

Byculla Zoo: ವೀರಮಾತಾ ಜಿಜಾಬಾಯಿ ಭೋಸಲೆ ಉದ್ಯಾನವನ ಎಂದು ಕರೆಯಲ್ಪಡುವ ಮುಂಬೈನ ಐಕಾನಿಕ್ ಬೈಕುಲ್ಲಾ ಮೃಗಾಲಯವು ಅಂತಾರಾಷ್ಟ್ರೀಯ ಹುಲಿ ದಿನದ ಅಂಗವಾಗಿ ಹೊಸ ವಿಡಿಯೋವನ್ನು ಬಿಡುಗಡೆ ಮಾಡಿದೆ. ಈ ಕಿರುಚಿತ್ರದಲ್ಲಿ ಹುಲಿಯ ಉಪಸ್ಥಿತಿ ಹಾಗೂ ಪರಿಸರ ವ್ಯವಸ್ಥೆಯಲ್ಲಿ ಅದರ ಪ್ರಮುಖ ಪಾತ್ರವನ್ನು ತೋರಿಸುತ್ತದೆ.
ಹುಲಿಯು ತನ್ನ ವಾಸನೆಯಿಂದಲೇ ಕಾಡಿನಾದ್ಯಂತ ಭಯದ ಅಲೆಗಳು ಹೇಗೆ ಸೃಷ್ಟಿ ಮಾಡುತ್ತದೆ ಎಂಬುದನ್ನು ಈ ವಿಡಿಯೋ ಎತ್ತಿ ತೋರಿಸುತ್ತಿದೆ. ಹುಲಿಗಳು ತುಂಬಾ ಜಾಗರೂಕರಾಗಿರುತ್ತವೆ. ಇವುಗಳ ಗಮನವನ್ನು ಯಾರಿಂದಲೂ ಹಿಮ್ಮೆಟ್ಟಿಸಲು ಸಾಧ್ಯವಿಲ್ಲ.
ಇದನ್ನೂ ಓದಿ: ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆಯಾಗಲಿ
ಹುಲಿಗಳ ವಿಶೇಷ ಗುಣವೆಂದರೆ, ತನ್ನ ಬೇಟೆಯ ಜನಸಂಖ್ಯೆಯನ್ನು ನಿಯಂತ್ರಿಸುತ್ತವೆ. ಅಂದರೆ, ಅಗತ್ಯಕ್ಕೆ ತಕ್ಕಂತೆ ಮಾತ್ರ ಬೇಟೆಯಾಡುತ್ತವೆ. ಕಾಡುಗಳಾದ್ಯಂತ ಇತರೆ ಜಾತಿಯ ಪ್ರಾಣಿಗಳ ಸಮತೋಲನವನ್ನು ಖಚಿತಪಡಿಸಿಕೊಂಡು ಪರಿಸರ ವ್ಯವಸ್ಥೆಯಲ್ಲಿ ಯಾವುದೇ ಅಸಮತೋಲನ ಆಗದಂತೆ ಬೇಟೆಯಾಡುತ್ತದೆ. ಇನ್ನು ಸುಲಭವಾಗಿ ಹೇಳಬೇಕೆಂದರೆ ಹುಲಿಗಳು ತನಗೆ ಬೇಕಾದಾಗ ಅಂದರೆ, ಹಸಿವಾದಾಗ ಮಾತ್ರ ಬೇಟೆಯಾಡುತ್ತವೆ. ಉಳಿದ ಸಯಮದಲ್ಲಿ ಯಾವುದೇ ಪ್ರಾಣಿಗಳಿಗೆ ಇದು ಹಾನಿ ಮಾಡುವುದಿಲ್ಲ. ಒಟ್ಟಾರೆ ಕಾಡಿನ ವ್ಯವಸ್ಥೆಯನ್ನು ಹಾಳು ಮಾಡದೇ ಸಮತೋಲನ ಕಾಯ್ದುಕೊಳ್ಳುತ್ತದೆ. ಆದರೆ, ಮನುಷ್ಯನ ವಿಚಾರದಲ್ಲಿ ಇದು ತದ್ವಿರುದ್ಧವಾಗಿದೆ. ದುರಾಸೆ ತುಂಬಿದ ಮನಷ್ಯನಿಗೂ ಹುಲಿಗೂ ಬಹಳ ವ್ಯತ್ಯಾಸವಿದೆ.
ಪ್ರಸ್ತುತ, ಬೈಕುಲ್ಲಾ ಮೃಗಾಲಯವು ಶಕ್ತಿ ಮತ್ತು ಕರಿಷ್ಮಾ ಎಂಬ ಎರಡು ರಾಯಲ್ ಬಂಗಾಳ ಹುಲಿಗಳನ್ನು ಹೊಂದಿವೆ. ಅವುಗಳ ಸಂತತಿಯಾದ ಜಯ್ ಮತ್ತು ರುದ್ರ ಹುಲಿಗಳಿಂದ ಮೃಗಾಲಯವು ಹೆಮ್ಮೆ ಪಡುತ್ತಿದೆ. ಹಾಗೇ 2021ರ ನವೆಂಬರ್ ತಿಂಗಳಲ್ಲಿ ಮೃಗಾಲಯವು ಮತ್ತೊಂದು ವೀರಾ ಎಂಬ ಹೆಣ್ಣು ಹುಲಿ ಮರಿಯನ್ನು ದತ್ತು ಪಡೆದುಕೊಂಡಿತ್ತು. ಹುಲಿ ಕುಟುಂಬಗಳು ಕೇವಲ ಜನಸಂದಣಿಯನ್ನು ಆಕರ್ಷಿಸುವ ಕುಟುಂಬವಲ್ಲ, ಬದಲಾಗಿ ಭಾರತದ ವನ್ಯಜೀವಿ ಪರಂಪರೆಯೊಂದಿಗಿನ ಆಳವಾದ ಸಂಬಂಧವನ್ನು ಹೊಂದಿವೆ.
ಇದನ್ನೂ ಓದಿ: 20 ಕೋಟಿ ರೂ.ಗಿಂತ ಅಧಿಕ ಹಾನಿ
ಪ್ರತಿ ವರ್ಷ ಜುಲೈ 29 ರಂದು ಅಂತಾರಾಷ್ಟ್ರೀಯ ಹುಲಿ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಹುಲಿಗಳು ಮತ್ತು ಅವುಗಳ ಆವಾಸಸ್ಥಾನಗಳನ್ನು ರಕ್ಷಿಸುವ ತುರ್ತು ಅಗತ್ಯವನ್ನು ಜಾಗತಿಕವಾಗಿ ನೆನಪಿಸುತ್ತದೆ. ವಿಶ್ವಾದ್ಯಂತ 4,000 ಕ್ಕಿಂತ ಕಡಿಮೆ ಕಾಡು ಹುಲಿಗಳು ಉಳಿದಿರುವುದರಿಂದ, ಬೇಟೆಯಾಡುವಿಕೆ, ವಾಸಸ್ಥಳ ನಷ್ಟ ಮತ್ತು ಮಾನವ-ವನ್ಯಜೀವಿ ಸಂಘರ್ಷಗಳು ಹುಲಿಗಳ ಪ್ರಾಣಕ್ಕೆ ಬೆದರಿಕೆ ಒಡ್ಡಿವೆ. ಹೀಗಾಗಿ ಈ ವಿಶೇಷ ದಿನ ಪ್ರಾಣಿಗಳ ಬಗ್ಗೆ ಜಾಗೃತಿ ಮೂಡಿಸುತ್ತವೆ. ಸಂರಕ್ಷಣಾ ಪ್ರಯತ್ನವನ್ನು ಹುಟ್ಟುಹಾಕಿ, ಸರ್ಕಾರ ಹಾಗು ಸಮುದಾಯಗಳು ವನ್ಯಜೀವಿ ರಕ್ಷಣೆಗೆ ಆದ್ಯತೆ ನೀಡುವಂತೆ ಪ್ರೋತ್ಸಾಹಿಸುತ್ತವೆ. (ಏಜೆನ್ಸೀಸ್)