40% ಕಮಿಷನ್ ಸೇರಿದಂತೆ ಬಿಜೆಪಿ ಅವಧಿಯ ಎಲ್ಲ ಭ್ರಷ್ಟಾಚಾರಗಳ ಕುರಿತು ಇಲಾಖಾವಾರು ತನಿಖೆ: ಸಚಿವ ಎಂ.ಸಿ. ಸುಧಾಕರ್

M C Sudhakar
Published on

ಚಿಕ್ಕಬಳ್ಳಾಪುರ: ಬಿಜೆಪಿ ಅವಧಿಯ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಇಲಾಖಾವಾರು ತನಿಖೆ ಆಗುತ್ತದೆ. ಅದರಲ್ಲೂ 40% ಕಮಿಷನ್ ಮತ್ತು ಪಿಎಸ್​ಐ ಹಗರಣಗಳ ಕುರಿತು ತನಿಖೆ ಆಗಿಯೇ ಆಗುತ್ತದೆ ಎಂದು ಸಚಿವ ಡಾ.ಎಂ.ಸಿ. ಸುಧಾಕರ್ ಹೇಳಿದ್ದಾರೆ.

ಇಂದು ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರ ಪ್ರಕರಣಗಳ ತನಿಖೆ ಬರೀ ಡಾ.ಕೆ.ಸುಧಾಕರ್ ಒಬ್ಬರ ಬಗ್ಗೆ ಮಾತ್ರ ಅಲ್ಲ, ಇಡೀ ಬಿಜೆಪಿ ಸರ್ಕಾರದ ಅವಧಿಯಲ್ಲಿನ ಎಲ್ಲ ಭ್ರಷ್ಟಾಚಾರ ಪ್ರಕರಣಗಳಿಗೂ ಅನ್ವಯಿಸುತ್ತದೆ ಎಂದು ಅವರು ಹೇಳಿದರು.

ಬಿಟ್​ ಕಾಯಿನ್ ಹಗರಣದ ಬಗ್ಗೆಯೂ ಮಾತನಾಡಿದ ಅವರು, ಬಿಟ್ ಕಾಯಿನ್ ಕೇವಲ ರಾಜಕೀಯಕ್ಕೆ ಸೀಮಿತವಾಗಿಲ್ಲ. ಬಿಟ್ ಕಾಯಿನ್ ಹಗರಣದಲ್ಲಿ ಅಂತಾರಾಷ್ಟ್ರೀಯ ಜಾಲವಿದೆ. ಬಿಟ್ ಕಾಯಿನ್ ಹಗರಣದ ತನಿಖೆಗೆ ಕೇಂದ್ರ ಸರ್ಕಾರದ ಸಹಕಾರ ಬೇಕು ಎಂದೂ ಹೇಳಿದರು.

ಅನ್ನಭಾಗ್ಯ ಯೋಜನೆ ಅನುಷ್ಠಾನಕ್ಕೆ ಮಾಜಿ ಸಚಿವ ಸಿ.ಟಿ.ರವಿ ಡೆಡ್​ಲೈನ್ ಕೊಟ್ಟಿದ್ದ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ಸುಧಾಕರ್, ಸಿ.ಟಿ.ರವಿ ಯಾಕೆ ಈ ರೀತಿ ಮೈ ಪರಚಿಕೊಳ್ಳುತ್ತಿದ್ದಾರೋ ಗೊತ್ತಿಲ್ಲ. ಅಕ್ಕಿ ಕೊಡುವುದಿಲ್ಲ ಎಂದು ಯಾರೂ ಹೇಳಿಲ್ಲ. ಅಕ್ಕಿ ದಾಸ್ತಾನು ಮಾಡುವುದಕ್ಕೆ ಎಷ್ಟು ತೊಂದರೆ ಕೊಟ್ಟಿದ್ದಾರೆಂದು ಎಲ್ಲರಿಗೂ ಗೊತ್ತಿದೆ‌. ಅವರು ಈಗ ಬಿಡುವಾಗಿದ್ದಾರೆ, ಮಾಡೋದಕ್ಕೆ ಬೇರೆ ಕೆಲಸ ಇಲ್ಲ, ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಈ ರೀತಿ ಮಾತಾಡುತ್ತಿದ್ದಾರೆ. ಸಿ.ಟಿ.ರವಿ ಸ್ವಲ್ಪ ತಾಳ್ಮೆಯಿಂದ ಇದ್ದರೆ ಎಲ್ಲರಿಗೂ ಒಳ್ಳೆಯದಾಗುತ್ತದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net