Rohit Sharma : ಪ್ರವಾಸಿ ಇಂಗ್ಲೆಂಡ್ ವಿರುದ್ಧ ನಡೆದ ಐದು ಪಂದ್ಯಗಳ ಟಿ20 ಸರಣಿಯನ್ನು ಗೆದ್ದ ಭಾರತ ತಂಡ, ಇದೀಗ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಒಂದು ಪಂದ್ಯ ಬಾಕಿ ಇರುವಾಗಲೇ ಗೆದ್ದುಕೊಂಡಿದೆ. ಮೂರು ಏಕದಿನ ಪಂದ್ಯಗಳಲ್ಲಿ ಸತತ ಎರಡು ಪಂದ್ಯಗಳನ್ನು ಗೆದ್ದಿರುವ ಭಾರತ, 2-0 ಅಂತರದಿಂದ ಮುನ್ನಡೆ ಸಾಧಿಸಿದೆ.

ಭಾನುವಾರ (ಫೆ.09) ರಾತ್ರಿ ಕಟಕ್‌ನಲ್ಲಿ ನಡೆದ ಪಂದ್ಯವನ್ನು ಭಾರತ ತಂಡ ನಾಲ್ಕು ವಿಕೆಟ್‌ಗಳಿಂದ ಗೆದ್ದುಕೊಂಡಿತು. ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ (90 ಎಸೆತಗಳಲ್ಲಿ 119 ರನ್, 12 ಬೌಂಡರಿ, ಏಳು ಸಿಕ್ಸರ್) ಸೂಪರ್ ಬ್ಯಾಟಿಂಗ್ ಮೂಲಕ ತಮ್ಮ ಶತಕ ಪೂರೈಸಿದರು.
ರೋಹಿತ್ ಶರ್ಮ ಕೆಲವು ಸಮಯದಿಂದ ಬ್ಯಾಟಿಂಗ್‌ನಲ್ಲಿ ವಿಫಲರಾಗುತ್ತಿದ್ದರು ಇದರಿಂದ ತೀವ್ರ ಟೀಕೆಗಳಿಗೆ ಗುರಿಯಾಗಿದ್ದರು. ರೋಹಿತ್ ನಿವೃತ್ತಿ ನೀಡಬೇಕು ಎಂಬ ಬೇಡಿಕೆಯೂ ಕೇಳಿಬಂತು. ರೋಹಿತ್ ನಾಯಕತ್ವದಲ್ಲಿ ಕೆಲ ತಿಂಗಳುಗಳ ಹಿಂದೆ ಶ್ರೀಲಂಕಾದಲ್ಲಿ ಏಕದಿನ ಸರಣಿಯನ್ನು ಭಾರತ ತಂಡ ಕಳೆದುಕೊಂಡಿತು. ಇದಾದ ಬಳಿಕ ಪ್ರವಾಸಿ ನ್ಯೂಜಿಲೆಂಡ್ ತಂಡ ಭಾರತದ ವಿರುದ್ಧ ತವರು ನೆಲದಲ್ಲೇ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿತು. ನಂತರ ಆಸ್ಟ್ರೇಲಿಯಾದಲ್ಲಿ ನಡೆದ ಟೆಸ್ಟ್ ಸರಣಿಯನ್ನೂ ಕಳೆದುಕೊಂಡಿತು.
ಈ ಎಲ್ಲ ಸರಣಿಗಳಲ್ಲಿ ನಾಯಕನಾಗಿ ಮತ್ತು ಬ್ಯಾಟ್ಸ್‌ಮನ್ ಆಗಿ ರೋಹಿತ್ ವಿಫಲರಾಗಿದರು. ಹೀಗಾಗಿ ರೋಹಿತ್, ನಿವೃತ್ತಿ ನೀಡಬೇಕೆಂಬ ಕೂಗು ಜೋರಾಗಿ ಕೇಳಿಬಂತು. ಅಲ್ಲದೆ, ತೀವ್ರ ಟೀಕೆಗಳು ಸಹ ವ್ಯಕ್ತವಾದವು. ಆದರೆ, ಭಾನುವಾರ ನಡೆದ ಏಕದಿನ ಪಂದ್ಯದಲ್ಲಿ, ರೋಹಿತ್ ಶರ್ಮ ಅವರು ತಮ್ಮ ನಿವೃತ್ತಿಯ ಬಗ್ಗೆ ಮಾತನಾಡುತ್ತಿದ್ದ ಎಲ್ಲರಿಗೂ ಅದ್ಭುತ ಶತಕದ ಮೂಲಕ ಉತ್ತರಿಸಿದ್ದಾರೆ. ಸರಿಯಾದ ಸಮಯದಲ್ಲೇ ರೋಹಿತ್ ಸೂಪರ್ ಶತಕ ಬಾರಿಸಿದ್ದಾರೆ. ಇದರೊಂದಿಗೆ, ಚಾಂಪಿಯನ್ಸ್ ಟ್ರೋಫಿಗೂ ಮೊದಲು ರೋಹಿತ್ ಅವರ ಫಾರ್ಮ್ ಬಗ್ಗೆ ಚಿಂತಿತರಾಗಿದ್ದ ಟೀಮ್ ಇಂಡಿಯಾ ಅಭಿಮಾನಿಗಳು ಈಗ ಅವರ ಶತಕದ ಬಗ್ಗೆ ಸಂತೋಷ ವ್ಯಕ್ತಪಡಿಸುತ್ತಿದ್ದಾರೆ.
ಭಾರತ ಏಕದಿನ ಸರಣಿ ಗೆದ್ದ ನಂತರ ನಾಯಕ ರೋಹಿತ್ ಶರ್ಮ ಪ್ರಮುಖ ಹೇಳಿಕೆಗಳನ್ನು ನೀಡಿದರು. ಇಂದು ನನಗೆ ಬ್ಯಾಟಿಂಗ್ ತುಂಬಾ ಇಷ್ಟವಾಯಿತು. ತಂಡಕ್ಕಾಗಿ ನಿಂತು ರನ್ ಗಳಿಸುವುದು ಅದ್ಭುತ ಅನುಭವವಾಗಿತ್ತು. ಏಕದಿನ ಪಂದ್ಯಗಳಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ಬ್ಯಾಟಿಂಗ್ ಮಾಡಬೇಕು. ನಾನು ಕ್ರೀಸ್‌ಗೆ ಬಂದಾಗ, ನಾನು ದೀರ್ಘಕಾಲ ಕ್ರೀಸ್‌ನಲ್ಲಿಯೇ ಇದ್ದು ರನ್ ಗಳಿಸಲು ನಿರ್ಧರಿಸಿದೆ. ಇಂಗ್ಲೆಂಡ್ ಬೌಲರ್‌ಗಳು ನನ್ನ ವಿಕೆಟ್ ಪಡೆಯಬೇಕೆಂಬ ಗುರಿಗಳೊಂದಿಗೆ ಚೆಂಡುಗಳನ್ನು ಎಸೆದರು. ಆದಾಗ್ಯೂ, ನಾನು ನನ್ನ ಯೋಜನೆಗಳನ್ನು ಕಾರ್ಯಗತಗೊಳಿಸಿದೆ ಮತ್ತು ಅವರ ತಂತ್ರವನ್ನು ಪರಿಣಾಮಕಾರಿಯಾಗಿ ವಿಫಲಗೊಳಿಸಿದೆ ಎಂದು ರೋಹಿತ್ ಹೇಳಿದರು.
ಇದೇ ಸಂದರ್ಭದಲ್ಲಿ ಶುಭಮನ್ ಗಿಲ್ ಬಗ್ಗೆ ಮಾತನಾಡಿದ ರೋಹಿತ್ ಶರ್ಮ, ಶುಭಮನ್ ಅವರು ತುಂಬಾ ಕ್ಲಾಸಿ ಆಟಗಾರ. ನಾನು ಅವರನ್ನು ಹತ್ತಿರದಿಂದ ನೋಡಿದ್ದೇನೆ. ಅವರು ಪರಿಸ್ಥಿತಿಗೆ ಅನುಗುಣವಾಗಿ ಬ್ಯಾಟಿಂಗ್ ಮಾಡುತ್ತಾರೆ. ಗಿಲ್ ಮತ್ತು ಶ್ರೇಯಸ್ ನನಗೆ ಬೆಂಬಲ ನೀಡಿದರು. ನಾವು ಬ್ಯಾಟಿಂಗ್ ಅನ್ನು ತುಂಬಾ ಆನಂದಿಸಿದೆವು. ಮಧ್ಯಮ ಓವರ್‌ಗಳು ಬಹಳ ಮುಖ್ಯ. ಆ ಓವರ್‌ಗಳಲ್ಲಿ ಯಾರಾದರೂ ಪಂದ್ಯವನ್ನು ಗೆಲ್ಲಬಹುದು. ನಾವು ಆ ಓವರ್‌ಗಳನ್ನು ಚೆನ್ನಾಗಿ ನಿರ್ವಹಿಸಿದರೆ, ಡೆತ್ ಓವರ್‌ಗಳಲ್ಲಿ ನಮಗೆ ಯಾವುದೇ ಸಮಸ್ಯೆ ಇರುವುದಿಲ್ಲ. ಮೊದಲ ಏಕದಿನ ಮತ್ತು ಎರಡನೇ ಏಕದಿನ ಪಂದ್ಯದಲ್ಲಿ ನಾವು ಮಧ್ಯಮ ಓವರ್‌ಗಳಲ್ಲಿ ಚೆನ್ನಾಗಿ ಬ್ಯಾಟಿಂಗ್ ಮಾಡಿದೆವು ಎಂದು ರೋಹಿತ್ ಹೇಳಿದರು. (ಏಜೆನ್ಸೀಸ್)
ರಾತ್ರಿ ಕರುವಿಗೆ ಜನ್ಮ ಕೊಟ್ಟ ಎಮ್ಮೆ: ಬೆಳಗ್ಗೆ ಎದ್ದು ನೋಡಿದಾಗ ಮಾಲೀಕನಿಗೆ ಕಾದಿತ್ತು ಶಾಕ್! Buffalo