ಬೆಂಗಳೂರು: ‘ಕರ್ನಾಟಕ ಹಲವು ಜಗತ್ತು’ ಹೆಗ್ಗಳಿಕೆಗೆ ಇಂಬು ನೀಡಿದ ಸಾಮರ್ಥ್ಯ ಅನಾವರಣ, ರಾಜ್ಯದ ಬೆಳವಣಿಗೆ, ಆರ್ಥಿಕತೆ ವೃದ್ಧಿಗೆ ನೆರವಾದ 15 ಸಾಧಕ ಉದ್ಯಮಿಗಳಿಗೆ ಪುರಸ್ಕರಿಸಿ ಸಾರ್ಥಕತೆ ಮೆರೆದ ಕ್ಷಣಕ್ಕೆ ಬುಧವಾರದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಸಾಕ್ಷಿಯಾಯಿತು. ಭಾರತದ ರಫ್ತು ವಹಿವಾಟು 800 ಬಿಲಿಯನ್ ಡಾಲರ್ ತಲುಪಿದ್ದು, ಇದರಲ್ಲಿ ಕರ್ನಾಟಕದ್ದೇ ಸಿಂಹಪಾಲು ಎಂದು ಹೊಗಳಿದ ಕೇಂದ್ರ ಸಚಿವ ಪಿಯೂಷ್ ಗೋಯೆಲ್ ಮೆಚ್ಚುಗೆ ಗಿಟ್ಟಿಸಿಕೊಂಡರು.
ಜಗತ್ತು, ಭಾರತ, ಕರ್ನಾಟಕದ ಮುಂದಿರುವ ಹಲವು ಸವಾಲುಗಳು, ವಿಪುಲ ಅವಕಾಶ, ಉದಯೋನ್ಮುಖ ತಂತ್ರಜ್ಞಾನ, ಹಸಿರು ಇಂಧನ, ಕೃಷಿ, ಶಿಕ್ಷಣ, ಆಧುನಿಕ ಸಂಚಾರ ವ್ಯವಸ್ಥೆ, ಆರೋಗ್ಯ, ವೈದ್ಯಕೀಯ ಮತ್ತಿತರ ವಲಯಗಳ ಉದ್ಯಮ- ನವೋದ್ಯಮದ ಚರ್ಚೆ, ಗೋಷ್ಠಿ, ಹೂಡಿಕೆ ಮಾತುಕತೆಗಳು 2ನೇ ದಿನದ ಸಮಾವೇಶದ ತಿರುಳು. ವಿದೇಶದ ಹಲವು ಕಂಪನಿಗಳು ಕರ್ನಾಟಕದಲ್ಲಿ ಹೂಡಿಕೆಗೆ ಇರುವ ಅವಕಾಶಗಳು, ತಾವು ಬೆಳೆದು, ರಾಜ್ಯದ ಬೆಳವಣಿಗೆಗೆ ನೀಡುವಂತಹ ಉತ್ಪಾದನೆ, ತಯಾರಿಕೆ ಇನ್ನಿತರ ಕ್ಷೇತ್ರಗಳು, ನೀತಿಗಳು ಮತ್ತು ಪ್ರೋತ್ಸಾಹಕಗಳು, ಮಾನವ ಸಂಪನ್ಮೂಲ ಲಭ್ಯತೆ ಕುರಿತು ಮಾಹಿತಿ ಪಡೆದುಕೊಂಡದ್ದು ವಿಶೇಷ.
30 ಟ್ರಿಲಿಯನ್ ಡಾಲರ್ ಮೌಲ್ಯದ ಆರ್ಥಿಕತೆ: ಸಾಧಕ ಉದ್ಯಮಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿದ ಪಿಯೂಷ್ ಗೋಯಲ್, ರಾಜ್ಯದ ಕೈಗಾರಿಕಾ ಯಶೋಗಾಥೆಗಳ ‘ಕರ್ನಾಟಕ ಸಕ್ಸಸ್ ಸ್ಟೋರೀಸ್ ಸಂಪುಟವನ್ನು ಬಿಡುಗಡೆ ಮಾಡಿದರು. ನಂತರ ಮಾತನಾಡಿದ ಅವರು ರಾಜ್ಯಗಳ ಪ್ರಗತಿಯೇ ದೇಶದ ಪ್ರಗತಿಯಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವ, ಸಹಕಾರ ತತ್ವದ ಮೇಲೆ ಕೆಲಸ ಮಾಡಿದರೆ ಭಾರತವು 2047ರ ಹೊತ್ತಿಗೆ 30 ಟ್ರಿಲಿಯನ್ ಡಾಲರ್ ಮೌಲ್ಯದ ಆರ್ಥಿಕತೆಯಾಗಿ ಬೆಳೆಯಲಿದೆ ಎಂದು ಆಶಿಸಿದರು. ತುಮಕೂರಿನಲ್ಲಿ ಎಂಟು ಸಾವಿರ ಎಕರೆ ವಿಸ್ತೀರ್ಣದಲ್ಲಿ ಪ್ಲೇ ಅಂಡ್ ಪ್ಲಗ್ ಮಾದರಿಯಲ್ಲಿ ಕೈಗಾರಿಕಾ ಸ್ಮಾರ್ಟ್ ಸಿಟಿಗೆ ಚಾಲನೆ ನೀಡಲಾಗಿದೆ. ಮೊದಲ ಹಂತದ ಕಾಮಗಾರಿ ಪ್ರಗತಿಯಲ್ಲಿದ್ದು, 2026ರ ಕೊನೆಯ ಹೊತ್ತಿಗೆ ಪೂರ್ಣಗೊಳ್ಳಲಿದೆ ಎಂಬ ಭರವಸೆ ನೀಡಿದರು. ಕೇಂದ್ರ ಸರ್ಕಾರವು ನಾವೀನ್ಯತೆ 20 ಸಾವಿರ ಕೋಟಿ ರೂ., ಸೆಮಿಕಾನ್ ಮಿಷನ್ಗೆ 74 ಸಾವಿರ ಕೋಟಿ ರೂ., ಕೈಗಾರಿಕೆಗಳಿಗೆ ಪಿಎಲ್ಐ ಆಧಾರಿತ ಪ್ರೊತ್ಸಾಹಕ್ಕೆ ಎರಡು ಲಕ್ಷ ಕೋಟಿ ರೂ. ಕಾದಿಟ್ಟಿದೆ. ಕೇಂದ್ರ ಸರ್ಕಾರ ಅನುಷ್ಠಾನಗೊಳಿಸಿರುವ ವಿವಿಧ ಯೋಜನೆಗಳ ಲಾಭ ಕರ್ನಾಟಕಕ್ಕೂ ಲಭಿಸುತ್ತದೆ ಎಂದು ಗೋಯಲ್ ತಿಳಿಸಿದರು.
ಸಂಚಾರಕ್ಕೆ ಲಕ್ಷ ಕೋಟಿ: ಡಿಸಿಎಂ ಡಿ.ಕೆ.ಶಿವಕುಮಾರ್ ಮಾತನಾಡಿ ಬೆಂಗಳೂರಿನ ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆಗೆ ಒಂದು ಲಕ್ಷ ಕೋಟಿ ರೂ. ವಿನಿಯೋಗಿಸಲಾಗುವುದು ಎಂದರು. ಉದ್ದೇಶಿತ ವೆಚ್ಚದಲ್ಲಿ ಫ್ಲೈಓವರ್, ಸೇತುವೆಗಳು, ಡಬ್ಬಲ್ ಡೆಕ್ಕರ್ ಮಾರ್ಗಗಳು, ಹೊರ ರಸ್ತೆಗಳನ್ನು ಅಭಿವೃದ್ಧಿಪಡಿಸುವುದಾಗಿ ಹೇಳಿದರು.
ಸಾಧಕರಿಗೆ ಪ್ರಶಸ್ತಿ ಪ್ರದಾನ: ಸಮಾರಂಭದಲ್ಲಿ ಹಿರಿಯ ಸಾಧಕ ಉದ್ಯಮಿ, ದಿವಂಗತ ‘ವಿಕ್ರಮ್ ಕಿಲೋಸ್ಕರ್ ಅವರಿಗೆ ‘ಇಂಡಸ್ಟ್ರಿಯಲ್ ಲೆಗಸಿ ಪುರಸ್ಕಾರ ನೀಡಿ, ಗೌರವಿಸಲಾಯಿತು. ಅವರ ಪರವಾಗಿ ಗೀತಾಂಜಲಿ ಕಿಲೋಸ್ಕರ್ ಪ್ರಶಸ್ತಿ ಸ್ವೀಕರಿಸಿದರು.
ಉಳಿದಂತೆ ಜಿಂದಾಲ್ ಸ್ಟೀಲ್ ಗ್ರೂಪ್ ಗೆ ‘ದಶಮಾನದ ಹೂಡಿಕೆದಾರ, ಏಕಸ್ ಕಂಪನಿಗೆ ‘ಕಾರ್ಯಪರಿಸರ ನಿರ್ವತೃ, ಸನ್ ರೈಸ್ ವಲಯದಲ್ಲಿ ಸಾರ್ವಜನಿಕ ವಲಯದ ಎಚ್ಎಎಲ್, ಖಾಸಗಿ ವಲಯದ ಆರ್.ಟಿ.ಎಕ್ಸ್ (ವೈಮಾಂತರಿಕ್ಷ ರಕ್ಷಣಾ ವಲಯ), ಟೊಯೋಟಾ-ಕಿಲೋಸ್ಕರ್ (ವಾಹನ/ಇವಿ), ಬಯೋಕಾನ್ (ಬಿಟಿ/ಜೀವವಿಜ್ಞಾನ), ಬೋಯಿಂಗ್ (ಇಂಟರ್ನ್ಯಾಷನಲ್ ಪೊ›ಕ್ಯೂರ್ವೆಂಟ್ ಚಾಂಪಿಯನ್), ಟೆಕ್ಸಾಸ್ ಇನ್ಸು್ಟ್ರಮೆಂಟ್ಸ್ (ಆರ್ ಅಂಡ್ ಡಿ), ಸ್ಯಾಮ್ಸಂಗ್ (ಇನ್ನೋವೇಶನ್ ಎಕ್ಸಲೆನ್ಸ್), ಫಾಕ್ಸಕಾನ್ (ಇನ್ವೆಸ್ಟೆಂಟ್ ಟೈಟನ್), ಟಾಟಾ ಎಲೆಕ್ಟ್ರಾನಿಕ್ಸ್ (ಉತ್ಪಾದನೆ), ಇನ್ಪೋಸಿಸ್ (ಉದ್ಯೋಗಸೃಷ್ಟಿ), ಶಾಹಿ (ಉತ್ಕೃಷ್ಟ ನಾಯಕತ್ವ) ಮತ್ತು ರೆನ್ಯೂ ಪವರ್ (ಮರುಬಳಕೆ ಇಂಧನ) ಕಂಪನಿಗಳಿಗೆ ವಿವಿಧ ವಿಭಾಗಗಳಲ್ಲಿ ’ಇನ್ವೆಸ್ಟ್ ಕರ್ನಾಟಕ’ಪುರಸ್ಕಾರಗಳನ್ನು ನೀಡಲಾಯಿತು.
ಕ್ವಿನ್ ಸಿಟಿ, 15 ಸಂಸ್ಥೆಗಳ ಜತೆ ಚರ್ಚೆ: ರಾಜ್ಯ ಸರ್ಕಾರದ ಕ್ವಿನ್ ಸಿಟಿ ಯೋಜನೆಗೆ ಆರೋಗ್ಯ ಮತ್ತು ವೈದ್ಯಕೀಯ ಸಂಸ್ಥೆಗಳನ್ನು ಆಕರ್ಷಿಸಲು 15 ಕಂಪನಿಗಳ ಜತೆಗೆ ಹೂಡಿಕೆ ಕುರಿತು ರ್ಚಚಿಸಿ, ಕ್ವಿನ್ ಸಿಟಿ ಅಗತ್ಯತೆ, ಉದ್ದೇಶ, ಗುರಿ, ಸಾಮರ್ಥ್ಯದ ಬಗ್ಗೆ ಮನವರಿಕೆ ಮಾಡಿಕೊಡಲಾಯಿತು. ಡಿಸಿಎಂ, ಸಚಿವರು ಸೇರಿಕೊಂಡು ಅಪೋಲೋ ಕಾನ್ಸೆಪೋ ಸೈನ್ ಟೆಕ್, ಮಣಿಪಾಲ್, ನಿಯೋ ವಾಂಟೇಜ್ ಇನ್ನೋವೇಷನ್, ಸ್ಪರ್ಶ್, ಎಂ.ಎಸ್.ರಾಮಯ್ಯ, ಟಿಐಇ, ಮಾರ್ಕ್, ಶಿಲ್ಪಾ ಬಯಲಾಜಿಕಲ್ಸ್, ಜಿ.ಇ. ಹೆಲ್ತ್ಕೇರ್ ಕಂಪನಿಗಳು, ಜಾರ್ವೆ, ಸ್ಲೊವೇನಿಯಾ ರಾಷ್ಟ್ರಗಳ ಪ್ರತಿನಿಧಿಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.
ಪ್ರಮುಖ ಘೋಷಣೆ, ಒಪ್ಪಂದ
- ವಿಪ್ರೋ ಹೆಲ್ತ್-ಜಿಇ ಹೆಲ್ತ್ ಕೇರ್ ಸಂಸ್ಥೆಯು ರಾಜ್ಯದ ಆರೋಗ್ಯ ಸೇವೆಗಳ ಕ್ಷೇತ್ರದಲ್ಲಿ ಮುಂದಿನ ಐದು ವರ್ಷಗಳಲ್ಲಿ ಎಂಟು ಸಾವಿರ ಕೋಟಿ ರೂ. ಹೂಡಿಕೆ ಮಾಡಲಿದೆ
- ಸಂಶೋಧನೆ ಮತ್ತು ಅಭಿವೃದ್ಧಿ, ಕೌಶಲ ತರಬೇತಿ, ಉತ್ಪಾದನಾ ವಲಯದ ಚಟುವಟಿಕೆ ವಿಸ್ತರಿಸಲೆಂದು ಹಿಟಾಚಿ ಎನರ್ಜಿ ಕಂಪನಿಯು ಒಂದು ಸಾವಿರ ಕೋಟಿ ರೂ. ತೊಡಗಿಸಲಿದೆ
- ವಿಜಯಪುರ ಜಿಲ್ಲೆಯಲ್ಲಿ 3000 ಮೆಗಾ ವಾಟ್ ಸಾಮರ್ಥ್ಯದ ಪವನ ವಿದ್ಯುತ್ ಉತ್ಪಾದನೆ ಅಭಿವೃದ್ಧಿ, ಅತ್ಯಾಧುನಿಕ ವಿಂಡ್ ಟರ್ಬೆನ್ ಬ್ಲೇಡ್ ಘಟಕ ಸ್ಥಾಪಿಸಲು ಸುಜ್ಲಾನ್ ಕಂಪನಿ ಒಪ್ಪಂದಕ್ಕೆ ಸಹಿ
- ವಿಂಗ್ಸ್-ವಿಟೆರಾ ಕಂಪನಿಯಿಂದ ವಿಜಯಪುರ ಅಥವಾ ಕಲಬುರಗಿಯಲ್ಲಿ 800 ಟನ್ ಸಾಮರ್ಥ್ಯದ ಬಹುಬಗೆಯ ಬೇಳೆ ಕಾಳು ಸಂಸ್ಕರಣಾ ಘಟಕ ಸ್ಥಾಪನೆ. 250 ಕೋಟಿ ರೂ. ಹೂಡಿಕೆ, ಘಟಕ ಪ್ರಾರಂಭಿಸಿದ ಎರಡನೇ ವರ್ಷದಿಂದ 800 ಕೋಟಿ ರೂ. ಹೂಡಿಕೆ
ಹೂಡಿಕೆಗೆ ಬದ್ಧತೆ
- ಟೊಯೋಟಾ ಕಿಲೋಸ್ಕರ್ ಮೋಟರ್ ಪ್ರೖೆವೇಟ್ ಲಿಮಿಟೆಡ್ – 3,748 ಕೋಟಿ ರೂ.
- ನಿಡೆಕ್ ಇಂಡಸ್ಟ್ರಿಯಲ್ ಆಟೊಮೇಷನ್ ಇಂಡಿಯಾ ಪ್ರೖೆವೇಟ್ ಲಿಮಿಟೆಡ್ – 600 ಕೋ.ರೂ.
- ಟೊಯೋಟಾ ಕಿಲೋಸ್ಕರ್ ಆಟೊ ಪಾರ್ಟ್ಸ್ ಪ್ರೖೆವೇಟ್ ಲಿಮಿಟೆಡ್ – 450 ಕೋ.ರೂ.
- ಟೊಯೋಟೆಟ್ಸು ಇಂಡಿಯಾ ಆಟೊ ಪಾರ್ಟ್ಸ್ ಪ್ರೖೆವೇಟ್ ಲಿಮಿಟೆಡ್ – 450 ಕೋ.ರೂ.
- ಸಾಂಗೊ ಇಂಡಿಯಾ ಆಟೊಮೋಟಿವ್ ಪಾರ್ಟ್ಸ್ ಪ್ರೖೆವೇಟ್ ಲಿಮಿಟೆಡ್ – 279 ಕೋ.ರೂ.
- ಅಯೊಯಮಾ ಆಟೊಮೋಟಿವ್ ಫಾಸ್ಟೆನರ್ಸ್ (ಇಂಡಿಯಾ) ಪ್ರೖೆವೇಟ್ ಲಿಮಿಟೆಡ್ – 210 ಕೋ.ರೂ.
- ನಿಫ್ಕೊ ಸೌತ್ ಇಂಡಿಯಾ ಮ್ಯಾನುಫ್ಯಾಕ್ಚರಿಂಗ್ ಪ್ರೖೆವೇಟ್ ಲಿಮಿಟೆಡ್ – 125 ಕೋ.ರೂ.
- ಮಿತ್ಸುಬಿಷಿ ಹೆವಿ ಇಂಡಸ್ಟ್ರೀಸ್ – 107 ಕೋ.ರೂ.
- ಆರ್ಐಎಕ್ಸ್ ಇಂಡಿಯಾ ಮ್ಯಾನುಫ್ಯಾಕ್ಚರಿಂಗ್ ಪ್ರೖೆವೇಟ್ ಲಿಮಿಟೆಡ್ – 37 ಕೋ.ರೂ.
ಭವಿಷ್ಯದ ಒಪ್ಪಂದಕ್ಕೆ ಸಹಿ
- ಹೋಂಡಾ ಮೋಟರ್ಸೈಕಲ್ ಆಂಡ್ ಸ್ಕೂಟರ್ ಇಂಡಿಯಾ ಪ್ರೖೆವೇಟ್ ಲಿಮಿಟೆಡ್ 600 ಕೋ ರೂ.
- ಜೆಎಫ್ಇ ಶೋಜಿ ಕಾರ್ಪೆರೇಷನ್ – 400 ಕೋ.ರೂ.
- ಶಿಂಡೆಂಜೆನ್ ಇಂಡಿಯಾ ಪ್ರೖೆವೇಟ್ ಲಿಮಿಟೆಡ್ – 254 ಕೋ.ರೂ.
- ಶಿಮಾಡ್ಜು ಕಾರ್ಪೆರೇಷನ್ – 139 ಕೋ.ರೂ.
- ಡೈಕಿ ಆಕ್ಸಿಸ್ – 100 ಕೋ.ರೂ.
- ಹಿಟಾಚಿ ಕನ್ಸ್ಟ್ರಕ್ಷನ್ ಮಷಿನರಿ ಕಂಪನಿ, ಲಿಮಿಟೆಡ್ – ಧಾರವಾಡದಲ್ಲಿ ಗ್ಲೋಬಲ್ ಕಾಂಪಿಟೆನ್ಸಿ ಸೆಂಟರ್ (ಜಿಸಿಸಿ) ಸ್ಥಾವರ ಸ್ಥಾಪನೆ
ರಾಜ್ಯದ ಸಮಗ್ರ ಕೈಗಾರಿಕಾ ಅಭಿವೃದ್ಧಿಗೆ ಬೇಕಾದ ಉದ್ಯಮಸ್ನೇಹಿ ನೀತಿಗಳು ಇತರರಿಗೆ ಮಾದರಿಯಾಗಿವೆ. ಸುಸ್ಥಿರ ಬೆಳವಣಿಗೆಯತ್ತ ದಾಪುಗಾಲಿಡಲಾಗುತ್ತಿದೆ.
| ಎಂ.ಬಿ. ಪಾಟೀಲ ಕೈಗಾರಿಕಾ ಸಚಿವ
ಕರ್ನಾಟಕದಲ್ಲಿ ಮುಂದಿನ ದಿನಗಳಲ್ಲಿ ಡೀಪ್-ಟೆಕ್, ಫಿನ್-ಟೆಕ್, ಫ್ಯೂಚರ್ ಇಂಡಸ್ಟ್ರಿಗಳಿಗೆ ಸಮೃದ್ಧ ಅವಕಾಶಗಳಿದ್ದು, ದೇಶವನ್ನು ಮುನ್ನಡೆಸಲಿದೆ.
| ಪಿಯೂಷ್ ಗೋಯಲ್ ಕೇಂದ್ರ ಸಚಿವ