

Extra Marital Affair : ವಿವಾಹೇತರ ಸಂಬಂಧಕ್ಕೆ ಗಂಡ ಅಡ್ಡಿಯಾಗುತ್ತಾನೆಂದು ಭಾವಿಸಿ, ಪ್ರಿಯಕರನ ಜತೆ ಸೇರಿ ಆತನನ್ನು ಬರ್ಬರವಾಗಿ ಕೊಲೆ ಮಾಡಿದ ಕಿರಾತಕಿ, ಕೊಲೆಯನ್ನು ಅಪಘಾತ ಎಂದ ಬಿಂಬಿಸಲು ಹೋಗಿ ಸಿಕ್ಕಿಬಿದ್ದಿರುವ ಆಘಾತಕಾರಿ ಘಟನೆ ರಾಜಸ್ಥಾನದ ಜುಂಜುನುವಿನಲ್ಲಿ ನಡೆದಿದೆ.
ಕೊಲೆಯಾದ ವ್ಯಕ್ತಿಯನ್ನು ಅನೂಪ್ ಸಿಂಗ್ ಯಾದವ್ ಎಂದು ಗುರುತಿಸಲಾಗಿದೆ. ಆತನ ಪತ್ನಿ ಪೂನಂ (45) ಹಾಗೂ ಆಕೆಯ ಪ್ರಿಯಕರ ಕೃಷ್ಣ ಕುಮಾರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಕೃಷ್ಣ ಕುಮಾರ್, ಪೂನಂಗಿಂತ 14 ವರ್ಷ ಚಿಕ್ಕವನು. ಈತ ನೀರು ಸರಬರಾಜುದಾರನಾಗಿ ಕೆಲಸ ಮಾಡುತ್ತಿದ್ದ.
ಜೂನ್ 10ರ ರಾತ್ರಿ ಜುಂಜುನುವಿನ ಗೋಹಾನಾದ ಪಚೇರಿ ರಸ್ತೆಯಲ್ಲಿ ಅನೂಪ್ ಸಿಂಗ್ ಯಾದವ್ ಮೃತದೇಹ ಪತ್ತೆಯಾಯಿತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ತನಿಖೆಯನ್ನು ಆರಂಭಿಸಿದರು. ಅನೂಪ್ ಅವರ ಮಗಳು ತನ್ನ ತಂದೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆಂದು ದೂರು ದಾಖಲಿಸಿದ್ದಳು. ಆದರೆ, ಪೊಲೀಸರಿಗೆ ಅಪಘಾತವಲ್ಲ, ಕೊಲೆ ಎಂಬ ಸಣ್ಣ ಅನುಮಾನ ಇತ್ತು.
ತನಿಖೆಯ ಭಾಗವಾಗಿ, ಪೊಲೀಸರು, ಅನೂಪ್ ಪತ್ನಿ ಪೂನಂಳನ್ನು ವಿಚಾರಣೆ ನಡೆಸಿದರು. ಅಲ್ಲದೆ, ಆಕೆಯ ಕರೆ ವಿವರಗಳು ಮತ್ತು ಇತರ ಪುರಾವೆಗಳನ್ನು ಸಂಗ್ರಹಿಸಿದಾಗ, ತನ್ನ ಪ್ರಿಯಕರ ಕೃಷ್ಣ ಕುಮಾರ್ ಜತೆಗೂಡಿ ಕೊಲೆ ಮಾಡಿದ್ದಾಳೆ ಎಂಬ ಸ್ಫೋಟಕ ಸಂಗತಿ ಬಯಲಿಗೆ ಬಂದಿತು. ಸಾಕ್ಷ್ಯಾಧಾರಗಳ ಆಧಾರದ ಮೇಲೆ ಪೊಲೀಸರು ಪೂನಂ ಮತ್ತು ಆಕೆಯ ಪ್ರಿಯಕರ ಕೃಷ್ಣ ಕುಮಾರ್ನನ್ನು ಬಂಧಿಸಿದ್ದಾರೆ.
ಪೊಲೀಸರು ಪೂನಂ ಮತ್ತು ಆಕೆಯ ಪ್ರಿಯಕರ ಕೃಷ್ಣ ಕುಮಾರ್ ಅವರನ್ನು ಪ್ರಶ್ನಿಸಿದಾಗ, ಕುತೂಹಲಕಾರಿ ವಿಷಯಗಳು ಬೆಳಕಿಗೆ ಬಂದವು. ಜೂನ್ 10 ರಂದು ಅನೂಪ್ಗೆ ಕಂಠಪೂರ್ತಿ ಮದ್ಯ ಕುಡಿಸಿದ ಕೃಷ್ಣ ಕುಮಾರ್, ಕಬ್ಬಿಣದ ಸುತ್ತಿಗೆಯಿಂದ ಅನೂಪ್ ಎದೆಗೆ ಬಲವಾಗಿ ಹೊಡೆದಿದ್ದ. ಗಂಭೀರ ಗಾಯಗಳಿಂದ ಅನೂಪ್ ಸ್ಥಳದಲ್ಲೇ ಮೃತಪಟ್ಟನು. ಇದಾದ ನಂತರ, ಕೃಷ್ಣ ಕುಮಾರ್, ಅನೂಪ್ ದೇಹವನ್ನು ರಸ್ತೆಯ ಬದಿಯಲ್ಲಿ ಎಸೆದು ಪರಾರಿಯಾಗಿದ್ದ. ಅಪಘಾತ ಎಂದು ಬಿಂಬಿಸುವುದು ಅವರ ಯೋಜನೆಯಾಗಿತ್ತು. ಆದರೆ, ಅದು ವಿಫಲವಾಯಿತು.
ಕೃಷ್ಣ ಕುಮಾರ್, ಪೂನಂ ಮನೆಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿದ್ದ. ಪೂನಂ ಮತ್ತು ಕೃಷ್ಣ ಕುಮಾರ್ 2018 ರಲ್ಲಿ ಮೊದಲ ಬಾರಿಗೆ ಭೇಟಿಯಾದರು. ಆ ಸಮಯದಲ್ಲಿ ಕೃಷ್ಣ ಕುಮಾರ್ಗೆ 24 ವರ್ಷ ವಯಸ್ಸಾಗಿತ್ತು. ಈ ವೇಳೆ ಪರಿಚಯ ಪ್ರೀತಿಗೆ ತಿರುಗಿ ಅಕ್ರಮ ಸಂಬಂಧಕ್ಕೆ ಕಾರಣವಾಯಿತು. ಅನೂಪ್ ಮನೆಯಲ್ಲಿ ಇಲ್ಲದಿದ್ದಾಗ ಕೃಷ್ಣ ಕುಮಾರ್ ಆಗಾಗ ಪೂನಂ ಮನೆಗೆ ಬರುತ್ತಿದ್ದ. ಪೂನಂ ಮತ್ತು ಕೃಷ್ಣ ಕುಮಾರ್ 7 ವರ್ಷಗಳ ಕಾಲ ಅಕ್ರಮ ಸಂಬಂಧ ಹೊಂದಿದ್ದರು. ಆದರೆ, ಘಟನೆಗೂ ಮುನ್ನ ಅನೂಪ್ ತನ್ನ ಕೆಲಸವನ್ನು ಬಿಟ್ಟು 4 ತಿಂಗಳು ಮನೆಯಲ್ಲಿಯೇ ಇದ್ದ. ಈ ಸಮಯದಲ್ಲಿ, ಕೃಷ್ಣ ಕುಮಾರ್ ಮತ್ತು ಪೂನಂ ಪರಸ್ಪರ ಭೇಟಿಯಾಗುವುದು ಕಷ್ಟಕರವಾಯಿತು.
ಹೀಗಿರುವಾಗ ಪೂನಂ ಮತ್ತು ಕೃಷ್ಣ ಕುಮಾರ್ ನಡುವಿನ ಅಕ್ರಮ ಸಂಬಂಧದ ಬಗ್ಗೆ ಅನೂಪ್ಗೆ ತಿಳಿಯಿತು. ಇದರಿಂದಾಗಿ ಪೂನಂ ಮತ್ತು ಅನೂಪ್ ನಡುವೆ ಪ್ರತಿದಿನ ಜಗಳಗಳು ನಡೆಯುತ್ತಿದ್ದವು. ಬಳಿಕ ಗಂಡನನ್ನೇ ಮುಗಿಸಲು ಮುಂದಾದಳು. ಪೂನಂ ಮತ್ತು ತನ್ನ ಪ್ರಿಯಕರ ಕೃಷ್ಣ ಕುಮಾರ್ ಜತೆ ಸೇರಿ ಅನೂಪ್ನನ್ನು ಕೊಲ್ಲಲು ಸಂಚು ರೂಪಿಸಿದಳು ಎಂದು ತಿಳಿದುಬಂದಿದೆ. ಸದ್ಯ ಪೊಲೀಸರು ಪೂನಂ ಮತ್ತು ಆಕೆಯ ಪ್ರಿಯಕರ ಕೃಷ್ಣ ಕುಮಾರ್ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗಳನ್ನು ಪೊಲೀಸ್ ರಿಮಾಂಡ್ಗೆ ಕಳುಹಿಸಿದೆ. (ಏಜೆನ್ಸೀಸ್)