ಇಂದು ಕೊಹ್ಲಿ ವರ್ಸಸ್ ರೋಹಿತ್ ಫೈಟ್ : ದುಬೈನಲ್ಲಿ ಆರ್​ಸಿಬಿಗೆ ಮುಂಬೈ ಇಂಡಿಯನ್ಸ್ ಸವಾಲು

kholi
Published on

ದುಬೈ: ಆರಂಭಿಕ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿದ ಬಳಿಕ 2ನೇ ಪಂದ್ಯದಲ್ಲಿ ಹೀನಾಯ ಸೋಲಿನ ರುಚಿ ಕಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್-13ರ ತನ್ನ 3ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದ ಸವಾಲು ಎದುರಿಸಲು ಸಜ್ಜಾಗಿದೆ.

ಕಿಂಗ್ಸ್ ಇಲೆವೆನ್ ಪಂಜಾಬ್ ಎದುರು 97 ರನ್​ಗಳಿಂದ ಸೋತಿರುವ ಆರ್​ಸಿಬಿ ಪುಟಿದೇಳುವ ತವಕದಲ್ಲಿದೆ. ಆರಂಭಿಕ 2 ಪಂದ್ಯಗಳಿಂದ 15 ರನ್​ಗಳನ್ನಷ್ಟೇ ಪೇರಿಸಿರುವ ನಾಯಕ ವಿರಾಟ್ ಕೊಹ್ಲಿ ಫಾಮ್ರ್ ತಂಡಕ್ಕೆ ದೊಡ್ಡ ಚಿಂತೆಯಾಗಿದೆ.

ಮತ್ತೊಂದೆಡೆ, ಉದ್ಘಾಟನಾ ಪಂದ್ಯದಲ್ಲಿ ಸೋತರೂ ಕೆಕೆಆರ್ ಎದುರು ಭರ್ಜರಿ ನಿರ್ವಹಣೆ ತೋರಿರುವ ಮುಂಬೈ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದೆ. ಮೊದಲ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಮಿಂಚಿದ್ದರೂ ಪಂಜಾಬ್ ವಿರುದಟಛಿ ನಿರಾಸೆ ಅನುಭವಿಸಿದ ಕರ್ನಾಟಕದ ಆರಂಭಿಕ ದೇವದತ್ ಪಡಿಕಲ್, ಸಿಕ್ಕ ಅವಕಾಶವನ್ನು ಸೂಕ್ತವಾಗಿ ಬಳಸಿಕೊಳ್ಳಬೇಕಿದೆ. ಆಸ್ಟ್ರೇಲಿಯಾದ ನಿಗದಿತ ಓವರ್​ಗಳ ತಂಡದ ನಾಯಕ ಆರನ್ ಫಿಂಚ್ ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲಬೇಕಿದೆ. ಎಬಿಡಿಗೂ ಸ್ಥಿರ ನಿರ್ವಹಣೆ ಅಗತ್ಯವಾಗಿದ್ದು, ತಂಡಕ್ಕೆ ವೇಗದ ಬೌಲಿಂಗ್ ವಿಭಾಗವೇ ದೊಡ್ಡ ಚಿಂತೆಯಾಗಿದೆ.

ಆರ್​ಸಿಬಿ: ಪಂಜಾಬ್ ವಿರುದ್ಧ ಹೀನಾಯವಾಗಿ ಸೋತಿರುವ ಆರ್​ಸಿಬಿ ತಂಡಕ್ಕೆ ಹನ್ನೊಂದರ ಬಳಗದ ಆಯ್ಕೆಯೇ ಗೊಂದಲವಾಗಿದೆ. ಪಂಜಾಬ್ ವಿರುದ್ಧ ವಿಕೆಟ್ ನಷ್ಟವಿಲ್ಲದೆ 57 ರನ್ ಬಿಟ್ಟುಕೊಟ್ಟ ಡೇಲ್ ಸ್ಟೈನ್, ಡೆತ್ ಓವರ್​ನಲ್ಲಿ ದುಬಾರಿಯಾಗಿದ್ದರು. ಆಲ್ರೌಂಡರ್ ಕ್ರಿಸ್ ಮಾರಿಸ್ ಪೂರ್ಣ ಪ್ರಮಾಣದಲ್ಲಿ ಚೇತರಿಸಿಕೊಳ್ಳದ ಹಿನ್ನೆಲೆಯಲ್ಲಿ ಸ್ಟೈನ್ ಬದಲಿಗೆ ಇಸುರು ಉದಾನ ಕಣಕ್ಕಿಳಿಯುವ ಸಾಧ್ಯತೆಗಳಿವೆ. ಮತ್ತೋರ್ವ ದುಬಾರಿ ಬೌಲರ್ ಉಮೇಶ್ ಯಾದವ್ ಬದಲಿಗೆ ಮೊಹಮದ್ ಸಿರಾಜ್ ಆಡಬಹುದು. ವೈಫಲ್ಯ ಅನುಭವಿಸಿರುವ ವಿಕೆಟ್ ಕೀಪರ್ ಜೋಶ್ ?ಲಿಪ್ ಬದಲಿಗೆ ಆಲ್ರೌಂಡರ್ ಮೊಯಿನ್ ಅಲಿ ಕಣಕ್ಕಿಳಿಯಬಹುದು. ಒಂದು ವೇಳೆ ಫಿಲಿಪ್ ಹೊರಗುಳಿದರೆ ಎಬಿ ಡಿವಿಲಿಯರ್ಸ್ ವಿಕೆಟ್ ಕೀಪಿಂಗ್ ಗ್ಲೌಸ್ ತೊಡಲಿದ್ದಾರೆ. ಕಳೆದ ಪಂದ್ಯ: ಕಿಂಗ್ಸ್ ಇಲೆವೆನ್ ಪಂಜಾಬ್ ಎದುರು 97 ರನ್​ಗಳಿಂದ ಸೋಲು.

ಮುಂಬೈ: ಉದ್ಘಾಟನಾ ಪಂದ್ಯದಲ್ಲಿ ಸೋಲನುಭವಿಸಿದ ಬಳಿಕ ಗೆಲುವಿನ ಹಳಿ ಏರಿರುವ ಮುಂಬೈ ಇಂಡಿಯನ್ಸ್ ತಂಡದಲ್ಲಿ ಬದಲಾವಣೆ ಸಾಧ್ಯತೆ ಕಡಿಮೆ. ಎರಡು ಪಂದ್ಯಗಳಿಗೆ ಅವಕಾಶ ಗಿಟ್ಟಿಸಿಕೊಂಡಿರುವ ಸೌರಭ್ ತಿವಾರಿ ಬದಲಿಗೆ ಇಶಾನ್ ಕಿಶನ್ ಅವಕಾಶ ಪಡೆದರೂ ಅಚ್ಚರಿ ಇಲ್ಲ. ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡದಿದ್ದರೂ ಬ್ಯಾಟಿಂಗ್​ನಲ್ಲಿ ನ್ಯಾಯ ಒದಗಿಸುತ್ತಿದ್ದಾರೆ. ಈ ಪಂದ್ಯದಲ್ಲೂ ಕೇವಲ ಬೌಲರ್ ಆಗಿಯೇ ಪಾಂಡ್ಯ ಕಾರ್ಯನಿರ್ವಹಿಸಲಿದ್ದಾರೆ. ಆರ್ಸಿಬಿ ವಿರುದ್ಧ ಟ್ರೆಂಟ್ ಬೌಲ್ಟ್ ತಂಡದ ಪ್ರಮುಖ ಅಸ್ತ್ರವಾಗಲಿದ್ದಾರೆ ಎನ್ನಲಾಗಿದೆ. ಕಳೆದ ಪಂದ್ಯ: ಕೆಕೆಆರ್ ವಿರುದ್ಧ 49 ರನ್ ಜಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net