬೆಂಬಲವನ್ನು ನೀಡಿದ ಆರೋಪದ ಮೇಲೆ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ ಎಂದು ಭಯೋತ್ಪಾದನಾ ನಿಗ್ರಹ ಸಂಸ್ಥೆ ಭಾನುವಾರ ತಿಳಿಸಿದೆ.
ಬಂಧಿತರನ್ನು ಪರ್ವೈಜ್ ಅಹ್ಮದ್ ಜೋಥರ್ ಮತ್ತು ಬಶೀರ್ ಅಹ್ಮದ್ ಜೋಥರ್ ಎಂದು ಗುರುತಿಸಲಾಗಿದೆ. ಏಪ್ರಿಲ್ 22 ರಂದು 26 ನಾಗರಿಕರ ಸಾವಿಗೆ ಕಾರಣವಾದ ಭೀಕರ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾದ ಮೂವರು ಉಗ್ರರ ಹೆಸರನ್ನು ಸಹ ಬಂಧಿತ ಆರೋಪಿಗಳು ಬಹಿರಂಗಪಡಿಸಿದ್ದಾರೆ.
ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿರುವ ಎನ್‌ಐಎ, ಪಹಲ್ಗಾಮ್ ಭಯೋತ್ಪಾದಕ ದಾಳಿ ಪ್ರಕರಣದ ತನಿಖೆಯಲ್ಲಿ ಪ್ರಮುಖ ಬೆಳವಣಿಗೆ ಕಂಡುಬಂದಿದ್ದು, 26 ಅಮಾಯಕ ಪ್ರವಾಸಿಗರನ್ನು ಕೊಂದು 16 ಜನರನ್ನು ತೀವ್ರವಾಗಿ ಗಾಯಗೊಳಿಸಿದ ಭೀಕರ ದಾಳಿಯನ್ನು ನಡೆಸಿದ ಭಯೋತ್ಪಾದಕರಿಗೆ ಆಶ್ರಯ ನೀಡಿದ್ದಕ್ಕಾಗಿ ಇಬ್ಬರು ವ್ಯಕ್ತಿಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬಂಧಿಸಿದೆ ಎಂದು ಎನ್‌ಐಎ ಹೇಳಿಕೆ ತಿಳಿಸಿದೆ.
"ಪಹಲ್ಗಾಮ್‌ನ ಬಟ್ಕೋಟ್ ಮೂಲದ ಪರ್ವೈಜ್ ಅಹ್ಮದ್ ಜೋಥರ್ ಮತ್ತು ಪಹಲ್ಗಾಮ್‌ನ ಹಿಲ್ ಪಾರ್ಕ್ ಮೂಲಕದ ಬಶೀರ್ ಅಹ್ಮದ್ ಜೋಥರ್, ಮೂವರು ಸಶಸ್ತ್ರ ಭಯೋತ್ಪಾದಕರ ಗುರುತನ್ನು ಬಹಿರಂಗಪಡಿಸಿದ್ದಾರೆ ಮತ್ತು ಅವರು ನಿಷೇಧಿತ ಭಯೋತ್ಪಾದಕ ಸಂಘಟನೆಯಾದ ಲಷ್ಕರ್-ಎ-ತೋಯ್ಬಾ (ಎಲ್‌ಇಟಿ)ಗೆ ಸಂಬಂಧಿಸಿದ ಪಾಕಿಸ್ತಾನಿ ಪ್ರಜೆಗಳು ಎಂದು ದೃಢಪಡಿಸಿದ್ದಾರೆ ಎಂದು ಎನ್‌ಐಎ ಹೇಳಿದೆ.
ತನಿಖೆಯ ಪ್ರಕಾರ, ಪರ್ವೈಜ್ ಮತ್ತು ಬಶೀರ್ ದಾಳಿಗೆ ಮುನ್ನ ಹಿಲ್ ಪಾರ್ಕ್‌ನಲ್ಲಿರುವ ಕಾಲೋಚಿತ ಧೋಕ್ (ಗುಡಿಸಲು) ನಲ್ಲಿ ಮೂವರು ಶಸ್ತ್ರಸಜ್ಜಿತ ಭಯೋತ್ಪಾದಕರಿಗೆ ತಿಳಿದೇ ಆಶ್ರಯ ನೀಡಿದ್ದರು ಎಂದು ಎನ್‌ಐಎ ತಿಳಿಸಿದೆ. ಈ ಇಬ್ಬರು ವ್ಯಕ್ತಿಗಳು ಭಯೋತ್ಪಾದಕರಿಗೆ ಆಹಾರ, ಆಶ್ರಯ ಸೇರಿದಂತೆ ಎಲ್ಲ ವ್ಯವಸ್ಥೆಯ ಬೆಂಬಲವನ್ನು ಒದಗಿಸಿದ್ದರು.
ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ಕ್ರೂರ ದಾಳಿ ನಡೆಸಿದರು. ಕಾಶ್ಮೀರದ ಸೌಂದರ್ಯವನ್ನು ನೋಡಲು ಬಂದಿದ್ದ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಲಾಯಿತು. ಒಟ್ಟು 26 ಜನರು ಮೃತಪಟ್ಟರು. ಹಲವರು ಗಾಯಗೊಂಡರು. ಈ ದಾಳಿಯ ಹೊಣೆಯನ್ನು ಲಷ್ಕರ್ ಎ ತೊಯ್ಬಾ ಉಗ್ರ ಸಂಘಟನೆಯೊಂದಿಗೆ ಸಂಬಂಧ ಹೊಂದಿರುವ ‘ದಿ ರೆಸಿಸ್ಟನ್ಸ್ ಫ್ರಂಟ್’ ವಹಿಸಿಕೊಂಡಿತು. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಪಟ್ಟಣದಿಂದ 6 ಕಿ.ಮೀ ದೂರದಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣ ಬೈಸರನ್ ಕಣಿವೆಯ ಹುಲ್ಲುಗಾವಲಿನ ಪ್ರದೇಶವನ್ನು ವೀಕ್ಷಿಸುವಾಗ ಏ.22ರ ಮಂಗಳವಾರ ಮಧ್ಯಾಹ್ನ 2.30ರ ಸುಮಾರಿಗೆ ಪ್ರವಾಸಿಗರನ್ನು ಸುತ್ತುವರೆದ ಭಯೋತ್ಪಾದಕರು ಮನಬಂದಂತೆ ಗುಂಡು ಹಾರಿಸಿದರು. ಕೆಲವು ಭಯೋತ್ಪಾದಕರು, ಹೆಸರುಗಳನ್ನು ಕೇಳುತ್ತಾ ಮತ್ತು ಗುರುತಿನ ಚೀಟಿಗಳನ್ನು ನೋಡುತ್ತಾ, ಹಿಂದೂಗಳನ್ನು ಗುಂಡು ಹಾರಿಸಿ ಕೊಂದರು. ವಿಶೇಷವಾಗಿ ಹಿಂದೂಗಳನ್ನೇ ಗುರಿಯಾಗಿಸಿಕೊಂಡಿದ್ದರು. ಇಡೀ ಜಗತ್ತೇ ಈ ಘಟನೆಯನ್ನು ಖಂಡಿಸಿದೆ. ಈ ಬಗ್ಗೆ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ ಪ್ರತಿಕ್ರಿಯಿಸಿ, ಭಯೋತ್ಪಾದಕರನ್ನು ನಿರ್ಮೂಲನೆ ಮಾಡದೇ ಬಿಡುವುದಿಲ್ಲ ಎಂದು ಹೇಳಿದರು. (ಏಜೆನ್ಸೀಸ್)