ಐಪಿಎಲ್​ನಲ್ಲಿ ಆಡಲು ವಿರಾಟ್​ ಕೊಹ್ಲಿ ಕಾತರ..!

virat for webb
Published on

ಬೆಂಗಳೂರು : ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ ಸೇರಿದಂತೆ ಇಡೀ ಕ್ರಿಕೆಟ್​ ಸಮೂಹವೇ ಐಪಿಎಲ್​ನಲ್ಲಿ ಆಡಲು ಕಾತರದಿಂದ ಕಾಯುತ್ತಿದೆ. ಇದೀಗ ಐಪಿಎಲ್​ ನಡೆಯುವುದು ಖಾತ್ರಿಯಾಗಿದ್ದು, ಯುಎಇಯಲ್ಲಿ ನಡೆಯಲಿರುವ ಲೀಗ್​ನಲ್ಲಿ ಆಡಲು ಕೊಹ್ಲಿ ಉತ್ಸುಕರಾಗಿದ್ದಾರೆ. ಆರ್​ಸಿಬಿ ತಂಡದ ನಾಯಕನಾಗಿರುವ ಕೊಹ್ಲಿ, ತಮ್ಮ ಇನ್​ಸ್ಟಾಗ್ರಾಂ ಪುಟದಲ್ಲಿ ಹಿಂದಿನ ಆವೃತ್ತಿಗಳ ಫೋಟೋ ಪ್ರಕಟಿಸಿ ಐಪಿಎಲ್​ ಎದುರು ನೋಡುತ್ತಿರುವುದಾಗಿ ಸಂದೇಶ ನೀಡಿದ್ದಾರೆ. ಮೂರು ಬಾರಿ ರನ್ನರ್​ಅಪ್​ ಆಗಿರುವ ಕೊಹ್ಲಿ ಪಡೆ, ಚೊಚ್ಚಲ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ.

ಹಿಂದಿನ ಆವೃತ್ತಿಗಳಲ್ಲಿ ನಿರಾಸೆ ಅನುಭವಿಸಿದ ಆರ್​ಸಿಬಿ, ಈ ಬಾರಿ ಕಪ್​ ಗೆಲ್ಲುವ ತಯಾರಿಯಲ್ಲಿದೆ. ಕ್ರಿಕೆಟ್​ ಪಂಡಿತರ ಲೆಕ್ಕಾಚಾರದನ್ವಯ ಕೊಹ್ಲಿ ಪಡೆಗೆ ಯುಎಇ ಸೂಕ್ತವಾಗಿ ಎಂಬ ವಿಶ್ಲೇಷಣೆಯೂ ನಡೆಯುತ್ತಿದೆ. 2008ರ ಚೊಚ್ಚಲ ಆವೃತ್ತಿಯಿಂದಲೂ ಕೊಹ್ಲಿ ಆರ್​ಸಿಬಿ ತಂಡದ ಭಾಗವಾಗಿದ್ದಾರೆ. 2008ರಲ್ಲಿ 12 ಲಕ್ಷ ರೂಪಾಯಿಗೆ 19 ವಯೋಮಿತಿ ಆಟಗಾರರ ಕೋಟಾದಡಿ ಕೊಹ್ಲಿ ಆರ್​ಸಿಬಿ ಸೇರಿದ್ದರು.. 2009, 2011 ಹಾಗೂ 2016ಲ್ಲಿ ಆರ್​ಸಿಬಿ ಫೈನಲ್ ನಲ್ಲಿ ಮುಗ್ಗರಿಸಿದೆ. ಕೊಹ್ಲಿ ಇದುವರೆಗೂ ಆರ್​ಸಿಬಿ ಪರ 177 ಪಂದ್ಯಗಳಿಂದ 5 ಶತಕ, 36 ಅರ್ಧಶತಕ ಸೇರಿದಂತೆ 5412 ರನ್​ ಪೇರಿಸಿದ್ದಾರೆ.

13ನೇ ಆವೃತ್ತಿಯ ಐಪಿಎಲ್​ ಸೆಪ್ಟೆಂಬರ್​ 19 ರಿಂದ ನವೆಂಬರ್​ 10ರವರೆಗೆ ಯುಎಇಯಲ್ಲಿ ನಿಗದಿಯಾಗಿದೆ. ಮಾರ್ಚ್​ 29 ರಂದು ನಿಗದಿಯಾಗಿದ್ದರೂ ಕರೊನಾ ವೈರಸ್​ ಭೀತಿಯಿಂದ ಮುಂದೂಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net