ಮೋಹದ ಬಲೆಗೆ ಬೀಳಿಸಲು ಬಿಲ್ಡರ್​ಗೆ ಗಾಳ: 10 ತಿಂಗಳ ಬಳಿಕ ಪೊಲೀಸರು ತೋಡಿದ ಖೆಡ್ಡಾಗೆ ಬಿದ್ದ ಇನ್​ಸ್ಟಾ ಸುಂದರಿ! Honey trapping

Honey trapping
Published on

Honey trapping : ಬಿಲ್ಡರ್ ಒಬ್ಬರನ್ನು ಹನಿಟ್ರ್ಯಾಪ್ ಬಲೆಗೆ ಬೀಳಿಸಿ ಅವರಿಂದ ಕೋಟಿಗಟ್ಟಲೆ ಹಣ ಸುಲಿಗೆ ಮಾಡಲು ಯತ್ನಿಸಿದ ಆರೋಪದ ಮೇಲೆ 10 ತಿಂಗಳಿಗೂ ಹೆಚ್ಚು ಕಾಲ ತಲೆಮರೆಸಿಕೊಂಡಿದ್ದ ಸೋಶಿಯಲ್​ ಮೀಡಿಯಾ ಇನ್ಫ್ಲುಯೆನ್ಸರ್​ನನ್ನು ಅಹಮದಾಬಾದ್‌ನಲ್ಲಿ ಬಂಧಿಸಲಾಗಿದೆ.

ಬಂಧಿತಳನ್ನು ಕೃತಿ ಪಟೇಲ್​ ಎಂದು ಗುರುತಿಸಲಾಗಿದೆ. ಈಕೆ ಇನ್​ಸ್ಟಾಗ್ರಾಂನಲ್ಲಿ 1.3 ಮಿಲಿಯನ್ಸ್​ ಫಾಲೋವರ್ಸ್​ ಹೊಂದಿದ್ದಾಳೆ. ಈಕೆಯ ವಿರುದ್ಧ ಕಳೆದ ವರ್ಷ ಜೂನ್​ 2ರಂದು ಪ್ರಕರಣ ದಾಖಲಾಗಿತ್ತು. ಅಲ್ಲದೆ, ಕೆಲ ಸಮಯದ ಬಳಿಕ ಆಕೆಯ ವಿರುದ್ಧ ವಾರೆಂಟ್​ ಕೂಡ ಜಾರಿ ಮಾಡಲಾಗಿತ್ತು. ಹತ್ತತ್ತಿರ ಒಂದು ವರ್ಷದ ಬಳಿಕ ಆಕೆಯನ್ನು ಬಂಧಿಸಲಾಗಿದೆ.

ಸೂರತ್‌ನಲ್ಲಿ ಬಿಲ್ಡರ್‌ ಒಬ್ಬರನ್ನು ಹನಿಟ್ರ್ಯಾಪ್ ಮಾಡಿ ಬ್ಲ್ಯಾಕ್‌ಮೇಲ್ ಮಾಡಿ ಕೋಟಿಗಟ್ಟಲೆ ಬೇಡಿಕೆ ಇಟ್ಟಿದ್ದ ಆರೋಪ ಕೃತಿ ಪಟೇಲ್ ಮೇಲಿತ್ತು. ಪ್ರಥಮ ಮಾಹಿತಿ ವರದಿಯಲ್ಲಿ (ಎಫ್‌ಐಆರ್) ಇತರ ನಾಲ್ವರ ಹೆಸರೂ ಇತ್ತು ಮತ್ತು ಅವರನ್ನು ಈಗಾಗಲೇ ಬಂಧಿಸಲಾಗಿದೆ ಎಂದು ಸೂರತ್​ನ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಭೂಕಬಳಿಕೆ ಮತ್ತು ಸುಲಿಗೆಯ ಇತರ ದೂರುಗಳಲ್ಲಿ ಕೃತಿ ಪಟೇಲ್​ ಹೆಸರಿದೆ ಎಂದು ಅಧಿಕಾರಿ ಹೇಳಿದ್ದಾರೆ.

ಸೂರತ್‌ನ ನ್ಯಾಯಾಲಯ ವಾರಂಟ್ ಹೊರಡಿಸಿದರು ಕೂಡ ಕೃತಿ ಪಟೇಲ್ ನಗರಗಳನ್ನು ಬದಲಾಯಿಸುವ ಮೂಲಕ ಮತ್ತು ತನ್ನ ಫೋನ್‌ನಲ್ಲಿ ವಿಭಿನ್ನ ಸಿಮ್ ಕಾರ್ಡ್‌ಗಳನ್ನು ಬಳಸುವ ಮೂಲಕ ಪೊಲೀಸರಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಿದ್ದಳು. ಕೊನೆಗೆ ಆಕೆಯನ್ನು ಅಹಮದಾಬಾದ್‌ನ ಸರ್ಖೇಜ್ ಪ್ರದೇಶದಲ್ಲಿ ಪತ್ತೆಹಚ್ಚಿ, ಬುಧವಾರ ಆಕೆಯನ್ನು ಬಂಧಿಸುವಲ್ಲಿ ಸೂರತ್​ ಪೊಲೀಸರು ಯಶಸ್ವಿಯಾಗಿದ್ದಾರೆ.

ನಾವು ಕಳೆದ 10 ತಿಂಗಳಿನಿಂದ ಕೀರ್ತಿ ಪಟೇಲ್ ಅವರನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದೆವು. ನಮ್ಮ ತಾಂತ್ರಿಕ ತಂಡ ಮತ್ತು ಸೈಬರ್ ತಜ್ಞರ ಸಹಾಯದಿಂದ ಅಹಮದಾಬಾದ್‌ನ ಸರ್ಖೇಜ್‌ನಲ್ಲಿ ಆಕೆಯ ಸ್ಥಳವನ್ನು ಪತ್ತೆಹಚ್ಚಿದೆವು. ನಾವು ಅಹಮದಾಬಾದ್‌ನಲ್ಲಿರುವ ಪೊಲೀಸರನ್ನು ಸಂಪರ್ಕಿಸಿ, ಅವರ ಸಹಾಯವನ್ನು ಪಡೆದು ಆಕೆಯನ್ನು ಬಂಧಿಸಿದೆವು. ಆಕೆಯ ಮೇಲೆ ಹನಿಟ್ರ್ಯಾಪಿಂಗ್ ಮತ್ತು ಸುಲಿಗೆ ಆರೋಪವಿದೆ. ಈ 10 ತಿಂಗಳಲ್ಲಿ ಗುಜರಾತ್‌ನ ವಿವಿಧ ಭಾಗಗಳಲ್ಲಿ ಆಕೆಯ ಸ್ಥಳ ನಿರಂತರವಾಗಿ ಬದಲಾಗುತ್ತಿತ್ತು. ಆಕೆಯ ಫೋನ್ ಸಂಖ್ಯೆಗಳು ಮತ್ತು ಸಿಮ್ ಕಾರ್ಡ್‌ಗಳಂತೆ ಐಪಿ ವಿಳಾಸವೂ ಬದಲಾಗುತ್ತಿತ್ತು. ಆಕೆಯ ಸ್ಥಳವನ್ನು ಪಡೆಯಲು ನಾವು ಇನ್​ಸ್ಟಾಗ್ರಾಂನೊಂದಿಗೂ ಸಮನ್ವಯ ಸಾಧಿಸಿದ್ದೇವೆ ಎಂದು ಪೊಲೀಸ್ ಉಪ ಆಯುಕ್ತ ಅಲೋಕ್ ಕುಮಾರ್ ಹೇಳಿದರು.

ಕೃತಿ ಪಟೇಲ್ ವಿರುದ್ಧ ಭೂಕಬಳಿಕೆ ಮತ್ತು ಸುಲಿಗೆ ಸೇರಿದಂತೆ ಹಲವಾರು ದೂರುಗಳಿವೆ. ಈ ಪ್ರಕರಣಗಳಲ್ಲಿಯೂ ನಾವು ಆಕೆಯ ಹೇಳಿಕೆಗಳನ್ನು ದಾಖಲಿಸುತ್ತೇವೆ ಮತ್ತು ಅವುಗಳನ್ನು ಮತ್ತಷ್ಟು ತನಿಖೆ ಮಾಡುತ್ತೇವೆ ಎಂದು ಅಲೋಕ್​ ಕುಮಾರ್​ ಹೇಳಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net