

ವಿಜಯಪುರ: ಉಪಚುನಾವಣೆ ಪ್ರಚಾರ ಸಮರ ತಾರಕಕ್ಕೇರಿದ್ದು, ಬಿಜೆಪಿಯಿಂದ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ಮುಂದುವರಿದಿದ್ದು, ಇದೀಗ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೂಡ ರಾಹುಲ್ ಗಾಂಧಿಯನ್ನು ಟೀಕಿಸಿದ್ದಾರೆ. ಮಾತ್ರವಲ್ಲ, ರಾಹುಲ್ ಗಾಂಧಿಯದ್ದು ಹುಚ್ಚರ ಕಂಪನಿ ಎಂದು ಹೇಳಿದ್ದಾರೆ.
ಸಿಂದಗಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯ ಘಟಾನುಘಟಿಗಳು ತಮ್ಮ ಪಕ್ಷದ ಅಭ್ಯರ್ಥಿ ರಮೇಶ ಭೂಸನೂರ ಅವರ ಪರ ಮತಯಾಚಿಸುತ್ತಿದ್ದು, ಪಕ್ಷ-ಪ್ರತಿಪಕ್ಷಗಳಿಂದ ಭಾರಿ ವಾಕ್ಸಮರವೇ ನಡೆಯುತ್ತಿದೆ.
ಸಿಂದಗಿಯಲ್ಲಿ ಪ್ರಚಾರ ವೇಳೆ ಯತ್ನಾಳ್ ವೇದಿಕೆಗೆ ಬರುತ್ತಿದ್ದಂತೆ ಕೆಲವರು ಹುಲಿ ಹುಲಿ ಎಂದು ಕೂಗಿದರು. ವಿ.ಸೋಮಣ್ಣ ಕಾಲಿಟ್ಟಲ್ಲಿ ಗೆಲುವು ಖಚಿತ ಎಂದು ಸೋಮಣ್ಣ ಅವರನ್ನು ಹಾಡಿಹೊಗಳುತ್ತ ಮಾತನಾಡಿದ ಯತ್ನಾಳ್, ರಾಹುಲ್ ಗಾಂಧಿ ವಿರುದ್ಧ ಕೆಂಡಕಾರಿದರು.
ರಾಹುಲ್ ಗಾಂಧಿ ಅಫೀಮು ಅಮಲಿನಲ್ಲಿ ಇರುತ್ತಾರೆ. ರಾಹುಲ್ ಗಾಂಧಿ ಒಬ್ಬ ಹುಚ್ಚ, ಅವರದ್ದು ಹುಚ್ಚರ ಕಂಪನಿ. ಅಂಥ ಹುಚ್ಚನಿಗೆ ಮತ ಹಾಕುತ್ತೀರಾ? ಎಂದು ಪ್ರಶ್ನಿಸಿದ ಯತ್ನಾಳ್, ಮಾಜಿ ಮುಖ್ಯಮಂತ್ರಿಯರಾದ ಸಿದ್ದರಾಮಯ್ಯ ಮತ್ತು ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಕೂಡ ವಾಗ್ದಾಳಿ ನಡೆಸಿದರು.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಬಗ್ಗೆ ನನಗೆ ಎಲ್ಲ ಗೊತ್ತಿದೆ. ಎಚ್ಡಿಕೆ ರಹಸ್ಯ ನನ್ನ ಬಳಿ ಇದೆ. ಆ ಕುರಿತು ಬಾಯಿ ಬಿಟ್ಟರೆ ಅದು ಬೇರೆಯದೇ ಆಗುತ್ತದೆ ಎಂದು ಕುಮಾರಸ್ವಾಮಿ ವಿರುದ್ಧ ಯತ್ನಾಳ್ ಟೀಕೆ ಮಾಡಿದರು.