ಮರ್ಯಾದೆಗೆ ಅಂಜಿ ಮಗಳನ್ನೇ ಹತ್ಯೆ ಮಾಡಿ ಬೈಕ್​ಗೆ ಕಟ್ಟಿ ಎಳೆದೊಯ್ದ ತಂದೆ

harassment
Published on

ಅಮೃತಸರ: ತನ್ನ ಪ್ರಿಯಕರನ ಜೊತೆ ಓಡಿಹೋಗಿದ್ದಕ್ಕೆ ಕುಪಿತಗೊಂಡ ತಂದೆ ಮರ್ಯಾದೆಗೆ ಅಂಜಿ ತನ್ನ ಸ್ವಂತ ಮಗಳನ್ನು ಕೊಂದು ಬಳಿಕ ಆಕೆಯ ಮೃತದೇಹವನ್ನೂ ಬೈಕಿಗೆ ಕಟ್ಟಿ ಊರಿನ ತುಂಬಾ ಎಳೆದೊಯ್ದಿರುವ ಘಟನೆ ಪಂಜಾಬಿನ ಅಮೃತಸರದಲ್ಲಿರುವ ಮುಚ್ಚಲ್​ ಎಂಬ ಗ್ರಾಮದಲ್ಲಿ ನಡೆದಿದೆ.

ಆರೋಪಿ ತನ್ನ ಮಗಳ ಮೃತದೇಹವನ್ನೂ ಬೈಕಿಗೆ ಕಟ್ಟಿ ಎಳೆದೊಯ್ಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಬಳಿಕ ಶವವನ್ನು ರೈಲ್ವೆ ಹಳಿ ಮೇಲೆ ಎಸೆದು ಪರಾರಿಯಾಗಿದ್ದಾನೆ. ಘಟನೆ ನಡೆದ ಪ್ರದೇಶದ ಸುತ್ತ ಅಳವಡಿಸಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಪ್ರಕರಣದ ಹಿನ್ನಲೆ

ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕುಲದೀಪ್​ ಸಿಂಗ್​ ಬಂಧಿತ ಆರೋಪಿಯೂ ನಿಹಾಂಗ್​ ಸಿಖ್​ ಆಗಿದ್ದು, ಆತ ತನ್ನ ಮಗಳು ಮನೆಯಲ್ಲಿ ಯಾರಿಗೂ ಹೇಳದೆ ಹೊರ ಹೋಗಿದ್ದಾಳೆ. ಮಾರನೆಯ ದಿನ ತಾನು ಪ್ರೀತಿಸುತ್ತಿದ್ದ ಯುವಕನೊಂದಿಗೆ ಮನೆಗೆ ವಾಪಸ್​ ಆಗಿದ್ದಾಳೆ. ಇದರಿಂದ ಕುಪಿತಗೊಂಡ ಆರೋಪಿಯು ಹರಿತವಾದ ಆಯುಧದಿಂದ ತನ್ನ ಮಗಳನ್ನು ಹತ್ಯೆ ಮಾಡಿ ಬಳಿಕ ಆಕೆಯ ಮೃತದೇಹವನ್ನೂ ಬೈಕಿಗೆ ಕಟ್ಟಿ ಎಳೆದೊಯ್ದು ರೈಲ್ವೆ ಹಳಿಯ ಮೇಲೆ ಬಿಸಾಕಿ ಪರಾರಿಯಾಗಿದ್ದಾನೆ.

ಆರೋಪಿ ಮರ್ಯಾದೆಗೆ ಅಂಜಿ ಈ ರೀತಿ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಆತನ ವಿರುದ್ಧ ಐಪಿಸಿ ಸೆಕ್ಷನ್​ 302(ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಮೃತಸರ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕುಲದೀಪ್​ ಸಿಂಗ್​ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net