

ಬೆಂಗಳೂರು: ಕನ್ನಡದ ಹಲವು ಚಿತ್ರಗಳು ಇತ್ತೀಚಿನ ವರ್ಷಗಳಲ್ಲಿ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿವೆ. ಈ ಸಾಲಿಗೆ ಈಗ ಮೂರು ಚಿತ್ರಗಳು ಹೊಸದಾಗಿ ಸೇರ್ಪಡೆಯಾಗಿವೆ. ಈ ಪೈಕಿ ರಿಷಬ್ ಶೆಟ್ಟಿ ನಿರ್ಮಾಣದ ಮತ್ತು ನಟೇಶ್ ಹೆಗಡೆ ನಿರ್ದೇಶನದ ‘ಪೆಡ್ರೋ’ ಚಿತ್ರವು ಈಗಾಗಲೇ ಕೆಲವು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿದೆ. ಈಗ ಚಿತ್ರವು ಪಿಂಗ್ಯಾಯೋ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿದ್ದಷ್ಟೇ ಅಲ್ಲ, ನಟೇಶ್ ಹೆಗಡೆಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯೂ ಸಿಕ್ಕಿದೆ.
ಕೆ. ಗಣೇಶನ್ ಬರೆದು, ನಿರ್ದೇಶಿಸಿ, ನಿರ್ವಿುಸಿರುವ ‘ನಮ್ಮ ಮಗು’ ಚಿತ್ರವು ಐಓಎಮ್ ಯುನೆಸ್ಕೋ ಮತ್ತು ಅಮೇರಿಕನ್ ಸೆಂಟರ್ ಆಯೋಜಿಸಿದ್ದ ಯೂರೋ ಏಷ್ಯಾ ಚಿತ್ರೋತ್ಸವಕ್ಕೆ ಆಯ್ಕೆಯಾಗಿ ಪ್ರದರ್ಶನಗೊಂಡಿದೆ. ಗಣೇಶನ್ಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಸಿಕ್ಕಿದೆ. ಇನ್ನು, ಪವನ್ ಒಡೆಯರ್ ಮೊದಲ ಬಾರಿಗೆ ನಿರ್ವಿುಸಿರುವ ‘ಡೊಳ್ಳು’ ಚಿತ್ರವು ಬಾಂಗ್ಲಾದೇಶದ 20ನೇ ಢಾಕಾ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. ಸಾಗರ್ ಪುರಾಣಿಕ್ ನಿರ್ದೇಶಿಸಿರುವ ಈ ಚಿತ್ರದಲ್ಲಿ ಕಾರ್ತಿಕ್ ಮಹೇಶ್ ಮತ್ತು ನಿಧಿ ಹೆಗಡೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.