

IND vs PAK : ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕಾಗಿ ಇಡೀ ಕ್ರಿಕೆಟ್ ಜಗತ್ತು ಕಾದು ಕುಳಿತಿದೆ. ಉಭಯ ತಂಡಗಳು ದುಬೈನಲ್ಲಿ ಇಂದು (ಫೆ.23) ಮುಖಾಮುಖಿಯಾಗಲಿವೆ. ಟೀಮ್ ಇಂಡಿಯಾ ಚಾಂಪಿಯನ್ಸ್ ಟ್ರೋಫಿಯಲ್ಲಿ ತನ್ನ ಮೊದಲ ಪಂದ್ಯವನ್ನು ಬಾಂಗ್ಲಾದೇಶ ವಿರುದ್ಧ ಗೆದ್ದಿದ್ದರೆ, ಆತಿಥೇಯ ಪಾಕಿಸ್ತಾನ, ನ್ಯೂಜಿಲೆಂಡ್ ವಿರುದ್ಧ ಹೀನಾಯವಾಗಿ ಸೋಲುಂಡಿದೆ. ಪಾಕ್ ವಿರುದ್ಧ ಗೆದ್ದು ಸೆಮಿಫೈನಲ್ಗೆ ಹೋಗಲು ಭಾರತ ಬಯಸಿದೆ. ಇತ್ತ ಪಾಕಿಸ್ತಾನಕ್ಕೆ ಈ ಪಂದ್ಯ ಮಾಡು ಇಲ್ಲವೇ ಮಡಿ ಎಂಬಂತಾಗಿದೆ. ಈ ಪಂದ್ಯದಲ್ಲಿ ಸೋತರೆ, ಪಾಕ್ ಟೂರ್ನಿಯಿಂದ ಹೊರಗುಳಿಯಲಿದೆ.
ಇದೇ ಸಂದರ್ಭದಲ್ಲಿ ಪಾಕಿಸ್ತಾನದ ವೇಗಿ ಹ್ಯಾರಿಸ್ ರೌಫ್, ಟೀಮ್ ಇಂಡಿಯಾಗೆ ಎಚ್ಚರಿಕೆ ನೀಡಿದ್ದಾರೆ. ಈ ಹಿಂದೆ ದುಬೈನಲ್ಲಿ ಭಾರತವನ್ನು ಸೋಲಿಸಲಾಗಿತ್ತು. ಇದೀಗ ಮತ್ತೆ ಅದೇ ಕ್ಷಣ ಮರುಕಳಿಸಲಿದೆ ಎಂದಿದ್ದಾರೆ.
ಭಾರತದ ವಿರುದ್ಧದ ಪಂದ್ಯದ ಮೇಲೆ ನಮಗೆ ಯಾವುದೇ ಒತ್ತಡವಿಲ್ಲ. ಇದೊಂದು ಉತ್ತಮ ಪಂದ್ಯವಾಗಲಿದೆ. ಪಾಕಿಸ್ತಾನ ದುಬೈನಲ್ಲಿ ಉತ್ತಮ ದಾಖಲೆಯನ್ನು ಹೊಂದಿದೆ. 2021ರಲ್ಲಿ ದುಬೈನಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಮತ್ತು ನಂತರ 2022 ರಲ್ಲಿ ಏಷ್ಯಾ ಕಪ್‌ನಲ್ಲಿ ನಾವು ಭಾರತವನ್ನು ಸೋಲಿಸಿದ್ದೇವೆ. ಈ ಬಾರಿಯೂ ನಾವು ಅವರನ್ನು ಸೋಲಿಸುತ್ತೇವೆ ಎಂದು ರೌಫ್ ಹೇಳಿದರು. ಅಲ್ಲದೆ, ದುಬೈ ಪಿಚ್ ಪರಿಶೀಲಿಸಿದ ಬಳಿಕ ನಾವು ನಮ್ಮ ಪ್ಲಾನ್ ಸಿದ್ಧಪಡಿಸುತ್ತೇವೆ ಎಂದರು.
ಇದೀಗ ಹ್ಯಾರಿಸ್ ರೌಫ್ ಮಾಡಿದ ಈ ಕಾಮೆಂಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದೂ ಭಾರತೀಯ ಅಭಿಮಾನಿಗಳು ತಿರುಗೇಟು ನೀಡುತ್ತಿದ್ದಾರೆ. ಐಸಿಸಿ ಟೂರ್ನಮೆಂಟ್‌ಗಳಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಉತ್ತಮ ದಾಖಲೆಯನ್ನು ಹೊಂದಿದೆ ಎಂದು ರೌಫ್ಗೆ ನೆನಪಿಸಿದ್ದಾರೆ. ಅಲ್ಲದೆ, ಕಿವೀಸ್ ವಿರುದ್ಧದ ಪಂದ್ಯದಲ್ಲೇ ಅವರಿಂದ ಪೈಪೋಟಿ ನೀಡಲಾಗಲಿಲ್ಲ ಇನ್ನೂ ಭಾರತವನ್ನು ತಡೆಯುವ ಶಕ್ತಿ ಪಾಕ್ಗೆ ಇದೆಯೇ ಎನ್ನುತ್ತಿದ್ದಾರೆ. 2023ರ ಟಿ20 ವಿಶ್ವಕಪ್‌ನಲ್ಲಿ ಕೊಹ್ಲಿ ಬಾರಿಸಿದ ಸತತ ಎರಡು ಸಿಕ್ಸರ್‌ಗಳನ್ನು ಮರೆತಿದ್ದಾರೆಯೇ ಎಂಬ ಕಾಮೆಂಟ್‌ಗಳು ಮೂಲಕ ಹ್ಯಾರಿಸ್ ರೌಫ್ ಕಾಲೆಳೆಯುತ್ತಿದ್ದಾರೆ. (ಏಜೆನ್ಸೀಸ್)