ಸಾಯಲು ಹೊರಟಿದ್ದ ನನ್ನನ್ನು ಅಂದು ಕಾಪಾಡಿದ್ದೆ ನಯನತಾರಾ! ಖ್ಯಾತ ನಟನ ಹೇಳಿಕೆ ವೈರಲ್​ | Nayanthara

Nayanthara
Published on

Nayanthara : ಲೇಡಿ ಸೂಪರ್​​ಸ್ಟಾರ್​ ಎಂದೇ ಖ್ಯಾತಿ ಪಡೆದಿರುವ ನಯನತಾರಾ ಅವರ ಜೀವನಾಧಾರಿತ “ನಯನತಾರಾ: ಬಿಯಾಂಡ್ ದಿ ಫೇರಿ ಟೇಲ್’ ಹೆಸರಿನ ಸಾಕ್ಷ್ಯಚಿತ್ರ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು ಎಲ್ಲರಿಗೂ ಗೊತ್ತೇ ಇದೆ. ಬಿಡುಗಡೆಗೂ ಮುನ್ನವೇ ಈ ಸಾಕ್ಷ್ಯಚಿತ್ರ ವಿವಾದಕ್ಕೀಡಾಯಿತು. ಅದು ಈಗಲೂ ಮುಂದುವರಿದಿದೆ. ಧನುಷ್ ನಿರ್ಮಾಣದ ನಾನೂಮ್​ ರೌಡಿ ದಾನ್ ಚಿತ್ರದ ದೃಶ್ಯಗಳನ್ನು ಅನುಮತಿ ಇಲ್ಲದೆ ಬಳಸಿಕೊಳ್ಳಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ನಯನತಾರಾ ಕೂಡ ಸುದೀರ್ಘ ಪತ್ರದ ಬರೆದು ನಟ ಧನುಷ್​ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಸಾಕ್ಷ್ಯಚಿತ್ರ ಬಿಡುಗಡೆ ಬಳಿಕ ಧನುಷ್​ ಹೈಕೋರ್ಟ್​ ಮೆಟ್ಟಿಲೇರಿದ್ದು, ನಯನತಾರಾ ಮತ್ತು ಪತಿ ವಿಘ್ನೇಶ್​ ಶಿವನ್​ಗೆ ನೋಟಿಸ್ ನೀಡಲಾಗಿದೆ. ಇದಕ್ಕೆ ನಯನತಾರಾ ಪರ ವಕೀಲರು ಸಹ ಖಡಕ್​ ಉತ್ತರ ನೀಡಿದ್ದಾರೆ. ಸದ್ಯ, ಈ ವಿವಾದ ನ್ಯಾಯಾಲಯದಲ್ಲಿದ್ದು, ವಿಚಾರಣೆ ನಡೆಯುತ್ತಿದೆ.

ಈಗಲೂ ಸಾಮಾಜಿಕ ಜಾಲತಾಣದಲ್ಲಿ ನಯನತಾರಾ ಪರ ಮತ್ತು ವಿರುದ್ಧ ಹಲವು ಕಾಮೆಂಟ್‌ಗಳು ಹರಿದಾಡುತ್ತಿವೆ. ಇದೇ ಸಂದರ್ಭದಲ್ಲಿ ಧನುಷ್ ವಿಚ್ಛೇದನದ ಸುದ್ದಿಯು ಹೊರಬಂದಿದೆ. ಅದೇನೆಂದರೆ, ನ್ಯಾಯಾಲಯ ಸ್ಟಾರ್​ ದಂಪತಿಯ ಡಿವೋರ್ಸ್​ ನಿರ್ಧಾರ ಎತ್ತಿಹಿಡಿದಿದೆ. ಇದರ ಬೆನ್ನಲ್ಲೇ ನಯನತಾರಾ ಅವರು ಜಾಲತಾಣದಲ್ಲಿ ಹಾಕಿದ್ದ ಒಂದು ಪೋಸ್ಟ್​ ವಿವಾದಕ್ಕೊಳಗಾಯಿತು. ಯಾರದ್ದಾದರೂ ಜೀವನವನ್ನು ಹಾಳು ಮಾಡಿದರೆ ಅದನ್ನು ಸಾಲವೆಂದು ಪರಿಗಣಿಸಿ, ಅದು ಬಡ್ಡಿಯೊಂದಿಗೆ ಹಿಂತಿರುಗುತ್ತದೆ ಎಂದು ಹೇಳಿದ್ದರು. ಇದು ಕೂಡ ಬಹಳ ಚರ್ಚೆಗೆ ಗ್ರಾಸವಾಗಿದೆ. ಈ ವಿವಾದಗಳಿಂದ ನಯನತಾರಾ ಸುದ್ದಿಯಲ್ಲಿದ್ದಾರೆ. ಧನುಷ್​ ಅಭಿಮಾನಿಗಳು ನಯನತಾರಾ ವಿರುದ್ಧ ಮುಗಿಬಿದ್ದಿದ್ದಾರೆ. ಕೆಟ್ಟ ಕಾಮೆಂಟ್​ಗಳ ಮೂಲಕ ನಿಂದಿಸುತ್ತಿದ್ದಾರೆ.

ಇದೆಲ್ಲದರ ನಡುವೆ ನಯನತಾರಾ ಬಗ್ಗೆ ಕಾಲಿವುಡ್​ ಖ್ಯಾತ ನಟ ತಂಬಿರಾಮಯ್ಯ ಹೇಳಿದ ಮಾತುಗಳು ಗಮನ ಸೆಳೆಯುತ್ತಿವೆ. ತಂಬಿರಾಮಯ್ಯ ಅವರ ತಾಯಿ ತೀರಿಕೊಂಡಾಗ ನಯನತಾರಾ ಕರೆ ಮಾಡಿದ್ದರ ಬಗ್ಗೆ ತಂಬಿರಾಮಯ್ಯ ಮಾತನಾಡಿದ್ದಾರೆ. ತಾಯಿ ತೀರಿಕೊಂಡಾಗ ತಂಬಿರಾಮಯ್ಯ ಅವರು ಖಿನ್ನತೆಗೆ ಜಾರಿದ್ದರು. ತಾಯಿಯೇ ಅವರಿಗೆ ಸರ್ವಸ್ವ ಆಗಿದ್ದರು. ಹೀಗಾಗಿ ತೀವ್ರ ನೋವು ಅನುಭವಿಸಿದ್ದರು. ಆ ಸಂದರ್ಭದಲ್ಲಿ ಮಗಳ ಮದುವೆ ಮಾತ್ರ ನಡೆದಿತ್ತು. ಮಗನಿಗೆ ಇನ್ನು ಮದುವೆ ಆಗಿರಲಿಲ್ಲ.

ತಾಯಿಯ ಸಾವಿನ ನೋವಿನಿಂದ ತಂಬಿರಾಮಯ್ಯ ಅವರು ಆತ್ಮಹತ್ಯೆಯ ಬಗ್ಗೆ ಯೋಚಿಸಿದ್ದರಂತೆ. ಅದೇ ಸಮಯದಲ್ಲಿ ಅವರ ಕೈಯಲ್ಲಿ ನಾಲ್ಕ ಸಿನಿಮಾಗಳಿದ್ದವು. ತನ್ನ ಸಾವು ನಿರ್ಮಾಪಕರಿಗೆ ನಷ್ಟವಾಗಲಿದೆ ಎಂದು ಅವರು ಭಾವಿಸಿದ್ದರು. ನಯನತಾರಾ ಜೊತೆ ಡೋರಾ ಸಿನಿಮಾ ಮಾಡುತ್ತಿದ್ದರು. ಇದೇ ಸಂದರ್ಭದಲ್ಲಿ ನಯನತಾರಾ ಅವರು ತಂಬಿರಾಮಯ್ಯ ಅವರಿಗೆ ಕರೆ ಮಾಡುತ್ತಾರೆ. ನೋವಿನಲ್ಲಿದ್ದ ಅವರಿಗೆ ಧೈರ್ಯ ತುಂಬುತ್ತಾರೆ. ನಯನತಾರಾ ಆಡಿದ ಮಾತುಗಳಿಂದ ತನಗೆ ಸತ್ಯ ಅರಿವಾಯಿತು ಎಂದು ತಂಬಿರಾಮಯ್ಯ ಹೇಳಿದ್ದಾರೆ. ಇದಾದ ಬಳಿಕ ಅವರು ಆತ್ಮಹತ್ಯೆಯಂತಹ ಆಲೋಚನೆಗಳನ್ನು ಕೈಬಿಟ್ಟಿದ್ದಾಗಿ ತಿಳಿಸಿದ್ದಾರೆ.

Nayanthara

ಒಂದು ವೇಳೆ ನಯನತಾರಾ ಅವರು ಸರಿಯಾದ ಸಮಯಕ್ಕೆ ಕರೆ ಮಾಡದೇ ಇದ್ದಿದ್ದರೆ ನನಗೆ ಏನಾಗುತ್ತಿತ್ತು ಎಂದು ಊಹಿಸಲೂ ಸಾಧ್ಯವಿಲ್ಲ ಎಂದು ತಂಬಿರಾಮಯ್ಯ ಹೇಳಿದ್ದಾರೆ. ಅಂದು ನಾನು ತಪ್ಪು ನಿರ್ಧಾರ ತೆಗೆದುಕೊಂಡಿದ್ದರೆ ಮಗನ ಮದುವೆಯನ್ನು ನೋಡುತ್ತಿರಲಿಲ್ಲ. ಈ ಜಗತ್ತಿನಲ್ಲಿ ಪರಿಹರಿಸಲಾಗದ ಸಮಸ್ಯೆಗಳು ಯಾವುದೂ ಇಲ್ಲ. ಬಿಕ್ಕಟ್ಟುಗಳು ಬಂದಾಗ ಕೆಲವೊಬ್ಬರ ಸಮಸ್ಯೆಗಳ ಬಗ್ಗೆ ಯೋಚಿಸಿದಾಗ ನಮ್ಮದು ಅವರ ಮುಂದೆ ದೊಡ್ಡ ಸಮಸ್ಯೆಯೇ ಅಲ್ಲ ಎಂಬುದು ಅರ್ಥವಾಗುತ್ತದೆ ಎಂದು ತಂಬಿರಾಮಯ್ಯ ಹೇಳಿದರು.

ಧನುಷ್​-ನಯನತಾರಾ ವಿವಾದ

ಅಂದಹಾಗೆ ನಟಿ ನಯನತಾರಾ ಇತ್ತೀಚೆಗಷ್ಟೆ ನಟ ಧನುಷ್ ವಿರುದ್ಧ ಮೂರು ಪುಟಗಳ ಓಪನ್ ಲೆಟರ್ ಬರೆದು ವಿವಾದಕ್ಕೀಡಾಗಿದ್ದರು. ನಯನತಾರಾ ಅವರು ಜೀವನದ ಕುರಿತ ‘ಬಿಯಾಂಡ್ ದ ಫೈರಿ ಟೇಲ್’ ಡಾಕ್ಯುಮೆಂಟರಿಯಲ್ಲಿ ಧನುಷ್ ನಿರ್ಮಾಣದ, ನಟಿ ಅಭಿನಯಿಸಿದ್ದ ‘ನಾನುಮ್ ರೌಡಿ ದಾನ್’ ಚಿತ್ರದ ಕೆಲ ದೃಶ್ಯಾವಳಿಗಳನ್ನು ಬಳಸಿಕೊಳ್ಳಲು ಅನುಮತಿ ಕೋರಿದ್ದರು. ಧನುಷ್ ಅದಕ್ಕೆ ಒಪ್ಪಿರಲಿಲ್ಲ. ಆದರೂ, ನಯನತಾರಾ ಈ ಸಾಕ್ಷ್ಯಚಿತ್ರದ ಟ್ರೇಲರ್‌ನಲ್ಲಿ ‘ನಾನುಮ್ ರೌಡಿ ದಾನ್’ ಚಿತ್ರದ 3 ಸೆಕೆಂಡ್‌ಗಳ ದೃಶ್ಯ ಬಳಸಿದ್ದ ಕಾರಣ, ಧನುಷ್ 10 ಕೋಟಿ ರೂ. ನಷ್ಟ ಭರಿಸುವಂತೆ ನೋಟಿಸ್ ನೀಡಿದ್ದರು. ಅದಕ್ಕೆ ಕೆಂಡಾಮಂಡಲವಾದ ನಯನತಾರಾ, ಧನುಷ್ ವಿರುದ್ಧ ಜಾಲತಾಣದಲ್ಲಿ ಕಿಡಿಕಾರಿದ್ದರು. ಆದರೂ ಸುಮ್ಮನಿರದ ಧನುಷ್ ಮತ್ತೊಮ್ಮೆ ನಯನತಾರಾ ವಿರುದ್ಧ ತಿರುಗಿಬಿದ್ದಿದ್ದು, 24 ಗಂಟೆಯೊಳಗೆ ‘ನಾನುಮ್ ರೌಡಿ ದಾನ್’ ಚಿತ್ರದ 3 ಸೆಕೆಂಡ್‌ಗಳ ದೃಶ್ಯವನ್ನು ತೆಗೆದುಹಾಕಬೇಕು ಇಲ್ಲವಾದರೆ, ಕಾನೂನು ಕ್ರಮ ಜರುಗಿಸಲಾಗುವುದು ಎಂದು ಲಾಯರ್ ನೋಟಿಸ್ ನೀಡಿದ್ದರು. ಆದರೆ, ಇದಕ್ಕೆ ನಯನತಾರಾ ಕ್ಯಾರೆ ಎನ್ನಲಿಲ್ಲ. ಇದೀಗ ಧನುಷ್​ ತಮ್ಮ ವಕೀಲರ ಮೂಲಕ ಹೈಕೋರ್ಟ್​ ಮೆಟ್ಟಿಲೇರಿದ್ದು, ನಯನತಾರಾಗೆ ನೋಟಿಸ್​ ಕಳುಹಿಸಿದ್ದಾರೆ. ಸದ್ಯ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net