

ಕಾಸರಗೋಡು: ಬದಿಯಡ್ಕ ಪೇಟೆಯ ವಿವಿಧ ಪ್ರದೇಶಗಳಲ್ಲಿ ದಾರಿ ಸೂಚಕ ಫಲಕ ಅಳವಡಿಸುವ ಮೂಲಕ ಇಲ್ಲಿನ ಆಟೋ ಚಾಲಕರ ಸಂಘ ಮಾದರಿಯಾಗಿದೆ.
ಪೇಟೆಯಲ್ಲಿ ನಿತ್ಯ ಸಂಚರಿಸುವ ವಾಹನಗಳಿಗೆ ವಿವಿಧ ಪ್ರದೇಶಗಳಿಗೆ ತೆರಳುವ ರಸ್ತೆಗಳ ಬಗ್ಗೆ ಮಾಹಿತಿಯಿದ್ದರೂ, ಹೊರಗಿಂದ ಬರುವ ಚಾಲಕರು ಗೊಂದಲಕ್ಕೊಳಗಾಗುತ್ತಿರುವುದು ಸಾಮಾನ್ಯವಾಗಿದೆ.
ಬದಿಯಡ್ಕದ ಮುಖ್ಯ ಜಂಕ್ಷನ್ನಿಂದ ಪೆರ್ಲ-&ಪುತ್ತೂರು, ಚೆರ್ಕಳ-&ಕಾಸರಗೋಡು, ಸೀತಾಂಗೋಳಿ&ಕುಂಬಳೆ, ಮೇಲಿನ ಪೇಟೆಯಲ್ಲಿ ನಾರಂಪಾಡಿ-, ಮುಳ್ಳೇರಿಯ, ನೇರಪ್ಪಾಡಿ-, ಏತಡ್ಕ ಪ್ರದೇಶಗಳಿಗೆ ಸಂಚರಿಸುವ ಬಗ್ಗೆ ಸೂಕ್ತ ಮಾಹಿತಿಯಿಲ್ಲದೆ ವಾಹನ ಚಾಲಕರು ಇಕ್ಕಟ್ಟಿಗೆ ಸಿಲುಕಬೇಕಾಗುತ್ತದೆ. ಬಹುತೇಕ ಸಂದರ್ಭ ಚಾಲಕರು ಸಾರ್ವಜನಿಕರಿಂದ ಮಾಹಿತಿ ಅರಸುತ್ತಾ ಸಾಗಬೇಕಾದ ಪರಿಸ್ಥಿತಿಯಿದೆ.
ಬದಿಯಡ್ಕ ಪೇಟೆಯ ಫ್ರೆಂಡ್ಸ್ ಆಟೋ ಚಾಲಕರು ಪೇಟೆಯ ವಿವಿಧ ಪ್ರದೇಶಗಳಲ್ಲಿ ಸೂಚನಾ ಫಲಕ ಅಳವಡಿಸಿ ವಾಹನ ಚಾಲಕರ ಗೊಂದಲ ನಿವಾರಣೆಗೆ ಸಹಾಯ ಮಾಡಿದ್ದಾರೆ.