

ಹೈದರಾಬಾದ್: ಪ್ರಭಾಸ್ ಅಭಿನಯದ 'ರಾಧೆ ಶ್ಯಾಮ್' ಚಿತ್ರಕ್ಕೆ ಎರಡು ತಿಂಗಳುಗಳಿಂದ ಸತತ ಚಿತ್ರೀಕರಣ ನಡೆಯುತ್ತಿದ್ದು, ಚಿತ್ರವು ಮುಕ್ತಾಯದ ಹಂತದಲ್ಲಿದೆ.
ಈ ಮಧ್ಯೆ, ಮಾಜಿ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಅವರನ್ನು ಪ್ರಭಾಸ್ ಪಾತ್ರಧಾರಿ ಭೇಟಿ ಮಾಡಿ ಮಾತುಕತೆಯಾಡುವ ಮಹತ್ವದ ಸನ್ನಿವೇಶಗಳನ್ನು ಇತ್ತೀಚೆಗೆ ಚಿತ್ರೀಕರಿಸಿಕೊಳ್ಳಲಾಗಿದೆಯಂತೆ. 'ರಾಧೆ ಶ್ಯಾಮ್' ಚಿತ್ರದ ಕಥೆಯಲ್ಲಿ ಇಂದಿರಾ ಗಾಂಧಿ ಅವರ ಪಾತ್ರ ಯಾಕೆ ಬರುತ್ತದೆ ಎಂಬ ಪ್ರಶ್ನೆ ಬರುವುದು ಸಹಜ. ಆದರೆ, ಈ ವಿಷಯವಾಗಿ ಚಿತ್ರತಂಡದವರು ಎಲ್ಲೂ ಬಾಯಿಬಿಟ್ಟಿಲ್ಲ. ಇದನ್ನು ರಹಸ್ಯವಾಗಿಟ್ಟುಕೊಂಡಿರುವ ಚಿತ್ರತಂಡ, ತೆರೆಯ ಮೇಲೆ ರಹಸ್ಯವನ್ನು ಬಯಲು ಮಾಡುವುದಕ್ಕೆ ಮುಂದಾಗಿದೆ.
ವಿಶೇಷವೆಂದರೆ, 'ಕೆಜಿಎಫ್ 2' ಚಿತ್ರದಲ್ಲೂ ಇಂದಿರಾ ಗಾಂಧಿ ಅವರನ್ನು ಹೋಲುವ ಪಾತ್ರವೊಂದಿದ್ದು, ಆ ಪಾತ್ರವನ್ನು ರವೀನಾ ಟಂಡನ್ ನಿರ್ವಹಿಸಿದ್ದಾರೆ. ಈಗ 'ರಾಧೇ ಶ್ಯಾಮ್' ಚಿತ್ರದಲ್ಲೂ ಅದೇ ತರಹದ ಪಾತ್ರ ಇರುವುದು ವಿಶೇಷ.
ಇನ್ನು,ಇತ್ತೀಚೆಗೆ ರಾಮೋಜಿ ರಾವ್ ಫಿಲ್ಮ್ಸಿಟಿಯಲ್ಲಿ ಪ್ರಧಾನ ಮಂತ್ರಿಯವರ ಕಾರ್ಯಾಲಯವನ್ನು ಹೋಲುವ ಸೆಟ್ ಹಾಕಿ, ಅಲ್ಲಿ ಮಹತ್ವದ ಸನ್ನಿವೇಶಗಳನ್ನು ಚಿತ್ರೀಕರಣ ಮಾಡಲಾಗಿದೆಯಂತೆ. ಈ ಚಿತ್ರದಲ್ಲಿ ಪ್ರಭಾಸ್ ಎರಡು ಪಾತ್ರಗಳನ್ನು ನಿರ್ವಹಿಸಿದ್ದು, ಒಂದು ಪಾತ್ರವು 70ರ ದಶಕದ ಕಾಲಘಟ್ಟದಲ್ಲಿದ್ದರೆ, ಇನ್ನೊಂದು ಪಾತ್ರವು ಈಗಿನ ಕಾಲಘಟ್ಟದಲ್ಲಿರುತ್ತದಂತೆ.
ಇದನ್ನೂ ಓದಿ: ನಟಿ ಸಂಜನಾಗೆ ಜಾಮೀನು ಮಂಜೂರು
'ರಾಧೆ ಶ್ಯಾಮ್ ಚಿತ್ರವನ್ನು ರಾಧಾಕೃಷ್ಣ ಕುಮಾರ್ ನಿರ್ದೇಶನ ಮಾಡುತ್ತಿದ್ದು, ಈ ಚಿತ್ರದಲ್ಲಿ ಪ್ರಭಾಸ್ಗೆ ನಾಯಕಿಯಾಗಿ ಪೂಜಾ ಹೆಗ್ಡೆ ನಟಿಸುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣ ಸದ್ಯದಲ್ಲೇ ಮುಗಿಯಲಿದ್ದು, ಮುಂದಿನ ತಿಂಗಳನಿಂದ ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಚಿತ್ರದ ಚಿತ್ರೀಕರಣದಲ್ಲಿ ಪ್ರಭಾಸ್ ಭಾಗವಹಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.