

IPL Jerseys: ವಾಂಖೆಡೆ ಕ್ರೀಡಾಂಗಣದಲ್ಲಿರುವ ಬಿಸಿಸಿಐನ ಸರಕುಗಳ ಮಳಿಗೆಯಿಂದ ಬರೋಬ್ಬರಿ 6.52 ಲಕ್ಷ ರೂ. ಮೌಲ್ಯದ 261 ಐಪಿಎಲ್ ತಂಡದ ಜೆರ್ಸಿಗಳನ್ನು ಕದ್ದ ಆರೋಪದ ಮೇಲೆ ಇದೀಗ ಮುಂಬೈ ಪೊಲೀಸರು ಸೆಕ್ಯೂರಿಟಿ ಮ್ಯಾನೇಜರ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಮೀರಾ ರಸ್ತೆ ಪೂರ್ವದ ನಿವಾಸಿ ಫಾರೂಕ್ ಅಸ್ಲಂ ಖಾನ್ (46) ಎಂಬಾತ ಆರೋಪಿಯಾಗಿದ್ದು, ಜೂನ್ 13ರಂದು ಅನುಮತಿಯಿಲ್ಲದೆ ಮಳಿಗೆಯೊಳಗೆ ಪ್ರವೇಶಿಸಿದ್ದಲ್ಲದೇ, ಅಲ್ಲಿದ್ದ ಐಪಿಎಲ್ ತಂಡಗಳ ಜರ್ಸಿಗಳನ್ನು ಕಳ್ಳತನ ಮಾಡಿರುವುದು ತಡವಾಗಿ ಬೆಳಕಿಗೆ ಬಂದಿದೆ. ಇತ್ತೀಚೆಗೆ ನಡೆದ ಲೆಕ್ಕಪರಿಶೋಧನೆಯಲ್ಲಿ ಸ್ಟಾಕ್ ಮಿಸ್ಸಿಂಗ್ ಆಗಿರುವುದು ಸ್ಪಷ್ಟವಾದ ಬೆನ್ನಲ್ಲೇ ಆರೋಪಿಗಾಗಿ ಬಲೆ ಬೀಸಲಾಯಿತು.
ಯಾರಿಗೂ ಒಳ ಪ್ರವೇಶಿಸಲು ಅನುಮತಿ ಇಲ್ಲದಿರುವಾಗ ಕಳ್ಳತನ ಹೇಗೆ ಸಾಧ್ಯವಾಯಿತು ಎಂದು ಮಳಿಗೆಗೆ ಅಳವಡಿಸಲಾಗಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಜೆರ್ಸಿಗಳನ್ನು ಕದ್ದದ್ದು ಯಾರು ಎಂಬುದು ಬಯಲಾಗಿದೆ. ಸೆಕ್ಯೂರಿಟಿ ಮ್ಯಾನೇಜರ್, ಜೆರ್ಸಿಗಳಿದ್ದ ಕಾರ್ಡ್ಬೋರ್ಡ್ ಪೆಟ್ಟಿಗೆಯನ್ನು ಹೊತ್ತೊಯ್ಯುತ್ತಿರುವುದು ದೃಶ್ಯದಲ್ಲಿ ಕಂಡುಬಂದಿದೆ. ಆರೋಪಿ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 306ರ ಅಡಿಯಲ್ಲಿ ಮುಂಬೈ ಪೊಲೀಸರು ಎಫ್ಐಆರ್ ದಾಖಲಿಸಿ, ತನಿಖೆಯನ್ನು ಕೈಗೊಂಡಿದ್ದಾರೆ,(ಏಜೆನ್ಸೀಸ್).