

ನವದೆಹಲಿ: ಕರೊನಾದಿಂದಾಗಿ ದಿಢೀರ್ ಸ್ಥಗಿತಗೊಂಡಿರುವ ಐಪಿಎಲ್ 14ನೇ ಆವೃತ್ತಿಯನ್ನು ಅಕ್ಟೋಬರ್-ನವೆಂಬರ್ನಲ್ಲಿ ಟಿ20 ವಿಶ್ವಕಪ್ ನಡೆದ ಬಳಿಕ ಪೂರ್ಣಗೊಳಿಸುವ ಸಾಧ್ಯತೆ ಕಾಣಿಸಿದೆ. ಆ ವೇಳೆಗೆ ಟಿ20 ವಿಶ್ವಕಪ್ಗಾಗಿ ವಿದೇಶಿ ಕ್ರಿಕೆಟಿಗರೂ ಭಾರತಕ್ಕೆ ಆಗಮಿಸಲಿರುವ ಕಾರಣ ಅವರನ್ನು ಬಳಿಕ ಐಪಿಎಲ್ನಲ್ಲೂ ಆಡುವಂತೆ ಮನವೊಲಿಸುವುದು ಸುಲಭ ಎಂದು ಬಿಸಿಸಿಐ ವಲಯದಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.
ಐಪಿಎಲ್ 14ನೇ ಆವೃತ್ತಿ 29 ಪಂದ್ಯಗಳು ನಡೆದ ಬಳಿಕ ಸ್ಥಗಿತಗೊಂಡಿದ್ದು, ಇನ್ನೂ 31 ಪಂದ್ಯಗಳು ಬಾಕಿ ಉಳಿದಿವೆ. ಇವುಗಳನ್ನು ಪೂರ್ಣಗೊಳಿಸಲು ಕನಿಷ್ಠ 4 ವಾರಗಳ ಕಾಲಾವಕಾಶ ಅಗತ್ಯವಾಗಿದೆ. ಭಾರತದ ಅಂತಾರಾಷ್ಟ್ರೀಯ ಕ್ರಿಕೆಟ್ ವೇಳಾಪಟ್ಟಿಯನ್ನು ಗಮನಿಸಿದಾಗ ಈ ಸಮಯವನ್ನು ಹೊಂದಿಕೆ ಮಾಡುವುದು ಕೂಡ ಕಠಿಣವೆನಿಸಿದೆ. ಇದಕ್ಕಾಗಿ ಡಿಸೆಂಬರ್ನಲ್ಲಿ ನಿಗದಿಯಾಗಿರುವ ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ ತವರಿನ ಸರಣಿಯ ವೇಳಾಪಟ್ಟಿಯನ್ನು ಸ್ವಲ್ಪ ಬದಲಾವಣೆ ಮಾಡಬೇಕಾಗುತ್ತದೆ.
ಟಿ20 ವಿಶ್ವಕಪ್ ನವೆಂಬರ್ 15ರಂದು ಮುಕ್ತಾಯಗೊಳ್ಳಲಿದ್ದು, ಬಳಿಕ ಐಪಿಎಲ್ ಆಯೋಜನೆಗೆ ಹೆಚ್ಚಿನ ಅವಕಾಶವಿದೆ. ಆ ವೇಳೆಗೆ ಭಾರತದಲ್ಲಿ ಕರೊನಾ ಪರಿಸ್ಥಿತಿಯೂ ಸುಧಾರಿಸುವ ನಿರೀಕ್ಷೆ ಇದೆ. ಅಲ್ಲದೆ ದೇಶದ ಬಹುತೇಕ ಜನರಿಗೆ ಲಸಿಕೀಕರಣ ಆ ಸಮಯಕ್ಕೆ ಪೂರ್ಣಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಭಾರತ ತಂಡದ 2021ರ ಕ್ರಿಕೆಟ್ ವೇಳಾಪಟ್ಟಿ:
ಜೂನ್ 18-22: ನ್ಯೂಜಿಲೆಂಡ್ ವಿರುದ್ಧ ಇಂಗ್ಲೆಂಡ್ನ ಸೌಥಾಂಪ್ಟನ್ನಲ್ಲಿ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್.
ಜುಲೈ-ಸೆಪ್ಟೆಂಬರ್: ಇಂಗ್ಲೆಂಡ್ನಲ್ಲಿ 5 ಪಂದ್ಯಗಳ ಟೆಸ್ಟ್ ಸರಣಿ.
ಅಕ್ಟೋಬರ್: ಭಾರತದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 3 ಏಕದಿನ, 3 ಟಿ20 ಪಂದ್ಯ.
ಅಕ್ಟೋಬರ್-ನವೆಂಬರ್: ಭಾರತದಲ್ಲಿ ಐಸಿಸಿ ಟಿ20 ವಿಶ್ವಕಪ್.
ನವೆಂಬರ್-ಡಿಸೆಂಬರ್: ಭಾರತದಲ್ಲಿ ನ್ಯೂಜಿಲೆಂಡ್ ವಿರುದ್ಧ 2 ಟೆಸ್ಟ್, 3 ಟಿ20 ಪಂದ್ಯ.
ಡಿಸೆಂಬರ್: ದಕ್ಷಿಣ ಆಫ್ರಿಕಾದಲ್ಲಿ 3 ಟೆಸ್ಟ್, 3 ಟಿ20.