IPL 2024, CSK vs RCB: ಮೊದಲ ಪಂದ್ಯ ಸೋತರೂ ಆರ್​​ಸಿಬಿ ಫ್ಯಾನ್ಸ್​ ಕುಗ್ಗಲ್ಲ! ಬದಲಿಗೆ ಹೇಳೋದು ಮಾತ್ರ ಇದೊಂದೇ….

Untitled design - 2024-02-24T204323.467
Published on

ಬೆಂಗಳೂರು: ಇಂಡಿಯನ್​ ಪ್ರೀಮಿಯರ್​ ಲೀಗ್​ (IPL) 2024ರ ಪಂದ್ಯಗಳಿಗೆ ಇದೀಗ ದಿನಗಣನೆ ಆರಂಭಗೊಂಡಿದ್ದು, ಇತ್ತೀಚೆಗಷ್ಟೇ ಬಿಸಿಸಿಐ ಐಪಿಎಲ್ ಪಂದ್ಯಗಳ ಮೊದಲ 21 ದಿನಗಳ ವೇಳಾಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸುವ ಮುಖೇನ ಕ್ರಿಕೆಟ್ ಅಭಿಮಾನಿಗಳ ಕಾತರ, ಕುತೂಹಲಕ್ಕೆ ತೆರೆಎಳೆದಿದೆ.

ಸದ್ಯ ಮುಂಬರುವ ಐಪಿಎಲ್​ ಪಂದ್ಯಗಳನ್ನು ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ಸಜ್ಜಾಗಿದ್ದು, 10 ಬಲಿಷ್ಠ ತಂಡಗಳು ಭರ್ಜರಿ ಪೈಪೋಟಿ ಕೊಡಲು ಈಗಾಗಲೇ ಸಕಲ ತಯಾರಿಗಳನ್ನು ಮಾಡಿಕೊಳ್ಳುತ್ತಿದೆ. ಸದ್ಯ ಇದೆಲ್ಲದರ ಮಧ್ಯೆ ಈ ಬಾರಿಯ ಐಪಿಎಲ್​ನ ಉದ್ಘಾಟನಾ ಸಮಾರಂಭ ಚೆನ್ನೈ ನಗರದಲ್ಲಿ ನಡೆಯಲಿದೆ ಎಂದು ಅಧಿಕೃತ ಘೋಷಣೆಯಾಗಿದೆ.

ಮಾರ್ಚ್​​ 22ರಂದು ಚೆನ್ನೈನಲ್ಲಿ ಗ್ರ್ಯಾಂಡ್​ ಓಪನಿಂಗ್ ಪಡೆಯಲಿರುವ ಐಪಿಎಲ್​ ಪಂದ್ಯದಲ್ಲಿ ಅಪಾರ ಸಂಖ್ಯೆಯ ಕ್ರಿಕೆಟ್​ ಅಭಿಮಾನಿಗಳನ್ನು ಹೊಂದಿರುವ ಎರಡು ಅತ್ಯಂತ ನೆಚ್ಚಿನ ತಂಡಗಳು ಮುಖಾಮುಖಿಯಾಗಲಿದೆ. ಐಪಿಎಲ್​ ಇತಿಹಾಸದಲ್ಲೇ ಅತೀ ಹೆಚ್ಚು ವೀಕ್ಷಣೆಗೆ ಒಳಪಡುವ ವಿರಾಟ್​ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು​ ಮತ್ತು ಐದು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿರುವ ಮಹೇಂದ್ರ ಸಿಂಗ್ ಧೋನಿ ಕ್ಯಾಪ್ಟನ್ಸಿಯ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಈ ಬಾರಿಯ ಆವೃತ್ತಿಯ ಮೊದಲ ಪಂದ್ಯದಲ್ಲಿ ಭರ್ಜರಿ ಪೈಪೋಟಿ ಕೊಡಲು ಸಜ್ಜಾಗಿದೆ.

ಪ್ರತಿವರ್ಷ ಐಪಿಎಲ್​ ಬಂದರೆ ಸಾಕು ಕ್ರಿಕೆಟ್​ ಅಭಿಮಾನಿಗಳಿಗೆ ಭರಪೂರ ಮನರಂಜನೆಯ ಹಬ್ಬ ಎಂದೇ ಹೇಳಬಹುದು. ಅದರಲ್ಲೂ ಈ ಟಿ-20 ಲೀಗ್​ ಇತಿಹಾಸದಲ್ಲಿ ಅತೀ ಹೆಚ್ಚು ವೈರತ್ವ, ಅಧಿಕ ಅಭಿಮಾನಿಗಳನ್ನು ಹೊಂದಿರುವ ತಂಡಗಳು ಎಂದರೆ ಅದು ಆರ್​ಸಿಬಿ ಮತ್ತು ಸಿಎಸ್​ಕೆ. ಈ ಎರಡು ಟೀಮ್​ಗೆ ಇರುವ ಫ್ಯಾನ್ಸ್​ಗಳ ಸಂಖ್ಯೆ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ. ವಿಶೇಷವಾಗಿ ಇಡೀ ಲೀಗ್​ನಲ್ಲಿ ಎರಡು ಬಾರಿ ಈ ತಂಡಗಳು ಮುಖಾಮುಖಿಯಾಗಿ ಕಣಕ್ಕಿಳಿಯುತ್ತವೆ. ಆಗ ಸ್ಟೇಡಿಯಂ ತುಂಬ ಕೇಳಿಬರುವ ಘೋಷಣೆ, ಚಿರಾಟ ಮಾತ್ರ ನೋಡುಗರನ್ನು ರೋಮಾಂಚನಗೊಳಿಸುತ್ತದೆ.

ಈ ಹಿಂದಿನಿಂದಲೂ ಆರ್​ಸಿಬಿ ಮತ್ತು ಸಿಎಸ್​ಕೆ ಪಂದ್ಯಗಳು ಬಂದರೆ ಅಭಿಮಾನಿಗಳು ಪಂದ್ಯದ ಹಿಂದಿನ ದಿನದಂದೇ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಪಂದ್ಯ ಕುರಿತು ಅಪ್ಡೇಟ್​ ನೀಡುತ್ತಾರೆ. ಪ್ರತ್ಯೇಕ ಹಾಗೂ ವಿಶೇಷವಾಗಿ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು​ ತಂಡಕ್ಕಿರುವ ಅಭಿಮಾನಿಗಳು ಯಾವ ಟೀಮ್​ಗೂ ಇಲ್ಲ! ಕಾರಣ, ಆರ್​​ಸಿಬಿ ಯಾವುದೇ ಪಂದ್ಯ ಆಡುವ ಮುನ್ನ ಅಭಿಮಾನಿಗಳು ಒಂದು ವಿಶೇಷ ಪೂಜೆ, ಪೋಸ್ಟರ್​ಗಳ ಮೂಲಕ ಶುಭಹಾರೈಸಿ, ಭಾರೀ ಪ್ರೋತ್ಸಾಹವನ್ನು ನೀಡುತ್ತಾರೆ. ಪ್ರಾಯಶಃ ಈ ರೀತಿಯ ಅಭಿಮಾನಿಗಳು ಇರುವುದು ಕೇವಲ ಇದೊಂದೇ ಟೀಮ್​ಗೆ ಎಂದರೆ ತಪ್ಪಾಗಲಾರದು.

ಸಿಎಸ್​ಕೆ ವಿರುದ್ಧ ಯಾವುದೇ ಪಂದ್ಯ ಎದುರಾದರೂ ಅಲ್ಲಿ ಆರ್​ಸಿಬಿ ಫ್ಯಾನ್ಸ್​ಗಳ ಅಬ್ಬರ ಜೋರಾಗಿಯೇ ಇರುತ್ತದೆ. 'ಕಿಂಗ್ ಕೊಹ್ಲಿ', 'ಆರ್​ಸಿಬಿ' ಎಂಬ ಘೋಷಣೆಗಳು ಸ್ಟೇಡಿಯಂ ಸುತ್ತ ರಾರಾಜಿಸುತ್ತದೆ. ಎಂದಿನಂತೆ ಬೆಂಗಳೂರು ತಂಡ ಮೊದಲ ಪಂದ್ಯ ಗೆದ್ದೇ ಗೆಲ್ಲಲಿದೆ ಎಂದು ಮುಂಚಿತವಾಗಿ ಭವಿಷ್ಯ ನುಡಿಯುವ ಅಭಿಮಾನಿಗಳು, ಪಂದ್ಯದಲ್ಲಿ ಸೋತ ಬಳಿಕ ಇದು ದೇವರಿಗೆ ಅರ್ಪಣೆ ಎಂದು ಹೇಳುತ್ತದೆ. ಇದನ್ನೂ ಮೀರಿ 'ಈ ಸಲ ಕಪ್ ನಮ್ದೇ' ಎಂಬುದನ್ನು ಎಂದಿನಂತೆ ಮುಂದುವರೆಸುತ್ತದೆ.

ಒಟ್ಟಾರೆ ಆರ್​ಸಿಬಿ ಅಭಿಮಾನಿಗಳು ತಮ್ಮ ನೆಚ್ಚಿನ ತಂಡ ಸೋತರೂ, ಗೆದ್ದರೂ ಅಥವಾ ಟೂರ್ನಿಯಿಂದ ಹೊರಬಿದ್ದರೂ ಕೊಟ್ಟಿರುವ ಪ್ರೀತಿ, ಅಭಿಮಾನವನ್ನು ಮಾತ್ರ ಕಿಂಚಿತ್ತು ಕಡಿಮೆ ಮಾಡುವುದಿಲ್ಲ ಎಂಬುದಕ್ಕೆ ಕಳೆದ ಹಲವು ವರ್ಷಗಳಿಂದ ತೋರಿರುವ ಪ್ರೋತ್ಸಾವೇ ನಿದರ್ಶನ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net