

ಸಾಗರ: ಮಲೆನಾಡಿನಲ್ಲಿ ಅಡಕೆಗೆ ಕೊಳೆ, ಎಲೆಚುಕ್ಕೆ ರೋಗಗಳು ಬಾಧಿಸುತ್ತಿವೆ. ಇದರಿಂದ ಬಹಳಷ್ಟು ಫಸಲು ಹಾನಿಗೀಡಾಗಿದೆ. ಕೆಲವೆಡೆ ತೋಟಗಳೇ ನಾಶವಾಗುವ ಭೀತಿ ಇದೆ. ಬೆಳೆಗಾರರು ಆತಂಕದಲ್ಲಿದ್ದಾರೆ. ಮುಖ್ಯಮಂತ್ರಿಗಳು ಮತ್ತು ಸಂಬಂಧಿಸಿದ ಸಚಿವರಲ್ಲಿ ಹೆಚ್ಚಿನ ಪರಿಹಾರ ನೀಡಲು ಮನವಿ ಮಾಡಲಾಗುವುದು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಸಾಗರದ ಉಪವಿಭಾಗಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಮಳೆಹಾನಿ ಹಿನ್ನೆಲೆಯಲ್ಲಿ ಕರೆಯಲಾಗಿದ್ದ ವಿವಿಧ ಇಲಾಖೆಗಳ ಸಭೆಯಲ್ಲಿ ಮಾತನಾಡಿದ ಅವರು, ವಿಪರೀತ ಮಳೆಯಿಂದ ಸುಮಾರು 20 ಕೋಟಿ ರೂ.ಗಿಂತ ಅಧಿಕ ನಷ್ಟ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ ಎಂದರು.
50 ಅಂಗನವಾಡಿ, 265 ಶಾಲೆ, 23 ರಸ್ತೆ, 15 ಸೇತುವೆಗೆ ಹಾನಿಯಾಗಿದ್ದು, 10 ಕಡೆ ಭೂಕುಸಿತವಾಗಿದೆ. ಇದರ ಜತೆಗೆ ನೂರಾರು ಮನೆಗಳಿಗೆ ಹಾನಿಯಾಗಿದೆ. ಮೂರು ಸಾವಿರಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಅಧಿಕಾರಿಗಳು ನಷ್ಟದ ಅಂದಾಜು ತಯಾರಿಸುತ್ತಿದ್ದು, ಶೀಘ್ರವೇ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ವರದಿ ಸಲ್ಲಿಸಲಾಗುತ್ತದೆ. ಮಳೆಯಿಂದಾಗಿ ಜೋಳ, ಭತ್ತದ ಫಸಲಿಗೂ ಹಾನಿಯಾಗಿದೆ. ಅಧಿಕಾರಿಗಳು ವರದಿ ತಯಾರಿಸುವಾಗ ನಿಖರ ಮಾಹಿತಿ ಇರಲಿ. ರೈತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಿ ಎಂದರು.
ರಸಗೊಬ್ಬರ ಕೊರತೆ ಇಲ್ಲ: ಸಾಗರ ತಾಲೂಕಿನಲ್ಲಿ ರಸಗೊಬ್ಬರದ ಕೊರತೆ ಇಲ್ಲ. ಸಾಕಷ್ಟು ಸಂಗ್ರಹ ಇದ್ದು, ರೈತರಿಗೆ ಬಿತ್ತನೆಬೀಜ ಹಾಗೂ ರಸಗೊಬ್ಬರ ವಿತರಿಸಲಾಗುತ್ತದೆ. ಇದರ ಜತೆಗೆ ರೈತರಿಗೆ ಸಹಕಾರಿಯಾದ ನ್ಯಾನೋ ಯೂರಿಯಾ ಬಳಕೆ ಬಗ್ಗೆ ರೈತರಿಗೆ ಜಾಗೃತಿ ಮೂಡಿಸಲು ತಿಳಿಸಲಾಗಿದೆ ಎಂದು ಗೋಪಾಲಕೃಷ್ಣ ಹೇಳಿದರು. ಅಧಿಕಾರಿಗಳು ಮಳೆಗಾಲದಲ್ಲಿ ಕೆಲಸಕ್ಕೆ ರಜೆ ಹಾಕದೆ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಕೆಲವೆಡೆ ಮೆಸ್ಕಾಂ ಜೆಇಗಳು ಸಾರ್ವಜನಿಕರು ಕರೆ ಮಾಡಿದರೆ ಸ್ಪಂದಿಸುತ್ತಿಲ್ಲ. ಮೊಬೈಲ್ ಸ್ವಿಚ್ಆಫ್ ಮಾಡಿಕೊಂಡಿರುತ್ತಾರೆ ಎನ್ನುವ ದೂರುಗಳಿವೆ. ಅಂಥವರಿಗೆ ನೋಟಿಸ್ ಕೊಡಲು ತಿಳಿಸಿದ್ದೇನೆ ಎಂದರು.
ಸುತ್ತೋಲೆ ಹಿಂದಕ್ಕೆ: ಅರಣ್ಯ ಪ್ರದೇಶದಲ್ಲಿ ಸಾಕುಪ್ರಾಣಿಗಳನ್ನು ಮೇಯಲು ಬಿಡಬಾರದು ಎಂದು ಅರಣ್ಯ ಸಚಿವರು ನೀಡಿದ ಹೇಳಿಕೆಯನ್ನು ಅವರು ಹಿಂಪಡೆದಿದ್ದಾರೆ. ಆದರೂ ಪ್ರತಿಭಟನೆ ಮಾಡುತ್ತಿರುವುದು ಸರಿಯಲ್ಲ. ವೈಯಕ್ತಿಕ ಪ್ರತಿಷ್ಠೆ ಬಿಟ್ಟು ರೈತ ಸಂಘಗಳು ಪ್ರತಿಭಟನೆ ನಡೆಸಬೇಕು ಎಂದು ಬೇಳೂರು ಹೇಳಿದರು. ಈಚೆಗೆ ಕೆರೋಡಿ ಗ್ರಾಮದ ರೈತನ ಶುಂಠಿ ಬೆಳೆಯನ್ನು ಅರಣ್ಯ ಇಲಾಖೆ ನಾಶ ಮಾಡಿದೆ ಎಂದು ಪ್ರತಿಭಟನೆ ಮಾಡಿದ್ದರು. ಆದರೆ ಊರಿನ ಜಮೀನಿನಲ್ಲಿ ಕೃಷಿ ಮಾಡಿದ್ದರಿಂದ ಊರಿನವರು ತೆರವು ಮಾಡಿದ್ದಾರೆ. ರೈತ ಸಂಘದವರು ವಿಷಯ ತಿಳಿಯದೆ ಪ್ರತಿಭಟನೆ ಮಾಡಿದ್ದಾರೆ. ಸಾಕುಪ್ರಾಣಿಗಳ ವಿಷಯದಲ್ಲಿ ಸಹ ಅರಣ್ಯ ಸಚಿವರು ಹೇಳಿಕೆ ಹಿಂಪಡೆದಿದ್ದರೂ ಪ್ರತಿಭಟನೆ ನಡೆಸುತ್ತಿರುವುದು ಅರ್ಥವಿಲ್ಲದ್ದು ಎಂದರು.
ಉಪವಿಭಾಗಾಧಿಕಾರಿ ವಿರೇಶ್ಕುಮಾರ್, ತಹಸೀಲ್ದಾರ್ ಚಂದ್ರಶೇಖರ ನಾಯ್ಕ, ತಾಪಂ ಇಒ ಗುರುಕೃಷ್ಣ ಶೆಣೈ, ಕೃಷಿ ಅಧಿಕಾರಿ ಶಿವಪ್ರಕಾಶ್, ಬಿಇಒ ಪರಶುರಾಮಪ್ಪ, ಟಿ.ಪಿ.ರಮೇಶ್ ಇತರರಿದ್ದರು.