

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (IPL) 2025 ರ ಮೆಗಾ ಹರಾಜಿಗಾಗಿ ಬಿಸಿಸಿಐ ರಿಟೇನ್ ಪಾಲಿಸಿಯನ್ನು ಅಂತಿಮಗೊಳಿಸಿರುವುದಾಗಿ ತಿಳಿದುಬಂದಿದೆ. ಒಂದು ಫ್ರಾಂಚೈಸಿ ಗರಿಷ್ಠ ಐದು ಆಟಗಾರರನ್ನು ರಿಟೇನ್ ಮಾಡಿಕೊಳ್ಳಬಹುದು ಎಂದು ವರದಿಯಾಗಿದೆ. ಈ ಬಾರಿ ರೈಟ್ ಟು ಮ್ಯಾಚ್ (ಆರ್‌ಟಿಎಂ) ಆಯ್ಕೆ ಇರುವುದಿಲ್ಲ. ಇನ್ನು ಕೆಲವೇ ದಿನಗಳಲ್ಲಿ ಈ ಬಗ್ಗೆ ಅಧಿಕೃತ ಘೋಷಣೆ ಹೊರಬೀಳಲಿದೆ.
ಎಲ್ಲ ತಂಡಗಳು ಐವರು ಆಟಗಾರರ ರಿಟೇನ್ ಪಟ್ಟಿಯನ್ನು ಸಿದ್ಧಪಡಿಸಿವೆ ಎಂದು ವರದಿಯಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ (CSK) ಕೂಡ ತಮ್ಮ ಪಟ್ಟಿಯನ್ನು ಸಿದ್ಧಪಡಿಸಿದೆಯಂತೆ. ಮಾಜಿ ನಾಯಕ ಎಂಎಸ್ ಧೋನಿ ವಿಚಾರದಲ್ಲಿ ಸಿಎಸ್‌ಕೆ ಫ್ರಾಂಚೈಸಿ ಸಂಚಲನಾತ್ಮಕ ನಿರ್ಧಾರ ಕೈಗೊಂಡಿದೆಯಂತೆ.
ಐಪಿಎಲ್ 2025ಕ್ಕೆ ಧೋನಿ ಲಭ್ಯವಾಗುತ್ತಾರಾ? ಅಥವಾ ಇಲ್ಲವಾ? ಎಂಬುದು ಗೊತ್ತಿಲ್ಲ. ಆದರೆ, ಈ ವಿಚಾರದಲ್ಲಿ ಫ್ರಾಂಚೈಸಿಗೆ ಸ್ಪಷ್ಟತೆ ಇಲ್ಲದಿದ್ದರೂ, ಅದು ರಿಟೇನ್ ಪಟ್ಟಿಯನ್ನು ಸಿದ್ಧಪಡಿಸಿದೆ. ಪಟ್ಟಿಯಲ್ಲಿ ಧೋನಿ ಹೆಸರು ಇದೆ ಎನ್ನಲಾಗುತ್ತಿದೆ. 2025ರ ಐಪಿಎಲ್‌ನಲ್ಲಿ ಮಹಿ ಆಡಲಿದ್ದಾರೆ ಎಂದು ಸಿಎಸ್‌ಕೆ ವಿಶ್ವಾಸ ವ್ಯಕ್ತಪಡಿಸಿದೆ. ಅದಕ್ಕಾಗಿಯೇ ಅವರ ಹೆಸರನ್ನು ಉಳಿಸಿಕೊಳ್ಳುವ ಪಟ್ಟಿಯಲ್ಲಿ ಸೇರಿಸಲಾಗಿದೆ. ನಿವೃತ್ತಿ ಘೋಷಿಸಿ 5 ವರ್ಷ ಕಳೆದಿರುವುದರಿಂದ ಧೋನಿಯನ್ನು ಕಡಿಮೆ ಮೊತ್ತಕ್ಕೆ ಉಳಿಸಿಕೊಳ್ಳುವ ಸಾಧ್ಯತೆಗಳಿವೆ.
ಎಂಎಸ್ ಧೋನಿ ಜೊತೆಗೆ ನಾಯಕ ರುತುರಾಜ್ ಗಾಯಕ್ವಾಡ್, ಆಲ್ ರೌಂಡರ್ ರವೀಂದ್ರ ಜಡೇಜಾ, ವೇಗಿ ಮತಿಶಾ ಪತಿರಾನಾ ಮತ್ತು ಆಲ್ ರೌಂಡರ್ ಶಿವಂ ದುಬೆ ಅವರನ್ನು ಸಿಎಸ್‌ಕೆ ಉಳಿಸಿಕೊಳ್ಳಲಿದೆಯಂತೆ. ಡೆವೊನ್ ಕಾನ್ವೆ ಮತ್ತು ರಚಿನ್ ರವೀಂದ್ರ ಕೂಡ ಚೆನ್ನೈ ತಂಡದ ಪ್ರಮುಖ ಆಟಗಾರರು ಎಂಬುದು ಗೊತ್ತೇ ಇದೆ. ಈ ಆಟಗಾರರನ್ನು ಹರಾಜಿನಲ್ಲಿ ಮರಳಿ ಪಡೆಯಲು ಸಿಎಸ್‌ಕೆ ಪ್ರಯತ್ನಿಸಲಿದೆ. ಒಂದು ವೇಳೆ ಧೋನಿ ಆಡದಿದ್ದರೆ, ಅವರ ಸ್ಥಾನದಲ್ಲಿ ಕಾನ್ವೇ ವಿಕೆಟ್ ಕೀಪರ್ ಆಗಿ ಮುಂದುವರಿಯುತ್ತಾರೆ. ಈ ವಿಚಾರದಲ್ಲಿ ಶೀಘ್ರವೇ ಸ್ಪಷ್ಟತೆ ಬರಲಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. (ಏಜೆನ್ಸೀಸ್)