More

    ಇಂದಿನಿಂದ ಕಾವೇರಿದ ಕಾದಾಟ: ಸಿ ಗುಂಪಿನ ಅಗ್ರಸ್ಥಾನಕ್ಕಾಗಿ ಕರ್ನಾಟಕ-ತಮಿಳುನಾಡು ಪೈಪೋಟಿ

    ಚೆನ್ನೈ: ಪ್ರತಿಷ್ಠಿತ ರಣಜಿ ಟ್ರೋಫಿ ದೇಶೀಯ ಕ್ರಿಕೆಟ್ ಟೂರ್ನಿಯ ಆರನೇ ಸುತ್ತಿನ ಪಂದ್ಯಗಳು ಶುಕ್ರವಾರ ಆರಂಭವಾಗಲಿದ್ದು, ಸಾಂಪ್ರದಾಯಿಕ ಎದುರಾಳಿಗಳಾದ ಪ್ರವಾಸಿ ಕರ್ನಾಟಕ ಹಾಗೂ ಆತಿಥೇಯ ತಮಿಳುನಾಡು ತಂಡಗಳು ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಪರಸ್ಪರ ಮುಖಾಮುಖಿಯಾಗಲಿವೆ. ಸತತ 2 ಗೆಲುವಿನ ಆತ್ಮವಿಶ್ವಾಸದೊಂದಿಗೆ ಮುನ್ನುಗುತ್ತಿರುವ ಉಭಯ ತಂಡಗಳು ಸಿ ಗುಂಪಿನ ಅಗ್ರಸ್ಥಾನಕ್ಕಾಗಿ ಹೋರಾಟ ನಡೆಸಲಿವೆ.

    ಕರ್ನಾಟಕ ತಂಡ ಟೂರ್ನಿಯಲ್ಲಿ ಇದುವರೆಗೆ ಆಡಿರುವ 5 ಪಂದ್ಯಗಳಲ್ಲಿ 3 ಗೆಲುವು, 1 ಡ್ರಾ ಹಾಗೂ 1 ಸೋಲಿನೊಂದಿಗೆ 21 ಅಂಕ ಕಲೆಹಾಕಿದೆ. ಇತ್ತ ತಮಿಳುನಾಡು ಸಹ ಇಷ್ಟೇ ಪಂದ್ಯಗಳನ್ನಾಡಿ 3 ಗೆಲುವು,1 ಡ್ರಾ ಹಾಗೂ 1 ಸೋಲಿನೊಂದಿಗೆ 21 ಅಂಕ ಕಲೆಹಾಕಿದ್ದು, ರನ್‌ರೇಟ್ ಲೆಕ್ಕಾಚಾರದಲ್ಲಿ ಸಿ ಗುಂಪಿನ ಅಗ್ರಸ್ಥಾನದಲ್ಲಿದೆ. ಹೀಗಾಗಿ ಈ ಪಂದ್ಯದಲ್ಲಿ ಮೊದಲ ಇನಿಂಗ್ಸ್ ಮುನ್ನಡೆ ಅಥವಾ ಜಯ ಗಳಿಸಿದ ತಂಡ ಅಗ್ರಸ್ಥಾನವನ್ನು ಬಹುತೇಕ ಖಾತ್ರಿಪಡಿಸಿಕೊಳ್ಳಲಿದೆ. ಕರ್ನಾಟಕ ತನ್ನ ಅಂತಿಮ ಲೀಗ್ ಪಂದ್ಯ ಚಂಡೀಗಢ ವಿರುದ್ಧ ಆಡಲಿದ್ದು, ತಮಿಳುನಾಡು ತಂಡ ಪಂಜಾಬ್ ತಂಡವನ್ನು ಎದುರಿಸಲಿದೆ. ಗುಂಪಿನ ಮೊದಲ ತಂಡವಾಗಿ ನಾಕೌಟ್‌ಗೇರುವಲ್ಲಿ ಈ ಪಂದ್ಯ ಎರಡು ತಂಡಗಳ ಪಾಲಿಗೆ ಮಹತ್ವ ಎನಿಸಿದೆ.

    ನಾಯಕ ಮಯಾಂಕ್ ಫಿಟ್: ತ್ರಿಪುರ ವಿರುದ್ಧ ಪಂದ್ಯದ ಬಳಿಕ ವಿಮಾನ ಪ್ರಯಾಣದ ವೇಳೆ ದಿಢೀರ್ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದ ನಾಯಕ ಮಯಾಂಕ್ ಅಗರ್ವಾಲ್ ಮಹತ್ವದ ಪಂದ್ಯಕ್ಕೆ ಫಿಟ್ ಆಗಿದ್ದಾರೆ. ಜತೆಗೆ ಎಡಗೈ ಬ್ಯಾಟರ್ ದೇವದತ್ ಪಡಿಕ್ಕಲ್ ವಾಪಸಾತಿ ಬ್ಯಾಟಿಂಗ್ ವಿಭಾಗದ ಬಲ ಹೆಚ್ಚಿಸಲಿದೆ. 32 ವರ್ಷದ ಮಯಾಂಕ್ ಹಾಲಿ ಋತುವಿನಲ್ಲಿ ಇದುವರೆಗೆ ಆಡಿರುವ 4 ಪಂದ್ಯಗಳಲ್ಲಿ 2 ಶತಕ ಸಹಿತ 310 ರನ್ ಬಾರಿಸಿದ್ದಾರೆ. ದೇವದತ್ ಪಡಿಕ್ಕಲ್ ಮೊದಲ 3 ಪಂದ್ಯಗಳಲ್ಲಿ 2 ಶತಕ ಸಹಿತ 369 ರನ್ ಸಿಡಿಸಿದ್ದು, ಭಾರತ ಎ ತಂಡದ ಪರ ಇಂಗ್ಲೆಂಡ್ ಲಯನ್ಸ್ ವಿರುದ್ಧ ಆಡಿದ ಕಾರಣ ಕಳೆದೆರಡು ಪಂದ್ಯಗಳನ್ನು ತಪ್ಪಿಸಿಕೊಂಡಿದ್ದರು. ಅನುಭವಿ ಆರಂಭಿಕ ಆರ್.ಸಮರ್ಥ್ ಹಾಗೂ ಉಪನಾಯಕ ನಿಕಿನ್ ಜೋಸ್ ವೈಲ್ಯ ತಂಡಕ್ಕೆ ಪ್ರಮುಖ ಹಿನ್ನಡೆ ತಂದಿದೆ. ಯುವ ಆಟಗಾರ ನಿಕಿನ್ ಜೋಸ್ ನಾಯಕತ್ವದ ಪರೀಕ್ಷೆಯಲ್ಲಿ ಪಾಸ್ ಆದರೂ, ಟೂರ್ನಿಯಲ್ಲಿ ರನ್‌ಬರ ಅನುಭವಿಸಿದ್ದಾರೆ. ಅನುಭವಿ ಬ್ಯಾಟರ್ ಮನೀಷ್ ಪಾಂಡೆ, ರೈಲ್ವೇಸ್ ಎದುರು ರಾಜ್ಯ ತಂಡವನ್ನು ಏಕಾಂಗಿ ಹೋರಾಟದ ಮೂಲಕ ಗೆಲುವಿನ ದಡ ಸೇರಿಸಿ ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡು ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ. ತ್ರಿವಳಿ ವೇಗಿಗಳಾದ ವಾಸುಕಿ ಕೌಶಿಕ್, ವಿದ್ವತ್ ಕಾವೇರಪ್ಪ ಹಾಗೂ ವೈಶಾಕ್ ವಿಜಯ್‌ಕುಮಾರ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಆದರೆ ಚೆನ್ನೈನಲ್ಲಿ ಅನುಭವಿ ಸ್ಪಿನ್ನರ್ ಕೊರತೆ ಕಾಡುವ ಸಾಧ್ಯತೆಗಳಿವೆ.

    ತಮಿಳುನಾಡಿಗೆ ತವರಿನ ಬಲ:ಹ್ಯಾಟ್ರಿಕ್ ಗೆಲುವು ಕಂಡಿರುವ ತಮಿಳುನಾಡು ಸಹ ದೇಶೀಯ ಸ್ಟಾರ್ ಆಟಗಾರರಿಂದ ಕೂಡಿದ್ದು, ಎನ್. ಜಗದೀಶನ್, ಬಾಬಾ ಅಪರಜೀತ್, ಸಾಯಿ ಸುದರ್ಶನ್, ವಿಜಯ ಶಂಕರ್ ಹಾಗೂ ವಾಷಿಂಗ್ಟನ್ ಸುಂದರ್ ಪ್ರಮುಖ ಆಕರ್ಷಣೆಯಾಗಿದ್ದಾರೆ. ಎನ್. ಜಗದೀಶನ್ ಟೂರ್ನಿಯಲ್ಲಿ ತ್ರಿಶತಕ ಸಿಡಿಸಿದ್ದು ರಾಜ್ಯದ ಪಾಲಿಗೆ ಸವಾಲೆನಿಸಿದ್ದಾರೆ. ಇದೇ ವೇಳೆ ಮಹತ್ವದ ಪಂದ್ಯಕ್ಕೆ ತಮಿಳುನಾಡು ಕ್ರಿಕೆಟ್ ಸಂಸ್ಥೆ ಉಚಿತ ಪ್ರವೇಶ ನೀಡಿದ್ದು, ಆತಿಥೇಯ ತಂಡಕ್ಕೆ ಪ್ರೇಕ್ಷಕರು ಬಲ ತುಂಬಲು ಮುಂದಾಗಿದೆ. ಈ ಪಂದ್ಯ ಟಿವಿ ಅಥವಾ ಒಟಿಟಿಯಲ್ಲಿ ನೇರಪ್ರಸಾರವಿರುವುದಿಲ್ಲ.

    ಮುಖಾಮುಖಿ: 73
    ಕರ್ನಾಟಕ: 18
    ತಮಿಳುನಾಡು: 18
    ಡ್ರಾ: 37

    *ಆರಂಭ: ಬೆಳಗ್ಗೆ 9.30

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts