AB de Villiers : ಐಪಿಎಲ್-2025 ಶನಿವಾರದಿಂದ (ಮಾರ್ಚ್ 22) ಅದ್ಧೂರಿಯಾಗಿ ಆರಂಭವಾಗಲಿದೆ. ಮೊದಲ ಪಂದ್ಯದಲ್ಲೇ ಹಾಲಿ ಚಾಂಪಿಯನ್ ಕೋಲ್ಕತ ನೈಟ್ ರೈಡರ್ಸ್ (ಕೆಕೆಆರ್) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮುಖಾಮುಖಿಯಾಗಲಿವೆ. ಅಂದಹಾಗೆ ಕಳೆದ ಐಪಿಎಲ್ ಸೀಸನ್ನಲ್ಲಿ ಸನ್ ರೈಸರ್ಸ್ ಹೈದರಾಬಾದ್ (ಎಸ್ಆರ್ಎಚ್) ತಂಡ, ಒಂದು ಪಂದ್ಯದಲ್ಲಿ 287/3 ರನ್ ಗಳಿಸಿತ್ತು. ಇದು ಐಪಿಎಲ್ ಇತಿಹಾಸದಲ್ಲೇ ಅತಿ ಹೆಚ್ಚು ಸ್ಕೋರ್ ಆಗಿದೆ. ಐಪಿಎಲ್ 2025ರಲ್ಲಿ ಈ ಸ್ಕೋರ್ 300ರ ಗಡಿ ದಾಟಲಿದೆ ಎಂದು ದಕ್ಷಿಣ ಆಫ್ರಿಕಾದ ಹಾಗೂ ಆರ್‌ಸಿಬಿಯ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ಭವಿಷ್ಯ ನುಡಿದಿದ್ದಾರೆ. ‘

ಇತ್ತೀಚಿನ ಸಂದರ್ಶನವೊಂದರಲ್ಲಿ, ಎಬಿ ಡಿವಿಲಿಯರ್ಸ್ ಆರ್‌ಸಿಬಿಯ ಹೊಸ ನಾಯಕ ರಜತ್ ಪಾಟಿದಾರ್ ಅವರಿಗೆ ಹಲವಾರು ಸಲಹೆಗಳನ್ನು ನೀಡಿದರು. ರಜತ್ ಪಾಟಿದಾರ್ ನಾಯಕನಾಗಿ ಯಾವುದೇ ಭಯವಿಲ್ಲದೆ ಧೈರ್ಯದಿಂದ ಮುಂದೆ ಸಾಗಬೇಕು. ಫಾಫ್ ಡುಪ್ಲೆಸಿಸ್ ಮತ್ತು ಕೊಹ್ಲಿಯಂತಹ ದಿಗ್ಗಜ ಆಟಗಾರರ ಹೆಜ್ಜೆಗಳನ್ನು ಅನುಸರಿಸಬೇಕು ಎಂದು ಎಬಿಡಿ ಹೇಳಿದರು.
ಆರ್‌ಸಿಬಿ ತಂಡ ಕೊಹ್ಲಿ ಸುತ್ತಲೂ ಸುತ್ತುತ್ತದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲವಾದರೂ, ರಜತ್ ತಮ್ಮ ತಂಡದ ಬಗ್ಗೆ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ನಾನು ತಂಡಕ್ಕೆ ನೀಡುತ್ತಿರುವ ಸೂಚನೆಗಳು ಸರಿಯಾಗಿವೆಯೇ ಎಂದು ಯೋಚಿಸುತ್ತಾ ಕುಳಿತುಕೊಳ್ಳಬಾರದು ಎಂದು ಎಬಿ ಡಿವಿಲಿಯರ್ಸ್ ಹೇಳಿದರು.
ಕೊಹ್ಲಿ ನಾಯಕನಾಗಿದ್ದರೆ ಈಗ ಏನು ಮಾಡುತ್ತಿದ್ದರು ಎಂದು ಯೋಚಿಸಿದರೆ ಅದು ಅಡ್ಡಿಯಾಗುತ್ತದೆ. ಅಂತಹ ಸವಾಲುಗಳನ್ನು ನಿವಾರಿಸಲು, ನೀವು ವಿಭಿನ್ನವಾಗಿ ಯೋಚಿಸಬೇಕು ಮತ್ತು ನಿಮ್ಮನ್ನು ನಾಯಕನಾಗಿ ಏಕೆ ಆಯ್ಕೆ ಮಾಡಲಾಯಿತು ಎಂಬುದರ ಕುರಿತು ಯೋಚಿಸಬೇಕು. ನಾಯಕನಾಗಿ ಆಯ್ಕೆಯಾದ ಹಿಂದೆ ಒಂದು ಒಳ್ಳೆಯ ಕಾರಣವಿದೆ ಎಂಬುದನ್ನು ಅರಿತುಕೊಳ್ಳಬೇಕು. ರಜತ್ ಪಾಟಿದಾರ್ ಅವರು ತಮ್ಮದೇಯಾದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದ ಎಬಿಡಿ, ಹಿರಿಯರಿಂದ ಸಲಹೆ ಪಡೆಯುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಿದರು.
ಐಪಿಎಲ್‌ನಲ್ಲಿನ ಇಂಪ್ಯಾಕ್ಟ್ ನಿಯಮವು ಆಟದ ಸ್ವರೂಪವನ್ನೇ ಬದಲಾಯಿಸಿದೆ ಮತ್ತು ಅಗ್ರ 3 ಬ್ಯಾಟ್ಸ್‌ಮನ್‌ಗಳು ನಿರಾತಂಕವಾಗಿ ಬ್ಯಾಟ್ ಬೀಸುವ ಅವಕಾಶಗಳನ್ನು ಹೆಚ್ಚಿಸಿದೆ. ಈ ನಿಯಮ ಒಂದು ರೀತಿಯಲ್ಲಿ ಸರಿಯಿಲ್ಲ ಎಂದು ತೋರುತ್ತದೆ. ಈ ಬಗ್ಗೆ ಸಾಕಷ್ಟು ಟೀಕೆಗಳು ಸಹ ಕೇಳಿಬಂದಿವೆ. ರಿಂಗ್ನ ಹೊರಗೆ ಕೇವಲ ಇಬ್ಬರು ಫೀಲ್ಡರ್ಗಳನ್ನು ಮಾತ್ರ ಅನುಮತಿಸುವಂತಹ ಫೀಲ್ಡಿಂಗ್ ನಿಯಮಗಳು, ಅಗ್ರ ಬ್ಯಾಟರ್ಗಳಿಗೆ ಹೆಚ್ಚಿನ ಸ್ವಾತಂತ್ರವನ್ನು ನೀಡುತ್ತದೆ. ಅದೇ ಸಮಯದಲ್ಲಿ ಬೌಲರ್ಗಳನ್ನು ಈ ನಿಯಮ ಇಕ್ಕಟ್ಟಿಗೆ ಸಿಲುಕಿಸುತ್ತದೆ. ಒಟ್ಟಾರೆ ಬ್ಯಾಟ್ಸ್ಮನ್ಗಳಿಗೆ ಅನುಕೂಲವಾಗಿರುವುದರಿಂದ ಈ ಬಾರಿಯ ಐಪಿಎಲ್ ಸೀಸನ್ನಲ್ಲಿ 300ಕ್ಕೂ ಹೆಚ್ಚು ಸ್ಕೋರ್‌ಗಳು ದಾಖಲಾಗುತ್ತವೆ ಎಂದು ಎಬಿಡಿ ಹೇಳಿದ್ದಾರೆ.
ವಿಶ್ವದ ಶ್ರೀಮಂತ ಟಿ20 ಲೀಗ್ ಎನಿಸಿರುವ ಐಪಿಎಲ್ 18ನೇ ಆವೃತ್ತಿಗೆ ಕ್ಷಣಗಣನೆ ಶುರುವಾಗಿದೆ. ಮಾರ್ಚ್ 22ರಂದು ಹಾಲಿ ಚಾಂಪಿಯನ್ ಕೆಕೆಆರ್ ಮತ್ತು ಆರ್‌ಸಿಬಿ ತಂಡಗಳ ಮುಖಾಮುಖಿಯೊಂದಿಗೆ ಐಪಿಎಲ್ ಹಬ್ಬಕ್ಕೆ ಚಾಲನೆ ಸಿಗಲಿದೆ. ಮೇ 25ಕ್ಕೆ ಫೈನಲ್ ಪಂದ್ಯದೊಂದಿಗೆ 18ನೇ ಆವೃತ್ತಿ ಮುಕ್ತಾಯವಾಗಲಿದೆ. (ಏಜೆನ್ಸೀಸ್)
ಐಪಿಎಲ್ ಇತಿಹಾಸದಲ್ಲೇ ಗರಿಷ್ಠ ವೈಯಕ್ತಿಕ ಸ್ಕೋರ್ ಗಳಿಸಿದ ಆಟಗಾರರಿವರು…ಆರ್ಸಿಬಿಯೇ ಮೇಲುಗೈ! IPL History