

ಹೊಸದಿಲ್ಲಿ: ಇಂಡಿಯನ್ ಪ್ರೀಮಿಯರ್ ಲೀಗ್ 2024ರ 17ನೇ ಆವೃತ್ತಿ ಸಮೀಪಿಸುತ್ತಿದ್ದಂತೆ ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರೀ ಕೌತುಕ ಹೆಚ್ಚಿದ್ದು, ತಮ್ಮ ನೆಚ್ಚಿನ ಟೀಮ್ಗಳಲ್ಲಿ ಯಾರೆಲ್ಲಾ ಆಡಲಿದ್ದಾರೆ? ಯಾರ ನೇತೃತ್ವದಲ್ಲಿ ತಂಡ ಮುನ್ನಡೆಯಲಿದೆ? ಎಂಬ ಹತ್ತು ಹಲವು ಪ್ರಶ್ನೆಗಳಿಗೆ ಇತ್ತೀಚಿಗಷ್ಟೇ ನಡೆದ ಕ್ರಿಕೆಟಿಗರ ಹರಾಜು ಪ್ರಕ್ರಿಯೆಯಲ್ಲಿ ಸ್ಪಷ್ಟ ಉತ್ತರ ಲಭಿಸಿತು. ಐಪಿಎಲ್ ಸೀಸನ್ನಲ್ಲಿ ಕ್ರಿಕೆಟ್ ಫ್ಯಾನ್ಸ್ಗಳ ಅಚ್ಚುಮೆಚ್ಚಿನ ತಂಡಗಳಲ್ಲಿ ಒಂದಾದ ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಮೇಲೆ ಈ ಬಾರಿಯೂ ಕೂಡ ಭಾರೀ ನಿರೀಕ್ಷೆ ಹಾಗೂ ಭರವಸೆ ಮೂಡಿದೆ.
2023ರ ಐಪಿಎಲ್ ಸೀಸನ್ ಪಟ್ಟವನ್ನು ಪಡೆದ ಧೋನಿ ತಂಡದ ಮೇಲೆ ಈ ವರ್ಷವೂ ಕೂಡ ಹೆಚ್ಚಿನ ನಿರೀಕ್ಷೆಯಿದ್ದು, 42ರ ವಯಸ್ಸಿನಲ್ಲೂ ಎಂ.ಎಸ್ ತಮ್ಮ ತಂಡಕ್ಕೆ ಹಾಗೂ ಅಪಾರ ಸಂಖ್ಯೆಯ ಅಭಿಮಾನಿಗಳಿಗಾಗಿ ಕೆಣಕ್ಕಿಳಿಯುತ್ತಿರುವುದು ಮತ್ತಷ್ಟು ವಿಶೇಷ. ಈ ಮಧ್ಯೆ ಇದೇ ಧೋನಿಯವರ ಕಡೆಯ ಸೀಸನ್ ಎಂದು ಹೇಳಲಾಗುತ್ತಿದೆ. ಆದರೆ ಇದು ಎಷ್ಟರ ಮಟ್ಟಿಗೆ ನಿಜ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕು. ಇದೆಲ್ಲದರ ನಡುವೆ ಭಾರತೀಯ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಸಿಎಸ್ಕೆ ತಂಡದ ಕುರಿತಂತೆ ಭವಿಷ್ಯವೊಂದನ್ನು ನುಡಿದಿದ್ದಾರೆ.
"ಐಪಿಎಲ್ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿ ಕೂಡ ಪ್ಲೇಆಫ್ಸ್ಗೆ ಎಂಟ್ರಿ ಕೊಡುವುದು ಖಚಿತ. ಯಾಕಂದ್ರೆ, 16 ಸೀಸನ್ಗಳ ಪೈಕಿ 12 ಬಾರಿ ಚೆನ್ನೈ ಪ್ಲೇಆಫ್ಗೆ ಬಂದಿದೆ. ಖಂಡಿತವಾಗಿ ಅಂಕಪಟ್ಟಿಯ ಟಾಪ್ ಫೋರ್ನಲ್ಲಿ ತಂಡ ಸ್ಥಾನಗಳಿಸಲಿದೆ" ಎಂದು ಹೇಳಿದರು. ಐದು ಬಾರಿ ಟ್ರೋಫಿ ಗೆಲ್ಲುವ ಮೂಲಕ ಮುಂಬೈ ಇಂಡಿಯನ್ಸ್ ತಂಡದೊಂದಿಗೆ ಸಿಎಸ್ಕೆ ಅದ್ಬುತ ದಾಖಲೆಯನ್ನು ಹೊಂದಿದೆ.
ಇದನ್ನೂ ಓದಿ: 17 ದಿನಗಳ ನಂತರ ಮತ್ತೊಮ್ಮೆ ಅಯೋಧ್ಯೆಗೆ ತೆರಳಿದ ಅಮಿತಾಭ್
"ಈ ಬಾರಿ ನಡೆದ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ನೀವೆಲ್ಲರೂ ಗಮನಿಸಿದ್ದೀರಾ, ಧೋನಿ ತಂಡ ಹೇಗೆ ಉತ್ತಮ ಕ್ರಿಕೆಟಿಗರನ್ನು ಖರೀದಿ ಮಾಡಿತು ಎಂಬುದನ್ನು. ತಮ್ಮ ತಂಡವನ್ನು ಬಲಿಷ್ಠ ಮಾಡಿಕೊಳ್ಳಲು ಏನು ಅಗತ್ಯವಿತ್ತೋ ಅದನ್ನೆಲ್ಲಾ ಟೀಮ್ ಮಾಡಿದೆ. ಯುವ ಕ್ರಿಕೆಟಿಗರು ಹಾಗೂ ಅನುಭವಿ ಆಟಗಾರರನ್ನು ಸಿಎಸ್ಕೆ ಹೊಂದಿದೆ" ಎಂದು ಹೇಳಿದರು.
"ಇದೆಲ್ಲವನ್ನೂ ಗಮನಿಸಿದರೆ ನನಗೆ ಅನಿಸೋದು ಖಂಡಿತ ಸಿಎಸ್ಕೆ ಈ ಬಾರಿಯೂ ಪ್ಲೇಆಫ್ಗೆ ಎಂಟ್ರಿ ಕೊಡುತ್ತದೆ. ಒಟ್ಟು 16 ಸೀಸನ್ಗಳಲ್ಲಿ 12 ಬಾರಿ ಪ್ಲೇಆಫ್ಗೆ ಬಂದಿರುವ ತಂಡ, ಖಂಡಿತ 13ನೇ ಬಾರಿಗೂ ಪ್ರವೇಶಿಸಲಿದೆ" ಎಂದು ಭವಿಷ್ಯ ನುಡಿದಿದ್ದಾರೆ,(ಏಜೆನ್ಸೀಸ್).