More

    ಏಕತಾ ಬಂದರು ಏತಕೆ?

    ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಮಾಲ್ದೀವ್ಸ್ ರಕ್ಷಣಾ ಸಚಿವೆ ಮರಿಯಾ ದೀದಿ ಕೆಲ ದಿನಗಳ ಹಿಂದೆ ಮಾಲ್ದೀವ್ಸ್​ನ ಉತುರು ತಿಲಾ ಫಲ್ಹು (ಯುಟಿಎಫ್) ಹವಳ ದ್ವೀಪದ ಸಿಫವಾರುದಲ್ಲಿ ಕರಾವಳಿ ಪಡೆಯ ಏಕತಾ ಬಂದರಿಗೆ ಶಂಕುಸ್ಥಾಪನೆ ನೆರವೇರಿಸಿದರು. ಈ ಬೆಳವಣಿಗೆಯು ಉಭಯ ದೇಶಗಳ ನಡುವಿನ ರಕ್ಷಣಾ ಬಾಂಧವ್ಯದಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಭಾರತದ ಅನುದಾನ-ಸಹಾಯದ ಮೂಲಕ ಅಲ್ಲಿ ಕೈಗೊಳ್ಳುತ್ತಿರುವ ಯೋಜನೆಗಳ ಪೈಕಿ ಈ ಬಂದರು ನಿರ್ಮಾಣ ಅತಿದೊಡ್ಡ ಕಾಮಗಾರಿಯಾಗಿದೆ.

    ದ್ವೀಪರಾಷ್ಟ್ರವಾದ ಮಾಲ್ದೀವ್ಸ್​ಗೆ ರಾಜನಾಥ್ ಸಿಂಗ್ ಅವರ ಮೂರು ದಿನಗಳ ಭೇಟಿ ಸಂದರ್ಭದಲ್ಲಿ ಭಾರತವು ಮಾಲ್ದೀವ್ಸ್ ರಾಷ್ಟ್ರೀಯ ರಕ್ಷಣಾ ಪಡೆಗೆ (ಎಂಎನ್​ಡಿಎಫ್) ಲ್ಯಾಂಡಿಂಗ್ ಕ್ರಾಫ್ಟ್ (ಸಣ್ಣ ಜಲನೌಕೆ) ಅನ್ನು ಉಡುಗೊರೆಯಾಗಿ ನೀಡಿತು.

    ಬಂದರು ಯೋಜನೆಯ ಮಹತ್ವ: 2021ರ ಫೆಬ್ರವರಿಯಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಭೇಟಿಯ ಸಂದರ್ಭದಲ್ಲಿ ಏಕತಾ ಬಂದರು ಯೋಜನೆ ಘೊಷಿಸಲಾಗಿತ್ತು. ಯುಟಿಎಫ್ ಅಟಾಲ್​ನಲ್ಲಿ ಕೋಸ್ಟ್ ಗಾರ್ಡ್ ಬಂದರನ್ನು ಅಭಿವೃದ್ಧಿಪಡಿಸುವ, ಬೆಂಬಲಿಸುವ ಮತ್ತು ನಿರ್ವಹಿಸುವ ಒಪ್ಪಂದಕ್ಕೆ ಜೈಶಂಕರ್ ಸಹಿ ಹಾಕಿದ್ದರು. ಈ ಸೌಲಭ್ಯವು ಎಂಎನ್​ಡಿಎಫ್​ನ ನೌಕಾಪಡೆಯಾದ ಮಾಲ್ದೀವ್ಸ್ ಕರಾವಳಿ ಪಡೆಯ ಬಲವರ್ಧನೆಗೆ ಮಹತ್ವದ್ದಾಗಿದೆ. ಈ ಬಂದರಿನಿಂದಾಗಿ, ಮಾಲ್ದೀವ್ಸ್ ತನ್ನ ನೌಕೆಗಳನ್ನು ನಿರ್ವಹಣೆಗಾಗಿ ವಿದೇಶಗಳಿಗೆ ಕಳುಹಿಸಲು ಬದಲು ತಾನೇ ಮಾಡಿಕೊಳ್ಳಲು ಅನುಕೂಲವಾಗುತ್ತದೆ ಎಂದು ವಿದೇಶಾಂಗ ಸಚಿವ ಅಬ್ದುಲ್ಲಾ ಶಾಹಿದ್ ಹೇಳಿದ್ದಾರೆ. ಈ ಯೋಜನೆಯಲ್ಲಿ ನೌಕಾ ಹಡಗುಗಳ ನಿರ್ವಹಣೆ ಮತ್ತು ದುರಸ್ತಿ ಕೇಂದ್ರವನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಅಲ್ಲದೆ, ಮಾಲ್ದೀವ್ಸ್ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತದೆ. ಈ ಹಿಂದೆ ಮಾಲ್ದೀವ್ಸ್​ಗೆ ಉಡುಗೊರೆಯಾಗಿ ನೀಡಲಾದ ಹಡಗುಗಳನ್ನು ರಿಪೇರಿಗಾಗಿ ಭಾರತಕ್ಕೆ ತರಲಾಗುತ್ತಿತ್ತು. ಈ ಯೋಜನೆಯು ಮಾಲ್ದೀವ್ಸನ್ನು ಈ ವಿಷಯದಲ್ಲಿ ಸ್ವಾವಲಂಬಿಯನ್ನಾಗಿ ಮಾಡುತ್ತದೆ.

    ವಿವಾದಕ್ಕೆ ಕಾರಣ

    2021ರಲ್ಲಿ ಬಂದರು ಯೋಜನೆ ಘೊಷಣೆ ಆದಾಗಿನಿಂದಲೂ ವಿವಾದ ಸೃಷ್ಟಿಯಾಗಿದೆ. ಇದು ಮಾಲ್ದೀವ್ಸ್ ನಲ್ಲಿ ಭಾರತೀಯ ಮಿಲಿಟರಿ ಉಪಸ್ಥಿತಿಗೆ ಅವಕಾಶ ಕಲ್ಪಿಸುತ್ತದೆ ಎಂಬ ಆರೋಪಗಳು ಕೇಳಿಬಂದಿವೆ. ವಿರೋಧ ಪಕ್ಷದ ನಾಯಕ ಅಬ್ದುಲ್ಲಾ ಯಮೀನ್ ನೇತೃತ್ವದಲ್ಲಿ ಯೋಜನೆ ವಿರೋಧಿಸಿ ‘ಇಂಡಿಯಾ ಔಟ್’ ಅಭಿಯಾನ ನಡೆದಿತ್ತು. ಮಾಲ್ದೀವ್ಸ್ ಅಧ್ಯಕ್ಷ ಇಬ್ರಾಹಿಂ ಸೋಲಿಹ್ ಅವರು ಕಳೆದ ವರ್ಷ ಭಾರತವಿರೋಧಿ ಪ್ರತಿಭಟನೆಗಳನ್ನು ರಾಷ್ಟ್ರೀಯ ಭದ್ರತೆಗೆ ಬೆದರಿಕೆ ಎಂದು ನಿಷೇಧಿಸಿದ್ದರು. ಭಾರತವು ಇತ್ತೀಚೆಗೆ ಉಡುಗೊರೆಯಾಗಿ ನೀಡಿದ ವೇಗದ ಗಸ್ತು ನೌಕೆಯಲ್ಲಿ ಭಾರತೀಯ ಸೈನಿಕರು ಇದ್ದಾರೆ ಎಂದು ಸಹ ಕೆಲವರು ಆರೋಪಿಸಿದ್ದರು. ಆದರೆ, ಈ ಆರೋಪ ನಿರಾಕರಿಸಿದ ರಕ್ಷಣಾ ಸಚಿವೆ ಮರಿಯಾ ದೀದಿ, ‘ತರಬೇತಿ ಉದ್ದೇಶಗಳಿಗಾಗಿ ಮಾತ್ರ ಭಾರತೀಯ ಸಿಬ್ಬಂದಿ ಇದ್ದು, ಹಡಗಿನಲ್ಲಿ ಮುಂದೆ ಮಾಲ್ಡೀವ್ಸ್ ಸಿಬ್ಬಂದಿ ಮಾತ್ರ ಇರುತ್ತಾರೆ’ ಎಂದು ಸ್ಪಷ್ಟಪಡಿಸಿದ್ದರು.

    ಭಾರತಕ್ಕೆ ಮಾಲ್ದೀವ್ಸ್ ಏಕೆ ಮುಖ್ಯ?

    ಭಾರತವು ಮಾಲ್ದೀವ್ಸ್​ನೊಂದಿಗೆ ದೀರ್ಘಕಾಲದ ಸಂಬಂಧವನ್ನು ಹೊಂದಿದೆ. 1988 ರಲ್ಲಿ ಶ್ರೀಲಂಕಾದ ಉಗ್ರಗಾಮಿ ಸಂಘಟನೆಯ ಬೆಂಬಲದೊಂದಿಗೆ ಮಾಲ್ದೀವ್ಸ್​ನಲ್ಲಿ ನಡೆದ ದಂಗೆಯ ಪ್ರಯತ್ನವನ್ನು ವಿಫಲಗೊಳಿಸಲು ಭಾರತವು ಸಹಾಯ ಮಾಡಿತ್ತು. ಹಿಂದೂ ಮಹಾಸಾಗರದಲ್ಲಿ ಮಾಲ್ದೀವ್ಸ್ ದ್ವೀಪವು ಆಯಕಟ್ಟಿನ ಸ್ಥಳದಲ್ಲಿರುವುದರಿಂದ ರಕ್ಷಣಾತ್ಮಕವಾಗಿ ಹಾಗೂ ವಾಣಿಜ್ಯಾತ್ಮಕವಾಗಿ ಭಾರತಕ್ಕೆ ಮಹತ್ವದ್ದಾಗಿದೆ. ಮಾಲ್ದೀವ್ಸ್ ದ್ವೀಪವು ಹಾಮುಜ್ ಜಲಸಂಧಿ, ಕೆಂಪು ಸಮುದ್ರದಿಂದ ಸೂಯೆಜ್ ಕಾಲುವೆ ಮತ್ತು ಮೊಜಾಂಬಿಕ್​ನಂತಹ ಪ್ರಮುಖ ಮಾರ್ಗಗಳಿಂದ ನಡೆಯುವ ಕಡಲ ವ್ಯಾಪಾರದ ಮೇಲೆ ನಿಗಾ ವಹಿಸಬಹುದಾದ ಸ್ಥಳವಾಗಿದೆ. ಸೌಹಾರ್ದಯುತ ಮತ್ತು ಸ್ವತಂತ್ರ ಮಾಲ್ದೀವ್ಸ್ ಭಾರತ ಮತ್ತು ಸಾಮಾನ್ಯ ಕಡಲ ಹಿತಾಸಕ್ತಿಗಳಿರುವ ಈ ಪ್ರದೇಶದ ಇತರ ರಾಷ್ಟ್ರಗಳಿಗೆ ಪ್ರಯೋಜನಕಾರಿಯಾಗಿದೆ. ಅದರಲ್ಲೂ ಈ ಪ್ರದೇಶದಲ್ಲಿ ತನ್ನ ಪ್ರಭಾವ ವಿಸ್ತರಿಸಲು ಚೀನಾದ ಪ್ರಯತ್ನಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇದು ಮಹತ್ವದ್ದಾಗಿದೆ.

    4086 ಕೋಟಿ ರೂ. ನೆರವು

    ಕಳೆದ ವರ್ಷ ಆಗಸ್ಟ್​ನಲ್ಲಿ ಮೋದಿ ಮತ್ತು ಸೋಲಿ ಅವರು ಗ್ರೇಟರ್ ಮಾಲ್ದೀವ್ಸ್ ಸಂಪರ್ಕ ಯೋಜನೆ ಒಪ್ಪಂದ ಮಾಡಿಕೊಂಡರು. ಭಾರತದಿಂದ 4086 ಕೋಟಿ ರೂಪಾಯಿ ನೆರವು ಒದಗಿಸುವ ಯೋಜನೆ ಇದಾಗಿದೆ. ಇದರಲ್ಲಿ 6.74 ಕಿಮೀ ಸೇತುವೆ ಮತ್ತು ರಾಜಧಾನಿ ಮಾಲೆಯನ್ನು ನೆರೆಯ ದ್ವೀಪಗಳೊಂದಿಗೆ ಸಂರ್ಪಸುವ ಕಾಸ್​ವೇ ಲಿಂಕ್ ಒಳಗೊಂಡಿದೆ.

    ಸಹಕಾರ ವೃದ್ಧಿ

    2020ರಲ್ಲಿ, ಭಾರತವು ಮಾಲ್ಡೀವ್ಸ್​ಗೆ ಡಾರ್ನಿಯರ್ ವಿಮಾನವನ್ನು ಉಡುಗೊರೆಯಾಗಿ ನೀಡಿತ್ತು. 2019ರಲ್ಲಿ ಗಸ್ತು ನೌಕೆಯನ್ನು ಹಸ್ತಾಂತರಿಸಿತ್ತು. ಕರಾವಳಿ ರಾಡಾರ್ ವ್ಯವಸ್ಥೆಯನ್ನು ನೀಡಿತ್ತು. ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಅವರು ಭಾರತವು 24 ವಾಹನಗಳು ಮತ್ತು ನೌಕಾಪಡೆಯ ದೋಣಿಯನ್ನು ನೀಡಲಿದ್ದು, ಮಾಲ್ದೀವ್ಸ್​ನ 61 ದ್ವೀಪಗಳಲ್ಲಿ ಪೊಲೀಸ್ ಸೌಲಭ್ಯಗಳನ್ನು ನಿರ್ವಿುಸಿಕೊಡಲಿದೆ ಎಂದು ಘೊಷಿಸಿದ್ದರು. ರಕ್ಷಣಾ ವ್ಯಾಪಾರ, ಸಾಮರ್ಥ್ಯ ವೃದ್ಧಿ, ಜಂಟಿ ಕವಾಯತು ಸೇರಿದಂತೆ ಪರಸ್ಪರ ಸಹಕಾರಕ್ಕಾಗಿ ಉಭಯ ದೇಶಗಳು ಒಪ್ಪಂದ ಮಾಡಿಕೊಂಡಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts