

IPL Mega Auction : ಇಂದು ಫಿಲಿಪ್ ಹ್ಯೂಸ್ ಬದುಕಿದ್ದಿದ್ದರೆ ಐಪಿಎಲ್ ಹರಾಜಿನಲ್ಲಿ ಕೋಟಿ ಕೋಟಿ ಲೂಟಿ ಮಾಡುತ್ತಿದ್ದರು. ಆದರೆ ಅವರೀಗ ಈ ಜಗತ್ತಿನಲ್ಲಿಲ್ಲ ಎಂದು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಹಾಗೂ ಮಾಜಿ ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್ ಅವರು ಭಾವುಕರಾದರು.
ಇತ್ತೀಚೆಗೆ ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಐಪಿಎಲ್-2025 ಮೆಗಾ ಹರಾಜು ನಡೆದಿರುವುದು ಗೊತ್ತೇ ಇದೆ. ಕನಿಷ್ಠ 2 ಕೋಟಿ ರೂ. ಮೂಲ ಬೆಲೆಯೊಂದಿಗೆ ಹರಾಜಿಗೆ ಬಂದ ಟೀಮ್ ಇಂಡಿಯಾ ಸ್ಟಾರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಬರೋಬ್ಬರಿ 27 ಕೋಟಿ ರೂ.ಗೆ ಲಖನೌ ಸೂಪರ್ ಜೈಂಟ್ಸ್ ತಂಡದ ಪಾಲಾದರು.
ರಿಷಭ್ ಪಂತ್ ಖರೀದಿ ಮಾಡಲು ಡೆಲ್ಲಿ ಕ್ಯಾಪಿಟಲ್ಸ್ ಜೊತೆಗೆ ಸನ್‌ರೈಸರ್ಸ್ ಹೈದರಾಬಾದ್ ಕೂಡ ಸ್ಪರ್ಧೆಗೆ ಬಂದಿತ್ತು. ಅಂತಿಮವಾಗಿ ಲಖನೌ ಸೂಪರ್‌ಜೈಂಟ್ಸ್ ಭಾರಿ ಬೆಲೆ ನೀಡಿ ತಮ್ಮ ತೆಕ್ಕೆಗೆ ಸೆಳೆದುಕೊಂಡಿತು. ಅದಕ್ಕೂ ಮುನ್ನ ಪಂತ್ ಹರಾಜಿನಲ್ಲಿ 20 ಕೋಟಿ ರೂ. ತಲುಪಿದಾಗ ರೈಟ್ ಟು ಮ್ಯಾಚ್ ಕಾರ್ಡ್ ಬಳಸಿ ವಾಪಸ್ ತಮ್ಮ ತಂಡಕ್ಕೆ ಪಡೆಯಲು ಡೆಲ್ಲಿ ಯತ್ನಿಸಿತು. ಆದರೆ, ಲಖನೌ ಸೂಪರ್ಜೈಂಟ್ ಏಕಾಏಕಿ ಏಳು ಕೋಟಿ ಹೆಚ್ಚಿಸುವ ಮೂಲಕ 27 ಕೋಟಿ ರೂ.ಗೆ ಪಂತ್ ಅವರನ್ನು ಖರೀದಿ ಮಾಡಿತು.
27 ಕೋಟಿ ರೂ.ಗೆ ಬಿಕರಿಯಾಗುವ ಮೂಲಕ ಪಂತ್, ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದಾರೆ. ಈ ಹಿನ್ನಲೆಯಲ್ಲಿ ಲಖನೌ ತಂಡದ ಮುಖ್ಯ ಕೋಚ್ ಹಾಗೂ ಆಸೀಸ್ ಮಾಜಿ ಕ್ರಿಕೆಟಿಗ ಜಸ್ಟಿನ್ ಲ್ಯಾಂಗರ್ 'ದಿ ವೆಸ್ಟ್ ಆಸ್ಟ್ರೇಲಿಯನ್'ಗೆ ಬರೆದ ಅಂಕಣದಲ್ಲಿ ಕುತೂಹಲಕಾರಿ ಕಾಮೆಂಟ್ ಮಾಡಿದ್ದಾರೆ.
ರಿಷಭ್ ಪಂತ್ ಅವರು ಐಪಿಎಲ್‌ನಲ್ಲಿ ಅತಿ ಹೆಚ್ಚು ಬೆಲೆಯ ಆಟಗಾರನಾಗಿ ಇತಿಹಾಸವನ್ನು ಸೃಷ್ಟಿಸಿದ್ದಾರೆ. ನಮ್ಮ ಫ್ರಾಂಚೈಸಿ ಲಖನೌ ಸೂಪರ್‌ಜೈಂಟ್ಸ್ ಅವರ ಸೇವೆಗಳಿಗಾಗಿ ಐದು ಮಿಲಿಯನ್ ಡಾಲರ್‌ಗಳನ್ನು ಖರ್ಚು ಮಾಡಿದೆ. ಇಂದು ಹ್ಯೂಸ್ ಬದುಕಿದ್ದರೆ ಐಪಿಎಲ್ ಹರಾಜಿನಲ್ಲಿ ಭಾರಿ ಬೆಲೆ ಪಡೆಯುತ್ತಿದ್ದರು. ಇದಕ್ಕೆ ಅವರ ಡೈನಾಮಿಕ್ ಬ್ಯಾಟಿಂಗ್ ಮಾತ್ರ ಕಾರಣವಲ್ಲ, ಅವರ ಶಕ್ತಿಯೂ ಕಾರಣ. ಆದರೆ, ದುಃಖದ ಸಂಗತಿಯೆಂದರೆ ಅವರೀಗ ನಮ್ಮೊಂದಿಗಿಲ್ಲ. ಅವರು ಎಂದಿಗೂ ಹರಾಜಿಗೆ ಬರುವುದಿಲ್ಲ ಎಂದು ದಿವಂಗತ ಆಸೀಸ್ ಸ್ಟಾರ್ ಫಿಲಿಪ್ ಹ್ಯೂಸ್ ಅವರನ್ನು ಲ್ಯಾಂಗರ್ ನೆನಪಿಸಿಕೊಂಡರು.
ಅದೇ ರೀತಿ ಲ್ಯಾಂಗರ್ ಅವರು ಪಂತ್ ಅವರ ಕ್ರಿಕೆಟ್ ಕೌಶಲ್ಯವನ್ನು ಶ್ಲಾಘಿಸಿದ್ದಾರೆ. ಅಂದಹಾಗೆ 2014ರಲ್ಲಿ, ಫಿಲಿಪ್ ಹ್ಯೂಸ್ ಶಾಶ್ವತವಾಗಿ ಇಹಲೋಕ ತ್ಯಜಿಸಿದರು. ಆಸೀಸ್ ದೇಶೀಯ ಟೂರ್ನಿಯ ಶೆಫೀಲ್ಡ್ ಶೀಲ್ಡ್ ಅಂಗವಾಗಿ ನ್ಯೂ ಸೌತ್ ವೇಲ್ಸ್ ಮತ್ತು ಸೌತ್ ಆಸ್ಟ್ರೇಲಿಯಾ ನಡುವಿನ ಪಂದ್ಯದ ವೇಳೆ ಈ ದಾರುಣ ಘಟನೆ ನಡೆಯಿತು. ಆಸ್ಟ್ರೇಲಿಯದ ಬೌಲರ್ ಸೀನ್ ಅಬಾಟ್ ಅವರು ವೇಗವಾಗಿ ಎಸೆದ ಚೆಂಡು ಹ್ಯೂಸ್ ಕುತ್ತಿಗೆಗೆ ಬಲವಾಗಿ ಬಡಿದು ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟರು. ನವೆಂಬರ್ 27ರಂದು ಹ್ಯೂಸ್ ಅವರ 10ನೇವರ್ಷದ ಸ್ಮರಣೆ ಹಿನ್ನೆಲೆಯಲ್ಲಿ ಜಸ್ಟಿನ್ ಲ್ಯಾಂಗರ್ ಅವರು ಹ್ಯೂಸ್ ಬಗ್ಗೆ ಭಾವುಕರಾಗಿ ಮಾತನಾಡಿದರು.
ನ್ಯೂ ಸೌತ್ ವೇಲ್ಸ್‌ನಲ್ಲಿ ಜನಿಸಿದ ಹ್ಯೂಸ್ 2009ರಲ್ಲಿ ಆಸ್ಟ್ರೇಲಿಯಾಕ್ಕೆ ಪಾದಾರ್ಪಣೆ ಮಾಡಿದರು. ತಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ 26 ಟೆಸ್ಟ್ ಮತ್ತು 25 ಏಕದಿನ ಪಂದ್ಯಗಳನ್ನು ಆಡಿರುವ ಈ ಎಡಗೈ ಬ್ಯಾಟ್ಸ್‌ಮನ್, ಆ ಸ್ವರೂಪಗಳಲ್ಲಿ ಕ್ರಮವಾಗಿ 1535 ಮತ್ತು 826 ರನ್ ಗಳಿಸಿದರು. ತಮ್ಮ 26ನೇ ಹುಟ್ಟುಹಬ್ಬದ ಮೂರು ದಿನಗಳ ಮೊದಲು ಕ್ರಿಕೆಟ್ ಆಡುತ್ತಲೇ ಕೊನೆಯುಸಿರೆಳೆದರು. (ಏಜೆನ್ಸೀಸ್)