

ಮೆಲ್ಬೋರ್ನ್: ಆಸ್ಟ್ರೇಲಿಯಾ ಹಾಗೂ ಟಿ20 ವಿಶ್ವ ಚಾಂಪಿಯನ್ ವೆಸ್ಟ್ ಇಂಡೀಸ್ ನಡುವಿನ 3 ಪಂದ್ಯಗಳ ಟಿ20 ಕ್ರಿಕೆಟ್ ಸರಣಿಯನ್ನು ಮುಂದೂಡಲಾಗಿದೆ. ಪೂರ್ವನಿಗದಿಯಂತೆ ಉಭಯ ತಂಡಗಳ ನಡುವಿನ ಸರಣಿ ಅಕ್ಟೋಬರ್ 4ರಿಂದ 9ರವರೆಗೆ ನಡೆಯಬೇಕಾಗಿತ್ತು. ಆಸ್ಟ್ರೇಲಿಯಾದಲ್ಲಿ ನಿಗದಿಯಾಗಿದ್ದ ಟಿ20 ವಿಶ್ವಕಪ್‌ಗೆ ಪೂರ್ವಸಿದ್ಧತೆಯಾಗಿ ಈ ಸರಣಿ ಆಡಬೇಕಾಗಿತ್ತು. ಇದೀಗ ವಿಶ್ವಕಪ್ ಟೂರ್ನಿಯನ್ನು 2021ಕ್ಕೆ ಮುಂದೂಡಿರುವ ಹಿನ್ನೆಲೆಯಲ್ಲಿ ಈ ಸರಣಿಯನ್ನೂ ಮುಂದೂಡಲಾಗಿದೆ. ಇದರಿಂದ ಐಪಿಎಲ್‌ಗೆ ಆಸೀಸ್ ಆಟಗಾರರು ಪೂರ್ಣ ಪ್ರಮಾಣದಲ್ಲಿ ಲಭ್ಯರಾಗಲು ಅವಕಾಶ ಮಾಡಿಕೊಟ್ಟಂತಾಗಿದೆ.
ಈಗಾಗಲೇ ಆಸ್ಟ್ರೇಲಿಯಾ-ಜಿಂಬಾಬ್ವೆ ನಡುವಿನ ಏಕದಿನ ಸರಣಿ ಮುಂದೂಡಿಕೆಯಾಗಿದ್ದರೆ, ಮುಂದಿನ ತಿಂಗಳು ಇಂಗ್ಲೆಂಡ್‌ನಲ್ಲಿ ನಿಗದಿಯಾಗಿರುವ ಆತಿಥೇಯ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿ ನಿಗದಿಯಂತೆ ನಡೆಯಲಿದೆ.
ಇದನ್ನೂ ಓದಿ: ಐಪಿಎಲ್ನಲ್ಲಿ ಆಡಲು ವಿರಾಟ್ ಕೊಹ್ಲಿ ಕಾತರ..!
ಐಪಿಎಲ್ ಹಿನ್ನೆಲೆಯಲ್ಲಿ ಸೆಪ್ಟೆಂಬರ್‌ನಲ್ಲಿ ನಿಗದಿಯಾಗಿದ್ದ ದಕ್ಷಿಣ ಆಫ್ರಿಕಾ ತಂಡದ ವೆಸ್ಟ್ ಇಂಡೀಸ್ ಪ್ರವಾಸ ಮುಂದೂಡಿದೆ. ಅಕ್ಟೋಬರ್‌ನಲ್ಲೇ ನಿಗದಿಯಾಗಿರುವ ಭಾರತ ತಂಡದ ಆಸ್ಟ್ರೇಲಿಯಾ ಪ್ರವಾಸದ ಭಾಗವಾಗಿರುವ ಟಿ20 ಸರಣಿ ಕೂಡ ಮುಂದೂಡಿಕೆಯಾಗುವುದು ನಿಶ್ಚಿತವೆನಿಸಿದೆ.