VIDEO| ನೈಜರ್​ನಲ್ಲಿ ಘರ್ಷಣೆ; ಭಾರತೀಯ ಪ್ರಜೆಗಳಿಗೆ ದೇಶ ತೊರೆಯುವಂತೆ ಸೂಚಿಸಿದ ಸರ್ಕಾರ

Niger Violence
Published on

ನವದೆಹಲಿ: ಮಿಲಿಟರಿ ದಂಗೆ ಎದ್ದಿರುವ ನೈಜರ್​ನಲ್ಲಿ ನೆಲೆಸಿರುವ ಭಾರತೀಯರು ಶೀಘ್ರವೇ ಆ ದೇಶವನ್ನು ತೊರೆಯಿರಿ ಎಂದು ಸರ್ಕಾರ ಸಲಹೆ ನೀಡಿದೆ. ಪಶ್ಚಿಮ ಆಫ್ರಿಕಾದಲ್ಲಿರುವ ನೈಜರ್​ನಲ್ಲಿ ಹಿಂಸಾಚಾರ ವ್ಯಾಪಕವಾಗಿರುವ ಹಿನ್ನಲೆಯಲ್ಲಿ ದೇಶ ತೊರೆಯುವಂತೆ ಭಾರತೀಯರಿಗೆ ಸೂಚಿಸಲಾಗಿದೆ.

ಈ ಕುರಿತು ಮಾಧ್ಯಮಗಳನ್ನೂ ಉದ್ದೇಶಿಸಿ ಮಾತನಾಡಿದ ವಿದೇಶಾಂಗ ಇಲಾಖೆಯ ವಕ್ತಾರ ಅರಿಂದಮ್​ ಭಗ್ಚಿ ಭಾರತ ಸರ್ಕಾರವು ನೈಜರ್​ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದೆ. ಹಾಲಿ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ಪ್ರಜೆಗಳನ್ನು ದೇಶ ತೊರೆಯುವಂತೆ ಸೂಚಿಸಲಾಗಿದೆ.

ವಾಯು ಪ್ರದೇಶ ಮುಚ್ಚಲ್ಪಟ್ಟಿರುವುದರಿಂದ ನೈಜರ್​ ತೊರೆಯುವ ಜನರು ಅಲ್ಲಿಂದ ಹೊರಡಬೇಕಾದರೆ ಹೆಚ್ಚಿನ ಮುಂಜಾಗ್ರತೆ ಕ್ರಮಗಳನ್ನೂ ವಹಿಸಬೇಕು. ಅಲ್ಲಿನ ಪರಿಸ್ಥಿತಿ ಹತ್ತೋಟಿಗೆ ಬರುವವರೆಗೂ ನೈಜರ್​ಗೆ ಪ್ರಯಾಣ ಬೆಳಸುವವರು ಇನ್ನೊಮ್ಮೆ ಯೋಚಿಸಿ ಮುಂದಿನ ನಿರ್ಧಾರ ಕೈಗೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

ನೈಜರ್​ನಲ್ಲಿ ಪ್ರಸ್ತುತ 250ಜನ ಭಾರತೀಯರು ವಾಸಿಸುತ್ತಿದ್ದು, ಅವರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ನಮಗೆ ತಿಳಿದು ಬಂದಿದೆ. ರಾಯಭಾರ ಕಚೇರಿಯ ಅಧಿಕಾರಿಗಳು ಅವರ ಜೊತೆ ಸಂಪರ್ಕದಲ್ಲಿದ್ದು, ಲಾಜಿಸ್ಟಿಕ್ಸ್​ ವ್ಯವಸ್ಥೆ ಮಾಡಲಾಗುತ್ತಿದೆ. ದೇಶಕ್ಕೆ ಮರಳಲು ಭಾರತೀಯ ಮಿಷಿನ್​ನಲ್ಲಿ ನೋಂದಾಯಿಸಿಕೊಳ್ಳಬೇಕು ಎಂದು ವಿದೇಶಾಂಗ ಇಲಾಖೆಯ ವಕ್ತಾರ ಅರಿಂದಮ್​ ಬಗ್ಚಿ ತಿಳಿಸಿದ್ದಾರೆ.

ನೈಗರ್​ನ ಹೊಸ ಮಿಲಿಟರಿ ಆಡಳಿತ ಮತ್ತು ಕ್ಷೀಣಿಸುತ್ತಿರುವ ಪ್ರಜಾಪ್ರಭುತ್ವವನ್ನೂ ಮರುಸ್ಥಾಪಿಸಲು ಸೇನೆಯನ್ನು ನಿಯೋಜಿಸಲು ಆದೇಶ ನೀಡಿದ್ದ ಪಶ್ಚಿಮ ಆಫ್ರಿಕಾದ ಪ್ರಾದೇಶಿಕ ಬಣದ ನಡುವೆ ಘರ್ಷಣೆ ಸಂಭವಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net