ಸೇನಾಧಿಕಾರಿ-ಭಾವಿ ಪತ್ನಿ ಮೇಲೆ ಪೊಲೀಸರಿಂದ ಹಲ್ಲೆ; ನ್ಯಾಯಾಂಗ ತನಿಖೆ ನಡೆಸುವಂತೆ ಆಗ್ರಹ

Untitled-design-2024-09-20T163024.150
Published on

ಭುವನೇಶ್ವರ್: ಪೊಲೀಸ್​ ಕಸ್ಟಡಿಯಲ್ಲಿದ್ದ ಮಹಿಳೆಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಎಸ್‌ಐಟಿ ಮತ್ತು ನ್ಯಾಯಾಂಗ ತನಿಖೆಗೆ ನೀಡುವಂತೆ ಒಡಿಶಾದ ಮಾಜಿ ಸಿಎಂ, ಬಿಜು ಜನತಾ ದಳ (ಬಿಜೆಡಿ) ಅಧ್ಯಕ್ಷ ನವೀನ್ ಪಟ್ನಾಯಕ್ ಒತ್ತಾಯಿಸಿದ್ದಾರೆ. ಠಾಣೆಯಲ್ಲಿ ನಡೆದಿರುವ ಈ ಘಟನೆಯನ್ನು ಖಂಡಿಸಿ, ಇದು ಅತ್ಯಂತ ಆಘಾತಕಾರಿ ಎಂದು ಹೇಳಿದ್ದಾರೆ.

ಈ ಘಟನೆ ರಾಜ್ಯದ ಬಿಜೆಪಿ ಸರ್ಕಾರದ ಆಡಳಿತಕ್ಕೆ ಕೈಗನ್ನಡಿಯಾಗಿದೆ. ಭುವನೇಶ್ವರದ ಭರತ್‌ಪುರ ಪೊಲೀಸ್ ಠಾಣೆಯಲ್ಲಿ ಸೇನಾ ಅಧಿಕಾರಿ ಮತ್ತು ಆತನ ಗೆಳತಿ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ ಅಘಾತಕಾರಿಯಾಗಿದೆ. ಪಕ್ಷವು ಇಂಥಾ ಹೇಯ ಕೃತ್ಯವನ್ನು ಖಂಡಿಸುತ್ತದೆ. ಒಡಿಶಾದಲ್ಲಿ ಸೇವೆ ಸಲ್ಲಿಸುತ್ತಿರುವ ಸೇನಾ ಅಧಿಕಾರಿ ಮತ್ತು ಅವರು ಮದುವೆಯಾಗಲು ನಿಶ್ಚಯವಾಗಿರುವ ಹುಡುಗಿಗೆ ಇದು ಸಂಭವಿಸಿದೆ ಎಂದು ತಿಳಿಸಿದರು.

ಘಟನೆಗೆ ಸಂಬಂಧಿಸಿದಂತೆ ಐವರು ಪೊಲೀಸರನ್ನು ಅಮಾನತುಗೊಳಿಸಿದ್ದಾರೆ. ಸೇನಾಧಿಕಾರಿ ಮತ್ತು ಅವರ ಗೆಳತಿ ದೂರು ನೀಡಲು ಭರತ್‌ಪುರ ಪೊಲೀಸ್ ಠಾಣೆಗೆ ಬಂದಿದ್ದರು. ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಇಬ್ಬರೂ ಪೊಲೀಸರೊಂದಿಗೆ ಘರ್ಷಣೆ ನಡೆಸಿದ್ದಾರೆ. ನಂತರ ಸೇನಾಧಿಕಾರಿಯನ್ನು ಲಾಕಪ್‌ಗೆ ಹಾಕಲಾಗಿದೆ. ಆತನ ಗೆಳತಿಯನ್ನು ಮಹಿಳಾ ಪೊಲೀಸರು ಏಕಾಂತ ಕೊಠಡಿಗೆ ಕರೆದೊಯ್ದಿದ್ದಾರೆ. ತನ್ನನ್ನು ಬಂಧಿಸಿದ ನಂತರ ಪೊಲೀಸರು ತನ್ನೊಂದಿಗೆ ಅನುಚಿತವಾಗಿ ವರ್ತಿಸಿದರು ಎಂದು ಮಹಿಳೆ ಆರೋಪಿಸಿದ್ದಾರೆ. ಬಂಧನದ ನಂತರ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ. ಹೈಕೋರ್ಟ್ ಆದೇಶದ ನಂತರ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ವೈ.ಬಿ.ಖುರಾನಿಯಾ ಅವರು ಹೊರಡಿಸಿದ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಸೇನಾಧಿಕಾರಿಯ ಭಾವಿ ಪತ್ನಿಗೆ ಲೈಂಗಿಕ ದೌರ್ಜನ್ಯ ನೀಡಿದ ಆರೋಪದಲ್ಲಿ ಭಾಗಿಯಾಗಿರುವ ಆರೋಪಿ ಪೊಲೀಸ್ ಸಿಬ್ಬಂದಿಯನ್ನು ಬಂಧಿಸುವಂತೆ ಒತ್ತಾಯಿಸಿ ಮಹಿಳಾ ಕಾರ್ಯಕರ್ತೆಯರು ಶುಕ್ರವಾರ ಪೊಲೀಸ್ ಭವನದ ಎದುರು ಪ್ರತಿಭಟನೆ ನಡೆಸಿದರು. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net