

ಕಾಸರಗೋಡು: ಜಿಲ್ಲೆಯ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಸೇವೆಯನ್ನು ಖಾತ್ರಿಪಡಿಸುವುದರ ಜತೆಗೆ ನೇಮಕಾತಿ ಆದೇಶ ಬಂದರೂ ಕೆಲಸಕ್ಕೆ ಸೇರ್ಪಡೆಗೊಳ್ಳದ ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮಹಿಳಾ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯೆ ಅಶ್ವಿನಿ ಎಂ.ಎಲ್ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಕುಂಬ್ಡಾಜೆ ಕುಟುಂಬ ಆರೋಗ್ಯ ಕೇಂದ್ರದ ಇಬ್ಬರು ವೈದ್ಯರನ್ನು ಬದಲಾಯಿಸಲಾಗಿದ್ದು, ನೇಮಕಾತಿ ಇಲ್ಲದೆ ವರ್ಗಾವಣೆಗೊಂಡಿದ್ದಲ್ಲದೆ, ಕಾಸರಗೋಡು ಜನರಲ್ ಆಸ್ಪತ್ರೆಯ ತುರ್ತು ವಿಭಾಗದ ವೈದ್ಯಾಧಿಕಾರಿಯನ್ನೂ ವರ್ಗಾವಣೆ ಮಾಡಲಾಗಿದೆ. ಇದರಿಂದ 3 ವರ್ಷಗಳವರೆಗೆ ಸ್ಥಳ ಬದಲಾವಣೆ ಮಾಡುವುದಿಲ್ಲ ಎಂಬ ಆರೋಗ್ಯ ಸಚಿವರ ಭರವಸೆ ಸುಳ್ಳಾಗಿದೆ.
ಈ ವರ್ಷ ನೇಮಕಾತಿ ಲಭಿಸಿದ 182 ವೈದ್ಯರ ಪೈಕಿ ಪ್ರಸಕ್ತ ಜಿಲ್ಲೆಯಲ್ಲಿ ಕೇವಲ 17 ಮಂದಿ ಮಾತ್ರ ಸೇವೆಯಲ್ಲಿ ಉಳಿದುಕೊಂಡಿರುವುದು ಆಘಾತಕಾರಿ ಸಂಗತಿಯಾಗಿದೆ. ಈ ರೀತಿಯಾಗಿ ವೈದ್ಯರು ಬೇಕಾಬಿಟ್ಟಿ ವರ್ಗಾವಣೆ ಪಡೆದು ತೆರಳುತ್ತಿರುವುದನ್ನು ತಡೆಗಟ್ಟಲು ರಾಜ್ಯ ಸರ್ಕಾರ ಮತ್ತು ಆರೋಗ್ಯ ಇಲಾಖೆ ಸಿದ್ಧವಾಗಬೇಕು ಎಂದಿದ್ದಾರೆ.