

Nayanthara : ಲೇಡಿ ಸೂಪರ್ಸ್ಟಾರ್ ಎಂದೇ ಖ್ಯಾತಿ ಪಡೆದಿರುವ ನಯನತಾರಾ ಅವರ ಜೀವನಾಧಾರಿತ "ನಯನತಾರಾ: ಬಿಯಾಂಡ್ ದಿ ಫೇರಿ ಟೇಲ್’ ಹೆಸರಿನ ಸಾಕ್ಷ್ಯಚಿತ್ರ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು ಎಲ್ಲರಿಗೂ ಗೊತ್ತೇ ಇದೆ. ಬಿಡುಗಡೆಗೂ ಮುನ್ನವೇ ಸಾಕ್ಷ್ಯಚಿತ್ರ ವಿವಾದಕ್ಕೀಡಾಗಿತ್ತು. ಧನುಷ್ ನಿರ್ಮಾಣದ ನಾನೂಮ್ ರೌಡಿ ಥಾನ್ ಚಿತ್ರದ ದೃಶ್ಯಗಳನ್ನು ಅನುಮತಿ ಇಲ್ಲದೆ ಬಳಸಿಕೊಳ್ಳಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಇದಕ್ಕೆ ನಯನತಾರಾ ಕೂಡ ಸುದೀರ್ಘ ಪತ್ರ ಬರೆದು ನಟ ಧನುಷ್ ವಿರುದ್ಧ ಗಂಭೀರ ಆರೋಪ ಮಾಡಿದರು. ಸಾಕ್ಷ್ಯಚಿತ್ರ ಬಿಡುಗಡೆ ಬಳಿಕ ಧನುಷ್ ಹೈಕೋರ್ಟ್ ಮೆಟ್ಟಿಲೇರಿದ್ದು, ನಯನತಾರಾ ಮತ್ತು ಪತಿ ವಿಘ್ನೇಶ್ ಶಿವನ್ಗೆ ನೋಟಿಸ್ ನೀಡಲಾಗಿದೆ. ಇದೀಗ ಈ ಪ್ರಕರಣಕ್ಕೆ ಮಲಯಾಳಂ ಬ್ಯೂಟಿ ಪಾರ್ವತಿ ಥಿರುವೊತ್ತು ಹೊಸ ತಿರುವು ನೀಡಿದ್ದಾರೆ.
ಇತ್ತೀಚೆಗೆ ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿದ ಪಾರ್ವತಿ, ನಯನತಾರಾ ಅವರ ಪತ್ರವು ನಿಜವಾದ ಮತ್ತು ಉದ್ದೇಶಪೂರ್ವಕವಾಗಿದೆ. ನಾನು ಆಕೆಯನ್ನು ಬೆಂಬಲಿಸುತ್ತೇನೆ. ಆಕೆ ಸ್ವಯಂ ನಿರ್ಮಿತ ಮಹಿಳೆ ಮತ್ತು ಆಕೆಯ ಮಾತುಗಳು ತೂಕವನ್ನು ಹೊಂದಿವೆ. ನಾನು ಅವರ ಬಹಿರಂಗ ಪತ್ರವನ್ನು ಓದಿದಾಗ, ಆಕೆಯೊಂದಿಗೆ ನಿಲ್ಲುವುದು ಮುಖ್ಯವೆಂದು ನಾನು ಭಾವಿಸಿದೆ. ಇದು ನಿಜವಾದ ಸಮಸ್ಯೆಯಾಗಿದೆ ಮತ್ತು ನಮ್ಮಲ್ಲಿ ಅನೇಕರು ಅವಳ ಮಾತುಗಳಲ್ಲಿ ಸತ್ಯವನ್ನು ನಂಬುತ್ತಾರೆ ಎನ್ನುವ ಮೂಲಕ ಧನುಷ್ ವಿರುದ್ಧ ನಿಂತು ನಯನಾಗೆ ಬೆಂಬಲ ನೀಡುತ್ತಿದ್ದಾರೆ ಎಂದಿದ್ದಾರೆ. ಈ ಮೂಲಕ ಪಾರ್ವತಿ ಹೊಸ ಟ್ವಿಸ್ಟ್ ನೀಡಿದ್ದಾರೆ.
ಸತ್ಯ ಮಾತನಾಡಿದರೆ ಪ್ರತ್ಯೇಕವಾಗಿ ಇಡುತ್ತಾರೆ ಎಂಬುದು ನನಗೆ ತಿಳಿದಿದೆ. ಆದರೆ, ಪ್ರತ್ಯೇಕವಾಗಿರುವುದು ಹೇಗೆ ಎಂದು ನನಗೆ ತಿಳಿದಿದೆ. ಬೆಂಬಲವು ದೊಡ್ಡ ಬದಲಾವಣೆ ಉಂಟುಮಾಡಬಹುದು ಮತ್ತು ಅದಕ್ಕಾಗಿಯೇ ನಾನು ಯಾವಾಗಲೂ ಸತ್ಯವನ್ನು ಮಾತನಾಡುವವರ ಜೊತೆ ನಿಲ್ಲುತ್ತೇನೆ ಎಂದರು.
ಪಾರ್ವತಿ ಅವರ ನಿಲುವು ಸದ್ಯ ನಡೆಯುತ್ತಿರುವ ಹೋರಾಟಕ್ಕೆ ಮತ್ತಷ್ಟು ಬೆಂಕಿಯನ್ನು ಹೊತ್ತಿಸಿದೆ. ಹೀಗಾಗಿ ಧನುಷ್ ಅಭಿಮಾನಿಗಳು ಪಾರ್ವತಿ ವಿರುದ್ಧವೂ ಹರಿಹಾಯ್ದಿದ್ದಾರೆ. ಧನುಷ್ ಜೊತೆ ಕೆಲಸ ಮಾಡಿ ಅವರ ಸಿನಿಮಾಗಳ ಮೂಲಕ ಯಶಸ್ಸು ಕಂಡ ನಟಿಯರು ಈಗ ಅವರ ವಿರುದ್ಧ ತಿರುಗಿ ಬೀಳುತ್ತಿದ್ದಾರೆ ಎಂಬುದು ಅಭಿಮಾನಿಗಳ ವಾದವಾಗಿದೆ.
ಅಂದಹಾಗೆ ಧನುಷ್ ಮತ್ತು ಪಾರ್ವತಿ, ಮರಿಯನ್ ಹೆಸರಿನ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಪಾರ್ವತಿ ಅವರು ಯಾವಾಗಲೂ ಉದ್ಯಮದಲ್ಲಿ ಮಹಿಳಾ ಸುರಕ್ಷತೆ ಸಮಸ್ಯೆಗಳನ್ನು ಎದುರಿಸುವವರಿಗೆ ಬೆಂಬಲವಾಗಿ ನಿಲ್ಲುತ್ತಾರೆ. ಇತ್ತೀಚೆಗೆ ಮಲಯಾಳಂ ಚಲನಚಿತ್ರೋದ್ಯಮದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ ಹೇಮಾ ಸಮಿತಿಯ ಬಗ್ಗೆ ತನ್ನ ಅಭಿಪ್ರಾಯಗಳ ಬಗ್ಗೆ ತುಂಬಾ ಧೈರ್ಯವಾಗಿ ಧ್ವನಿ ಎತ್ತುವ ಮೂಲಕ ಪಾರ್ವತಿ ಗಮನ ಸೆಳೆದಿದ್ದರು.
ಅಂದಹಾಗೆ ನಟಿ ನಯನತಾರಾ ಇತ್ತೀಚೆಗಷ್ಟೆ ನಟ ಧನುಷ್ ವಿರುದ್ಧ ಮೂರು ಪುಟಗಳ ಓಪನ್ ಲೆಟರ್ ಬರೆದು ವಿವಾದಕ್ಕೀಡಾಗಿದ್ದರು. ನಯನತಾರಾ ಅವರು ಜೀವನದ ಕುರಿತ ‘ಬಿಯಾಂಡ್ ದ ಫೈರಿ ಟೇಲ್’ ಡಾಕ್ಯುಮೆಂಟರಿಯಲ್ಲಿ ಧನುಷ್ ನಿರ್ಮಾಣದ, ನಟಿ ಅಭಿನಯಿಸಿದ್ದ ‘ನಾನುಮ್ ರೌಡಿ ದಾನ್’ ಚಿತ್ರದ ಕೆಲ ದೃಶ್ಯಾವಳಿಗಳನ್ನು ಬಳಸಿಕೊಳ್ಳಲು ಅನುಮತಿ ಕೋರಿದ್ದರು. ಧನುಷ್ ಅದಕ್ಕೆ ಒಪ್ಪಿರಲಿಲ್ಲ. ಆದರೂ, ನಯನತಾರಾ ಈ ಸಾಕ್ಷ್ಯಚಿತ್ರದ ಟ್ರೇಲರ್‌ನಲ್ಲಿ ‘ನಾನುಮ್ ರೌಡಿ ದಾನ್’ ಚಿತ್ರದ 3 ಸೆಕೆಂಡ್‌ಗಳ ದೃಶ್ಯ ಬಳಸಿದ್ದ ಕಾರಣ, ಧನುಷ್ 10 ಕೋಟಿ ರೂ. ನಷ್ಟ ಭರಿಸುವಂತೆ ನೋಟಿಸ್ ನೀಡಿದ್ದರು. ಅದಕ್ಕೆ ಕೆಂಡಾಮಂಡಲವಾದ ನಯನತಾರಾ, ಧನುಷ್ ವಿರುದ್ಧ ಜಾಲತಾಣದಲ್ಲಿ ಕಿಡಿಕಾರಿದ್ದರು. ಆದರೂ ಸುಮ್ಮನಿರದ ಧನುಷ್ ಮತ್ತೊಮ್ಮೆ ನಯನತಾರಾ ವಿರುದ್ಧ ತಿರುಗಿಬಿದ್ದಿದ್ದು, 24 ಗಂಟೆಯೊಳಗೆ ‘ನಾನುಮ್ ರೌಡಿ ದಾನ್’ ಚಿತ್ರದ 3 ಸೆಕೆಂಡ್‌ಗಳ ದೃಶ್ಯವನ್ನು ತೆಗೆದುಹಾಕಬೇಕು ಇಲ್ಲವಾದರೆ, ಕಾನೂನು ಕ್ರಮ ಜರುಗಿಸಲಾಗುವುದು ಎಂದು ಲಾಯರ್ ನೋಟಿಸ್ ನೀಡಿದ್ದರು. ಆದರೆ, ಇದಕ್ಕೆ ನಯನತಾರಾ ಕ್ಯಾರೆ ಎನ್ನಲಿಲ್ಲ. ಇದೀಗ ಧನುಷ್ ತಮ್ಮ ವಕೀಲರ ಮೂಲಕ ಹೈಕೋರ್ಟ್ ಮೆಟ್ಟಿಲೇರಿದ್ದು, ನಯನತಾರಾಗೆ ನೋಟಿಸ್ ಕಳುಹಿಸಿದ್ದಾರೆ. (ಏಜೆನ್ಸೀಸ್)