

ಕಾನ್ಪುರ: ಮೂರನೇ ತರಗತಿ ವಿದ್ಯಾರ್ಥಿಯೋರ್ವ ಸಿನಿಮಾದಿಂದ ಉತ್ತೇಜನಗೊಂಡು ಶಾಲೆಯ ಮಹಡಿಯಿಂದ ಬಿದ್ದು ಗಂಭೀರವಾಗಿ ಗಾಯಮಾಡಿಕೊಂಡಿರುವ ಘಟನೆ ಉತ್ತರಪ್ರದೇಶದ ಕಾನ್ಪುರದ ಖಾಸಗಿ ಶಾಲೆಯೊಂದರಲ್ಲಿ ನಡೆದಿದೆ.
ಕಾನ್ಪುರದ ವೀರೇನ್ ಸ್ವರೂಪ್ ಶಾಲೆಯಲ್ಲಿ ಘಟನೆ ನಡೆದಿದ್ದು, ಬಾಲಕನ ದುಸಾಹಸದ ದೃಶ್ಯ ಎಲ್ಲೆಡೆ ವೈರಲ್ ಆಗಿದೆ. ಬಾಲಕನ ಸ್ಥಿತಿ ಚಿಂತಾಜನಕವಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ಕೊಡಲಾಗುತ್ತಿದೆ.
ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಶಾಲೆಯ ಪ್ರಾಂಶುಪಾಲರಾದ ನಂದಿತ ಮಾಲಿ ಗಾಯಗೊಂಡಿರುವ ಬಾಲಕ ಉದ್ಯಮಿಯೊಬ್ಬರ ಪುತ್ರನಾಗಿದ್ದು, ಕಳೆದ ವಾರ ಆತ ಬಾಲಿವುಡ್ನ ಹಿಟ್ ಸಿನಿಮಾ ಕ್ರಿಶ್ನನ್ನು ನೋಡಿ ಚಿತ್ರದಲ್ಲಿ ಮಾಡಲಾದ ಸಾಹಸ ದೃಶ್ಯಗಳಿಂದ ಉತ್ತೇಜನಗೊಂಡಿದ್ದಾಗಿ ಆತನ ತಾಯಿ ಬಳಿ ಹೇಳಿಕೊಂಡಿದ್ದಾನೆ.
ಬಳಿಕ ಶಾಲೆಯಲ್ಲಿ ತನ್ನ ಸ್ನೇಹಿತರ ಬಳಿ ಈ ವಿಚಾರವನ್ನು ಹಂಚಿಕೊಂಡಿದ್ದು, ನೀರು ಕುಡಿಯುವ ನೆಪದಲ್ಲಿ ಸಹಪಾಠಿಗಳ ಜೊತೆ ತರಗತಿಯಿಂದ ಹೊರ ಬಂದಿದ್ದಾನೆ. ಬಳಿಕ ತನ್ನ ಜೊತೆ ಧುಮ್ಮುಕುವಂತೆ ತನ್ನ ಸ್ನೇಹಿತರಿಗೆ ಹೇಳಿದ್ದಾನೆ. ಬಾಲಕನ ಮಾತನ್ನು ಲೆಕ್ಕಿಸದೆ ಆತನ ಸ್ನೇಹಿತರು ತಮ್ಮ ಪಾಡಿಗೆ ತಾವು ಹೊರಟು ಹೋಗಿದ್ದಾರೆ.
ಈ ವೇಳೆ ಬಾಲಕ ಮೊದಲನೇ ಮಹಡಿಯಿಂದ ಧುಮುಕ್ಕಿದ್ದು ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿ ಆತನ ಪೋಷಕರಿಗೆ ಮಾಹಿತಿ ನೀಡಲಾಗಿದೆ ಎಂದು ಶಾಲೆಯ ಪ್ರಾಂಶುಪಾಲರಾದ ನಂದಿತ ಮಾಲಿ ತಿಳಿಸಿದ್ದಾರೆ.