ತ್ರಿಶಾ ಮೇಲೆ ಅಸಭ್ಯ ಕಾಮೆಂಟ್.. ಮನ್ಸೂರ್ ಅಲಿ ವಿರುದ್ಧ ಕೇಸ್ ದಾಖಲು

trisha-mansoor
Published on

ಚೆನ್ನೈ: ‘ಲಿಯೋ’ ಚಿತ್ರದಲ್ಲಿ ರೇಪ್ ಸೀನ್ ಇರಬೇಕಿತ್ತು, ನಟಿ ತ್ರಿಷಾ ಜೊತೆ ಬೆಡ್ ರೂಮ್ ಸೀನ್ ಹಂಚಿಕೊಳ್ಳಲು ಆಗಲಿಲ್ಲ' ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ನಟ ಮನ್ಸೂರ್ ಅಲಿ ಖಾನ್ ವಿರುದ್ಧ ರಾಷ್ಟ್ರೀಯ ಮಹಿಳಾ ಆಯೋಗ ಕ್ರಮಕ್ಕೆ ಮುಂದಾಗಿದೆ. ಮನ್ಸೂರ್​ ಮಾತುಗಳನ್ನು ಗಂಭೀರವಾಗಿ ಪರಿಗಣಿಸಿದ ಆಯೋಗ, ಆತನ ವಿರುದ್ಧ ಪ್ರಕರಣ ದಾಖಲಿಸುವಂತೆ ತಮಿಳುನಾಡು ಪೊಲೀಸರಿಗೆ ಸೂಚನೆ ನೀಡಿದೆ. ಅದರಂತೆ ಚೆನ್ನೈ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೂಲಗಳ ಪ್ರಕಾರ, ಚೆನ್ನೈ ಪೊಲೀಸರು ಮನ್ಸೂರ್ ಅಲಿ ಖಾನ್ ವಿರುದ್ಧ ಸೆಕ್ಷನ್ 354 ಎ (ಲೈಂಗಿಕ ಕಿರುಕುಳ), ಸೆಕ್ಷನ್ 509 (ಮಹಿಳೆಯರ ಘನತೆಗೆ ಧಕ್ಕೆ ತರುವ ಮಾತು, ಹಾವಭಾವ ಅಥವಾ ಕೃತ್ಯ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ನಟಿ ತ್ರಿಷಾ ಬಗ್ಗೆ ಕಾಲಿವುಡ್ ನಟ ಮನ್ಸೂರ್ ಅಲಿ ಖಾನ್ ಮಾಡಿದ್ದ ಕಾಮೆಂಟ್ಗಳು ಇಂಡಸ್ಟ್ರಿಯಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಆತನ ಹೇಳಿಕೆಗೆ ಚಿತ್ರರಂಗ ಮತ್ತು ರಾಜಕೀಯ ಗಣ್ಯರು ಆಕ್ರೋಶ ವ್ಯಕ್ತಪಡಿಸಿದ್ದರು. ಲಿಯೋ ನಿರ್ದೇಶಕ ಲೋಕೇಶ್ ಕನಕರಾಜ್, ನಿತಿನ್, ಮೆಗಾಸ್ಟಾರ್ ಚಿರಂಜೀವಿ, ನಾಯಕಿ ಮಾಳವಿಕಾ, ಗಾಯಕಿ ಚಿನ್ಮಿ ಮತ್ತು ಸಚಿವೆ ರೋಜಾ ಸೇರಿ ಅನೇಕರು ತ್ರಿಷಾಗೆ ಬೆಂಬಲ ನೀಡಿದ್ದರು. ಮನ್ಸೂರ್ ಅಲಿ ಖಾನ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದರು.

ಇನ್ನು ಮನ್ಸೂರ್ ಅಲಿಯ ಅವಹೇಳನಕಾರಿ ಹೇಳಿಕೆಗಳ ಬಗ್ಗೆ ರಾಷ್ಟ್ರೀಯ ಮಹಿಳಾ ಆಯೋಗ ತೀವ್ರ ಕಳವಳ ವ್ಯಕ್ತಪಡಿಸಿತ್ತು. ಇಂತಹ ಹೇಳಿಕೆಗಳು ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಪ್ರಚೋದನೆ ನೀಡುತ್ತವೆ. ಅವರ ಮಾತನ್ನು ನಾವು ಬಲವಾಗಿ ಖಂಡಿಸುತ್ತೇವೆ ಎಂದು ಆಯೋಗ ಹೇಳಿಕೆ ನೀಡಿತ್ತಲ್ಲದೆ, ಐಪಿಸಿಯ ಸೆಕ್ಷನ್ 509 ಬಿ, ಇತರ ಸಂಬಂಧಿತ ಕಾನೂನುಗಳ ಅಡಿ ಪ್ರಕರಣ ದಾಖಲಿಸಿಕೊಳ್ಳುವಂತೆ ಡಿಜಿಪಿಗೆ ನಿರ್ದೇಶನ ನೀಡಿತ್ತು.

ಇದರ ನಡುವೆಯೂ ಮಂಗಳವಾರ ಪ್ರತಿಕ್ರಿಯಿಸಿದ್ದ ಮನ್ಸೂರ್ ಅಲಿ, ತ್ರಿಷಾ ಬಳಿ ಕ್ಷಮೆ ಕೇಳುವುದಿಲ್ಲ. ನಾನೇನು ತಪ್ಪು ಹೇಳಿಲ್ಲ ಎಂಬುದು ತಮಿಳುನಾಡಿನ ಜನತೆಗೆ ಗೊತ್ತಿದೆ. ನೀವು ಚಲನಚಿತ್ರಗಳಲ್ಲಿ ಕೊಂದರೆ, ಅದು ನಿಜವಾಗಿಯೂ ಮಾಡಲ್ಪಟ್ಟಿದೆಯೇ? ಅಲ್ಲದೆ, ನೀವು ಚಲನಚಿತ್ರಗಳಲ್ಲಿ ಅತ್ಯಾಚಾರ ಮಾಡಿದರೆ, ಅದು ನಿಜವಾಗಿಯೂ ಮಾಡಲ್ಪಟ್ಟಿದೆಯೇ ಎಂದು ಪ್ರಶ್ನಿಸಿದ್ದು, ಆತನ ಕಾಮೆಂಟ್‌ಗಳಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು.

ಮನ್ಸೂರ್​ ಹೇಳಿದ್ದಾದರೂ ಏನು?: ಸಂದರ್ಶನವೊಂದರಲ್ಲಿ ಮನ್ಸೂರ್ ಅಲಿ “ನಾನು ತ್ರಿಷಾ ಅವರೊಂದಿಗೆ ನಟಿಸುತ್ತಿದ್ದೇನೆ ಎಂದು ಕೇಳಿದಾಗ, ಚಿತ್ರದಲ್ಲಿ ಬೆಡ್​ ರೂಂ ಸೀನ್​ ದೃಶ್ಯವಿದೆ ಎಂದು ಭಾವಿಸಿದ್ದೆ. ನಾನು ಅನೇಕ ಸಿನಿಮಾಗಳಲ್ಲಿ ಅತ್ಯಾಚಾರದ ದೃಶ್ಯಗಳನ್ನು ಮಾಡಿದ್ದೇನೆ. ಸಿನಿಮಾದಲ್ಲಿ ಬೇರೆ ನಟಿಯರ ಜೊತೆ ಮಾಡುವ ಹಾಗೆ ತ್ರಿಷಾ ಜೊತೆ ರೇಪ್​ ಮಾಡುವ ಸೀನ್ ಇರುತ್ತೆ ಅಂತ ಅಂದುಕೊಂಡಿದ್ದೆ. ಆದರೆ ಕಾಶ್ಮೀರದಲ್ಲಿ ಶೂಟಿಂಗ್ ವೇಳೆ ತ್ರಿಷಾ ಅವರನ್ನು ನನಗೆ ಸೆಟ್‌ನಲ್ಲಿ ತೋರಿಸಲಿಲ್ಲ" ಎಂದು ಹೇಳಿದ್ದ. ಇದಕ್ಕೆ ಪ್ರತಿಕ್ರಿಯಿಸಿದ್ದ ತ್ರಿಷಾ ಮನ್ಸೂರ್​ ಬಗ್ಗೆ ಅಸಹನೆ ವ್ಯಕ್ತಪಡಿಸಿದ್ದರ ಜತೆಗೆ ಇಂತಹ ಮನಸ್ಥಿತಿ ನಟನ ಜೊತೆ ಮುಂದೆ ನಟಿಸುವುದಿಲ್ಲ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net