ಧನ್ವಂತರಿ | ಮಾನವನ ದೇಹಕ್ಕೆ ಅಮೃತ ಉಣ್ಣಿಸುವ ಬೇಲದ ಹಣ್ಣು

bela fruit
Published on
ರಾಮನವಮಿಯ ದಿನ ಬೇಲದ ಹಣ್ಣಿನ ಪಾನಕವನ್ನು ನೀವೆಲ್ಲ ಕುಡಿದಿರಬಹುದು. ಅದರ ಮಹತ್ವ, ಹಿನ್ನೆಲೆ ಮತ್ತು ದೇಹದ ಮೇಲೆ ಅದು ಬೀರುವ ಪರಿಣಾಮಗಳ ಬಗ್ಗೆ ತಿಳಿದುಕೊಳ್ಳೋಣ. ಬೇಲದ ಹಣ್ಣಿಗೆ ಸಂಸ್ಕೃತದಲ್ಲಿ ಕಪಿತ್ಥ ಎಂದು ಕರೆಯುತ್ತಾರೆ. ಕಪಿಪ್ರಿಯ, ಕಪೀಷ್ಟ ಎಂಬೆಲ್ಲಾ ಹೆಸರುಗಳಿವೆ. ಅಂದರೆ ಈ ಹಣ್ಣು ಕೋತಿಗಳಿಗೆ ಇಷ್ಟ ಎಂದರ್ಥ.

ರಾಮನಿಗೆ ಉಷ್ಣತೆಯನ್ನು ಕಡಿಮೆ ಮಾಡಿಕೊಳ್ಳಲು ಕಪಿಗಳು ಈ ಹಣ್ಣನ್ನು ಕೊಟ್ಟವು ಎಂಬ ಪ್ರತೀತಿ ಕೂಡ ಇದೆ. ಇದಕ್ಕೆ ಕರಭ ವಲ್ಲಭ ಎಂದೂ ಕರೆಯುತ್ತಾರೆ. ಅಂದರೆ ಆನೆಗಳಿಗೆ ಇಷ್ಟ ಎಂದರ್ಥ. ಹಾಗಾಗಿಯೇ ಇಂಗ್ಲಿಷ್ ಭಾಷೆಯಲ್ಲಿ ಇದಕ್ಕೆ ಎಲಿಫೆಂಟ್ ಆಪಲ್ ಎಂದು ಕರೆಯುತ್ತಾರೆ. ವುಡ್ ಆಪಲ್ ಎಂಬುದು ಸಾಮಾನ್ಯವಾಗಿ ಎಲ್ಲರೂ ಕರೆಯುವ ಹೆಸರು. ರಾಮನವಮಿಯ ದಿನ ಇದರ ಪಾನಕವನ್ನು ಸೇವಿಸಲು ಕಪಿಗಳಿಗೆ ಇಷ್ಟ ಎಂಬುದೊಂದೇ ಕಾರಣ ಇರಲಿಕ್ಕಿಲ್ಲ. ಈ ಹಣ್ಣಿಗಿರುವ ಗುಣಗಳು ಬೇಸಿಗೆಗೆ ಎಂದೇ ಮಾಡಿದಂತಿದೆ. ಸಿಹಿ, ಹುಳಿ ರುಚಿಗಳನ್ನು ಹೊಂದಿದ್ದು ಜಿಡ್ಡಿನ ಅಂಶ ಮತ್ತು ತಂಪು ಗುಣವನ್ನು ಹೊಂದಿದೆ. ಹಾಗಾಗಿ ಸಹಜವಾಗಿ ನಮಗೆ ಬೇಸಿಗೆಯಲ್ಲಿ ಉಷ್ಣತೆಯ ಕಾರಣದಿಂದ ಉಂಟಾಗುವ ಹಲವು ತೊಂದರೆಗಳನ್ನು ಇದು ತಡೆಯುತ್ತದೆ ಮತ್ತು ಆಗಲೇ ತೊಂದರೆಗಳನ್ನು ಅನುಭವಿಸುತ್ತಿರುವವರಿಗೆ ರೋಗ ನಿವಾರಣೆಯಲ್ಲಿ ಕೂಡ ಅನುಕೂಲ ಮಾಡಿಕೊಡುತ್ತದೆ. ಸಂಹಿತೆಗಳಲ್ಲಿ ಇದರ ವಿವರಣೆ ಮಾಡುವಾಗ ತ್ರಿದೋಷಜಿತ್ ಎಂದು ಕರೆದಿದ್ದಾರೆ. ಅಂದರೆ ವಾತ, ಪಿತ್ತ ಮತ್ತು ಕಫ ಮೂರೂ ದೋಷಗಳನ್ನು ನಿಯಂತ್ರಿಸುತ್ತದೆ ಎಂದರ್ಥ.

ಬಹುತೇಕ ಬಿಲ್ವದ ಮರದ ಹಣ್ಣಿನ ಗುಣವನ್ನು ಹೊಂದಿರುವ ಕಾರಣದಿಂದ ಇದನ್ನು ವಿಶೇಷವಾಗಿ ಐಬಿಎಸ್ ಸಮಸ್ಯೆ ಇರುವವರು ಹೆಚ್ಚಾಗಿ ಬಳಸಬೇಕು. ಅಂದರೆ ಪದೇ ಪದೇ ಭೇದಿಯಾಗುವುದು, ಮಲದಲ್ಲಿ ಸಿಂಬಳದಂತಹ ದ್ರವ ಹೋಗುವುದು, ಆಹಾರ ತೆಗೆದುಕೊಂಡ ತಕ್ಷಣ ಹೊಟ್ಟೆ ಕಿವುಚಿ ಮಲವಿಸರ್ಜನೆಯಾಗುವುದು ಮತ್ತು ಮಲವಿಸರ್ಜನೆಯ ನಂತರ ತುಂಬಾ ಸುಸ್ತಾಗುವಂತಹ ಸಮಸ್ಯೆಗಳಲ್ಲಿ ಇದು ತುಂಬಾ ಸಹಕಾರಿ. ಬಾಯಿಯ ರುಚಿ ಹೆಚ್ಚಿಸುವಲ್ಲಿ ಕೂಡ ಒಳ್ಳೆಯ ಕೆಲಸವನ್ನು ಮಾಡುತ್ತದೆ. ಬಾಯಿರುಚಿ ಇಲ್ಲದಿದ್ದರೆ, ಊಟ ಬೇಕು ಅನ್ನಿಸದಿದ್ದರೆ, ಸರಿಯಾಗಿ ಜೀರ್ಣವಾಗದಿದ್ದರೆ ಆಗ ಪೂರ್ತಿಯಾಗಿ ಹಣ್ಣಾಗದ ಬೇಲದ ಹಣ್ಣಿನ ರಸವನ್ನು ಹದಿನೈದರಿಂದ ಇಪ್ಪತ್ತು ಎಂಎಲ್ ನಷ್ಟು ಮೂರ್ನಾಲ್ಕು ದಿನಗಳ ಕಾಲ ಕೊಡಬೇಕು.

ಅತಿಯಾದ ಬಾಯಾರಿಕೆ, ಉಷ್ಣತೆ, ತಲೆನೋವು, ಹೊಟ್ಟೆ ಉರಿಯಂತಹ ತೊಂದರೆಗಳಿದ್ದಾಗ ಕೆಲ ದಿನಗಳ ಕಾಲ ಪ್ರತಿದಿನ ಒಂದು ಚೆನ್ನಾಗಿ ಬಲಿತ ಹಣ್ಣನ್ನು ಸೇವಿಸಬೇಕು. ಇದರಿಂದ ಮೇಲೆ ಹೇಳಿದ ಸಮಸ್ಯೆಗಳೆಲ್ಲ ನಿವಾರಣೆಯಾಗುತ್ತವೆ. ಚೆನ್ನಾಗಿ ಹಣ್ಣಾದರೂ ಸ್ವಲ್ಪ ಹುಳಿ ಗುಣವನ್ನು ಹೊಂದಿರುವ ಕಾರಣ ಇದನ್ನು ನಿತ್ಯ ಸೇವಿಸಿದರೆ ಹೃದಯದ ಮಾಂಸ ಖಂಡಗಳ ಶಕ್ತಿ ಹೆಚ್ಚಿ ಹೃದಯವು ತನ್ನ ಕಾರ್ಯವನ್ನು ಚೆನ್ನಾಗಿ ಮಾಡಲು ಸಾಧ್ಯವಾಗುತ್ತದೆ. ಆಧುನಿಕ ಸಂಶೋಧನೆಗಳ ಪ್ರಕಾರ ಇದಕ್ಕೆ ನರಗಳಿಗೆ ಶಕ್ತಿ ನೀಡುವ, ದುಷ್ಟ ಸೂಕ್ಷ್ಮಾಣು ಜೀವಿಗಳ ವಿರುದ್ಧ ಹೋರಾಡುವ, ಮಾಂಸ ಖಂಡಗಳ ಸೆಳೆತವನ್ನು ಕಡಿಮೆ ಮಾಡುವ ಮತ್ತು ಲಿವರ್​ಗೆ ಶಕ್ತಿ ನೀಡುವ ಗುಣಗಳು ಇವೆ ಎಂಬುದು ಸಾಬೀತಾಗಿದೆ.

ಆಯುರ್ವೆದ ಗ್ರಂಥಗಳಲ್ಲಿ ಇದಕ್ಕೆ ವಿಷಘ್ನ ಎಂದು ಕರೆದಿದ್ದಾರೆ. ಅಂದರೆ ಇದು ದೇಹದ ಮೇಲೆ ವಿಷಗಳಿಂದ ಉಂಟಾಗುವ ಪರಿಣಾಮವನ್ನು ಕಡಿಮೆ ಮಾಡುತ್ತದೆ; ಜೊತೆಗೆ ದೇಹವನ್ನು ವಿಷಗಳಿಂದ ಕಾಪಾಡುತ್ತದೆ ಎಂದರ್ಥ. ಹಾಗಾಗಿ ಪ್ರತಿದಿನವೂ ಗೊತ್ತಿದ್ದೋ ಗೊತ್ತಿಲ್ಲದೆಯೋ ರಾಸಾಯನಿಕಗಳನ್ನು ಸೇವಿಸುವ ನಾವೆಲ್ಲ ಈ ಹಣ್ಣನ್ನು ಆಗಾಗ ಸೇವಿಸಬೇಕು. ಜೊತೆಗೆ ಬಹುತೇಕವಾಗಿ ಇದನ್ನು ಬೆಳೆಯುವಾಗ ರಾಸಾಯನಿಕಗಳ ಬಳಕೆ ಆಗುವುದಿಲ್ಲ. ಈ ಎಲ್ಲ ಕಾರಣಗಳಿಂದ ದೇಹಕ್ಕೆ ಅಮೃತವನ್ನು ಉಣ್ಣಿಸುವ ಈ ವಿಶೇಷ ಹಣ್ಣನ್ನು ರಾಮನವಮಿಯ ನೆಪದಲ್ಲಿ ಈ ಬೇಸಿಗೆಯಲ್ಲಿ ನಾವೆಲ್ಲ ಸವಿಯೋಣ. ತನ್ಮೂಲಕ ಆರೋಗ್ಯವನ್ನು ವೃದ್ಧಿಸಿಕೊಳ್ಳೋಣ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net