

Anderson-Tendulkar; ಭಾರತ ಮತ್ತು ಇಂಗ್ಲೆಂಡ್ ನಡುವೆ ಆಯೋಜನೆಯಾಗುವ ಟೆಸ್ಟ್ ಕ್ರಿಕೆಟ್ ಸರಣಿಯ ಪಟೌಡಿ ಟ್ರೋಫಿಯನ್ನು ಇದೀಗ ಆ್ಯಂಡರ್ಸನ್-ತೆಂಡೂಲ್ಕರ್ ಟ್ರೋಫಿ ಎಂದು ಮರು ನಾಮಕರಣ ಮಾಡಲಾಗಿದೆ. ಸಚಿನ್ ಹಾಗೂ ಆ್ಯಂಡರ್ಸನ್ ಗೌರವಾರ್ಥವಾಗಿ ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ ಮತ್ತು ಬಿಸಿಸಿಐ ಜಂಟಿಯಾಗಿ ಈ ನಿರ್ಧಾರ ತೆಗೆದುಕೊಂಡಿದೆ.
ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯನ್ನು ಮರುನಾಮಕರಣ ಮಾಡಲಾಗುತ್ತಿದೆ ಎಂದು ತಿಳಿದ ಬಳಿಕ, ದಿವಂಗತ ಮನ್ಸೂರ್ ಅಲಿ ಪಟೌಡಿ ಅವರ ಕುಟುಂಬವನ್ನು ಸಂಪರ್ಕಿಸಿ ದಿಗ್ಗಜನ ಪರಂಪರೆಯನ್ನು ಜೀವಂತವಾಗಿಡಲು ಬೇಕಾದ ಎಲ್ಲಾ ಪ್ರಯತ್ನಗಳನ್ನು ಮಾಡುತ್ತೇನೆಂದು ಇಂದು (19) ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.
ಹಲವು ಪೀಳಿಗೆಗಳಿಗೆ ಸ್ಫೂರ್ತಿ ನೀಡುವಲ್ಲಿ ಟೈಗರ್ ಪಟೌಡಿ ಮಹತ್ತರ ಪಾತ್ರ ವಹಿಸಿದ್ದಾರೆ. ಅದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ, ಪಟೌಡಿ ಹೆಸರು ಭಾರತ-ಇಂಗ್ಲೆಂಡ್ ಸರಣಿಯೊಂದಿಗೆ ಮುಂದುವರಿಯಲಿದ್ದು, ವಿಜೇತ ನಾಯಕನಿಗೆ ಹೊಸದಾಗಿ ರೂಪಿಸಲಾದ 'ಪಟೌಡಿ ಪದಕ' ನೀಡಲು ನಿರ್ಧಾರ ಮಾಡಲಾಗಿದೆ. ಈ ಸಂಬಂಧ ಐಸಿಸಿ ಅಧ್ಯಕ್ಷ ಜಯ್ ಶಾ ಹಾಗೂ ಇಸಿಬಿ ಜೊತೆಗೂ ಮಾತುಕತೆ ನಡೆಸಿರುವುದಾಗಿ ಸಚಿನ್ ಹೇಳಿದ್ದಾರೆ.
ಇನ್ನೂ ಸಚಿನ್ ತೆಂಡೂಲ್ಕರ್ ಒಟ್ಟಿಗೆ ಜೇಮ್ಸ್ ಆಂಡರ್ಸನ್ ಸಹ ಟ್ರೋಫಿ ಅನಾವರಣ ಸಮಾರಂಭದಲ್ಲಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಜೇಮ್ಸ್ ಆಂಡರ್ಸನ್, ಈ ಪ್ರತಿಷ್ಠಿತ ಸರಣಿಗೆ ಸಚಿನ್ ಮತ್ತು ನನ್ನ ಹೆಸರಿಡಲಾಗಿರುವುದರಿಂದ ಇದು ನನಗೆ ಮತ್ತು ನನ್ನ ಕುಟುಂಬಕ್ಕೆ ಹೆಮ್ಮೆಯ ಸಂಗತಿಯಾಗಿದೆ. ನಮ್ಮ ಎರಡು ದೇಶಗಳ ನಡುವಿನ ಪೈಪೋಟಿ ಯಾವಾಗಲೂ ವಿಶೇಷವಾದದ್ದು, ಇದು ಮರೆಯಲಾಗದ ಕ್ಷಣಗಳಿಂದ ತುಂಬಿದೆ ಎಂದಿದ್ದಾರೆ.
(ಏಜೆನ್ಸೀಸ್)
ಭಾರತ ತಂಡವು ಈ ಸರಣಿಯ ಮೊದಲ ಟೆಸ್ಟ್ ಪಂದ್ಯವನ್ನು ಜೂನ್ 20 ರಿಂದ ಲೀಡ್ಸ್‌ನಲ್ಲಿ ನಡೆಯಲಿದೆ. ಆ ಬಳಿಕ ಎರಡನೇ ಟೆಸ್ಟ್ ಜುಲೈ 2 ರಿಂದ ಬರ್ಮಿಂಗ್ಹ್ಯಾಮ್‌ನಲ್ಲಿ ನಡೆಯಲಿದೆ. ಮೂರನೇ ಟೆಸ್ಟ್ ಜುಲೈ 10 ರಿಂದ ಲಾರ್ಡ್ಸ್‌ನಲ್ಲಿ ನಡೆಯಲಿದ್ದು, ನಾಲ್ಕನೇ ಟೆಸ್ಟ್ ಜುಲೈ 23 ರಿಂದ ಮ್ಯಾಂಚೆಸ್ಟರ್‌ನಲ್ಲಿ ನಡೆಯಲಿದೆ. ಐದನೇ ಟೆಸ್ಟ್ ಜುಲೈ 31 ರಿಂದ ಲಂಡನ್‌ನ ಓವಲ್‌ನಲ್ಲಿ ನಡೆಯಲಿದೆ.