ಆರೋಗ್ಯವೇ ಭಾಗ್ಯ; ಉತ್ತಮ ಆರೋಗ್ಯ ನಾವು ಖರೀದಿಸಬಹುದಾದ ವಸ್ತುವಲ್ಲ ಎಂಬುದು ನೆನಪಿರಲಿ!

Health
Published on
ಮನುಷ್ಯನಿಗೆ ಆರೋಗ್ಯ ನಿಜವಾದ ಸಂಪತ್ತು. ಕೋವಿಡ್-19 ಸಾಂಕ್ರಾಮಿಕ ಆರಂಭದ ಬಳಿಕ ಈ ಮಾತಿಗೆ ಹೆಚ್ಚಿನ ಮಹತ್ವ ದೊರೆತಿದೆಯೇನೋ ಎಂದು ಅನಿಸುವುದು ಸುಳ್ಳಲ್ಲ. ಉತ್ತಮ ಆರೋಗ್ಯವು ನಾವು ಖರೀದಿಸಬಹುದಾದ ವಸ್ತುವಲ್ಲ. ಈ ಕಾರಣದಿಂದ ಪ್ರತಿವರ್ಷ ಏ. 7ರಂದು ಆರೋಗ್ಯದ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ವಿಶ್ವ ಆರೋಗ್ಯ ದಿನ ಆಚರಿಸಲಾಗುತ್ತದೆ. 1950ರಿಂದ ಇದನ್ನು ಆಚರಿಸುತ್ತಾ ಬರಲಾಗುತ್ತಿದ್ದು, ಎಲ್ಲರಿಗೂ ಆರೋಗ್ಯ (ಏಛಿಚ್ಝಠಿಜ ಊಟ್ಟ ಅ್ಝ ಈ ವರ್ಷದ ಸದಾಶಯ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಮನುಷ್ಯನು ಆರೋಗ್ಯಕರವಾಗಿ ಜೀವನ ನಡೆಸಲು ಏನೆಲ್ಲ ನಿಯಮ ಪಾಲನೆ ಮಾಡಬೇಕು ಎಂಬುದರ ಕುರಿತು ತಜ್ಞ ವೈದ್ಯರು ನೀಡಿರುವ ಮಾಹಿತಿ ಇಲ್ಲಿ ನೀಡಲಾಗಿದೆ.

ಕಣ್ಣಿನ ದೃಷ್ಟಿ ರಕ್ಷಿಸಿಕೊಳ್ಳಿ

ಆರೋಗ್ಯಕರ ಆಹಾರ ಹಾಗೂ ಚಟುವಟಿಕೆಯುಕ್ತ ಜೀವನಶೈಲಿ. ವಿಶ್ರಾಂತಿ ಮತ್ತು ನಿದ್ರೆ ಸರಿಯಾಗಿದ್ದರೆ ಕಣ್ಣು ಸೇರಿ ದೇಹದ ಆರೋಗ್ಯ ಚೆನ್ನಾಗಿರುತ್ತದೆ. ಹಾಗಾಗಿ ಉತ್ತಮ ಆಹಾರ ಕ್ರಮದಿಂದ ದೃಷ್ಟಿಯನ್ನು ರಕ್ಷಿಸಿಕೊಳ್ಳಿ. ತಂತ್ರಜ್ಞಾನ ಬಳಕೆ ಹೆಚ್ಚಳದಿಂದಾಗಿ ಇಂದು ಜನರನ್ನು ಕಾಡುತ್ತಿರುವ ಕಣ್ಣಿನ ಸಮಸ್ಯೆಗಳಲ್ಲಿ ಕಂಪ್ಯೂಟರ್ ವಿಷನ್ ಸಿಂಡ್ರೋಮ್ ಕೂಡ ಒಂದು. ಇದಕ್ಕೆ ಪರಿಹಾರ ಕಂಡುಕೊಳ್ಳಲು 20-20-20 ನಿಯಮ ಅನುಸರಿಸಬೇಕು. ಅಂದರೆ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವವರು ಪ್ರತಿ 20 ನಿಮಿಷಕ್ಕೆ ಒಮ್ಮೆ, 20 ಬಾರಿ ಕಣ್ಣಿನ ರೆಪ್ಪೆಯನ್ನು ಮಿಟುಕಿಸಬೇಕು. ಹಾಗೇಯೇ 20 ಅಡಿ ದೂರದ ವಸ್ತುಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು. ಮೊಬೈಲ್, ಟಿವಿ ಸೇರಿ ಡಿಜಿಟಲ್ ಡಿವೈಸ್​ಗಳ ಬಳಕೆಯಲ್ಲಿ ಮಿತಿ ಇರಬೇಕು. ಮಕ್ಕಳು ಸೇರಿ ಎಲ್ಲ ವಯೋಮಾನದವರು ವರ್ಷಕ್ಕೆ ಒಮ್ಮೆ ಕಣ್ಣಿನ ಪರೀಕ್ಷೆ ಮಾಡಿಸಬೇಕು. ಮಧುಮೇಹಿಗಳು ವರ್ಷಕ್ಕೆ 2 ಬಾರಿ ತಪಾಸಣೆ ಮಾಡಿಸಿಕೊಳ್ಳಬೇಕು. 40 ವರ್ಷ ಮೇಲ್ಪಟ್ಟವರು ದೃಷ್ಟಿ ಸಮಸ್ಯೆ ತಡೆಯಲು ರೀಡಿಂಗ್ ಗ್ಲಾಸ್ ಬಳಸುವುದು ಸೂಕ್ತ.

| ಡಾ. ಭುಜಂಗಶೆಟ್ಟಿ, ನೇತ್ರ ತಜ್ಞರು ಹಾಗೂ ಮುಖ್ಯಸ್ಥರು, ನಾರಾಯಣ ನೇತ್ರಾಲಯ

ಕಿವಿ ಸಮಸ್ಯೆ ನಿರ್ಲಕ್ಷ್ಯ ಬೇಡ

ಜನರು ಶ್ರವಣ ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡಬಾರದು. ದೇಹದ ಇತರೆ ಅಂಗಾಂಗಗಳ ಬಗ್ಗೆ ಎಚ್ಚರ ವಹಿಸುವಂತೆ ಶ್ರವಣ ಆರೋಗ್ಯ ಬಗ್ಗೆಯೂ ಕಾಳಜಿ ವಹಿಸಬೇಕು. ಹಾಗಾಗಿ ಮಕ್ಕಳಲ್ಲಿ ಮಾತಿನ ಬೆಳವಣಿಗೆ ಆಗಲು ಶ್ರವಣ ಶಕ್ತಿ ಅತ್ಯವಶ್ಯಕ. ಹಾಗಾಗಿ ಮಗು ಹುಟ್ಟಿದ ಮೂರು ತಿಂಗಳ ಒಳಗಾಗಿ ಅದರ ಶ್ರವಣ ಸಾಮರ್ಥ್ಯವನ್ನು ವೈದ್ಯರಲ್ಲಿ ಪರೀಕ್ಷಿಸಿ ಸಮಸ್ಯೆ ಇಲ್ಲದಿರುವುದನ್ನು ಖಾತ್ರಿ ಪಡಿಸಿಕೊಳ್ಳಿ. ಇದಕ್ಕಾಗಿ ಪ್ರತಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಶ್ರವಣ ಪರೀಕ್ಷೆ ನಡೆಸಲಾಗುತ್ತಿದೆ. ಸಮಸ್ಯೆ ಇರುವ ಮಕ್ಕಳಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಕಾಕ್ಲಿಯರ್ ಇಂಪ್ಲಾಂಟ್ ಚಿಕಿತ್ಸೆ ಮಾಡಲಾಗುತ್ತದೆ. ಹಿರಿಯರಿಗೆ ಕಿವಿ ಕೇಳಿಸದಿದ್ದರೆ ಅದನ್ನು ನಿರ್ಲಕ್ಷ್ಯ ಮಾಡಬಾರದು ಬದಲಿಗೆ ಇಎನ್​ಟಿ ತಜ್ಞರಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಗುಗ್ಗೆ ತಗೆಯಲು ಬಡ್ಸ್ ಬಳಕೆ ಮಾಡುವುದು, ಕಿವಿಗೆ ಎಣ್ಣೆ, ಉಪ್ಪು ನೀರು ಹಾಕುವುದು ತಪ್ಪು. ಇದರಿಂದ ಕಿವಿ ಪರದೆ ಮೇಲೆ ಹೆಚ್ಚು ಕಾಲ ಉಳಿದು ಶಬ್ದದ ಅಲೆಗಳು ಮಂದ ಆಗಲಿದೆ. ಕಾಲ್ ಸೆಂಟರ್ ಅಥವಾ ಇಯರ್ ಫೋನ್ ಬಳಸಿ ನಿರಂತರವಾಗಿ ಶಬ್ದ ಕೇಳುತ್ತಿದ್ದರೇ ಅಂತವರು ಮೊಬೈಲ್, ಟಿವಿ, ಕಂಪ್ಯೂಟರ್​ನಲ್ಲಿ ಶೇ.60ಕ್ಕಿಂತ ಕಡಿಮೆ ಶಬ್ದ ಇಟ್ಟುಕೊಳ್ಳಬೇಕು. 1 ಗಂಟೆಗೂ ಹೆಚ್ಚು ಕಾಲ ಬಳಸಿದರೆ 10 ನಿಮಿಷವಾರೂ ಕಿವಿಗೆ ವಿಶ್ರಾಂತಿ ಕೊಡಬೇಕು.

| ಡಾ. ರಮೇಶ್ ಕೆ. ಕೌಲಗುಡ್, ಯೋಜನಾ ನಿರ್ದೇಶಕರು (ಐಡಿಎಸ್​ಪಿ ವಿಭಾಗ) ಆರೋಗ್ಯಇಲಾಖೆ

ಹೃದಯ ಜೋಪಾನ

ಅಸಮರ್ಪಕ ಆಹಾರ ಪದ್ಧತಿ, ಒತ್ತಡ ಹಾಗೂ ವಿಶ್ರಾಂತಿ ರಹಿತ ಜೀವನ, ಭಾವನಾತ್ಮಕ ಪ್ರಕ್ಷುಬ್ಧತೆ ಹೃದಯಕ್ಕೆ ಹಾನಿ ಉಂಟು ಮಾಡುತ್ತದೆ. ಇದಲ್ಲದೆ ಧೂಮಪಾನ, ಮದ್ಯಪಾನದಂತಹ ದುಶ್ಚಟ ಹಾಗೂ ಅತಿಯಾದ ಜಂಕ್ ಫುಡ್ ಸೇವನೆ, ವ್ಯಾಯಾಮ, ನಡಿಗೆ ಸೇರಿ ಆರೋಗ್ಯಕರ ಚಟುವಟಿಕೆಗಳನ್ನು ರೂಢಿಸಿಕೊಳ್ಳದಿರುವುದು ಹೃದ್ರೋಗಕ್ಕೆ ಪ್ರಮುಖ ಕಾರಣಗಳು. ಹಾಗಾಗಿ ಹೃದಯವನ್ನು ಆರೋಗ್ಯವಾಗಿಟ್ಟುಕೊಳ್ಳಲು ಮೊದಲಿಗೆ ಹೃದಯದ ಮೇಲಿನ ಒತ್ತಡವನ್ನು ಕಡಿಮೆ ಮಾಡಬೇಕು. ಇದಕ್ಕಾಗಿ ವ್ಯಾಯಾಮ, ಯೋಗ, ಧ್ಯಾನ ಮಾಡುವ ಮೂಲಕ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕು. ಮಧುಮೇಹ, ರಕ್ತದೊತ್ತಡ, ಕೊಲೆಸ್ಟ್ರಾಲ್, ಒಬೆಸಿಟಿ ಇವೆಲ್ಲವೂ ಹೃದಯ ಮೇಲೆ ಗಂಭೀರ ಪರಿಣಾಮ ಬಿರುತ್ತದೆ. ಹಾಗಾಗಿ ಪೌಷ್ಟಿಕ ಆಹಾರ ಸೇವಿಸಬೇಕು. ಹೆಚ್ಚು ಕೊಬ್ಬಿನಾಂಶ ಇರುವ, ಸಕ್ಕರೆ, ಉಪು್ಪ, ಕಾರ ಹಾಗೂ ಮಸಾಲೆ ಪದಾರ್ಥಗಳ ಬಳಕೆ ಮಿತವಾಗಿರಬೇಕು. 40 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ನಿಯಮಿತವಾಗಿ ಹೃದಯದ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ನಿದ್ರಾಹೀನತೆಯೂ ಪರೋಕ್ಷವಾಗಿ ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ ಹಾಗಾಗಿ ಚೆನ್ನಾಗಿ ನಿದ್ರೆ ಮಾಡಬೇಕು.

| ಡಾ. ಯು.ಎಂ.ನಾಗಮಲೇಶ್, ಮುಖ್ಯಸ್ಥರು, ನಾರಾಯಣ ಎಂ.ಎಸ್. ರಾಮಯ್ಯ ಹೃದ್ರೋಗ ಕೇಂದ್ರ

ವೈಯಕ್ತಿಕ ಸ್ವಚ್ಛತೆ ಮುಖ್ಯ

ಮನುಷ್ಯ ಆರೋಗ್ಯವಾಗಿರಲು ಆಹಾರ ಕ್ರಮ, ಚಟುವಟಿಕೆಯುಕ್ತ ಜೀವನ ಶೈಲಿ ಬಹಳ ಮುಖ್ಯ. ಆದರೆ ಈ ಎಲ್ಲದಕ್ಕೂ ಮುಖ್ಯವಾದದ್ದು ವೈಯಕ್ತಿಕ ಸ್ವಚ್ಛತೆ. ಇದಕ್ಕೆ ಆದ್ಯತೆ ನೀಡದಿದ್ದರೆ ಏನೇ ಆಹಾರ ಸೇವಿಸಿದರೂ ಅನಾರೋಗ್ಯ ಕಾಡದೆ ಬಿಡದು. ಕುಡಿಯುವ ನೀರು, ಸೇವಿಸುವ ಆಹಾರ, ಬಳಸುವ ತಟ್ಟೆ, ಲೋಟ, ಉಡುವ ಬಟ್ಟೆ ಹೀಗೆ ಎಲ್ಲವೂ ಸ್ವಚ್ಛವಾಗಿರಬೇಕು. ನಿತ್ಯ ಸ್ನಾನ ಮಾಡುವ ಮೂಲಕ ತ್ವಚೆಯ ಆರೋಗ್ಯ ಕಾಪಾಡಿಕೊಳ್ಳಬೇಕು. ಊಟ ಮಾಡುವುದಕ್ಕೂ ಮುನ್ನ ಹಾಗೂ ಶೌಚಕ್ಕೆ ಹೋದ ನಂತರ ಸಾಬೂನು ಬಳಸಿ ಬೆರಳುಗಳು, ಅಂಗೈ, ಮುಂಗೈ, ಉಗುರು ಸೇರಿ ಕೈಗಳನ್ನು ಸಂಪೂರ್ಣವಾಗಿ ಸ್ವಚ್ಛವಾಗಿ ತೊಳೆದುಕೊಳ್ಳಬೇಕು. ಹೊರಗಿನಿಂದ ಮನೆಗೆ ಬಂದ ಕೂಡಲೇ ಕೈ ಕಾಲು, ಮುಖ ತೊಳಗೆದುಕೊಳ್ಳಬೇಕು. ಮನೆಯಲ್ಲಿ ಪ್ರತಿಯೊಬ್ಬರು ಪ್ರತ್ಯೇಕ ಸಾಬೂನು, ಟವೆಲ್, ಹೊದಿಕೆಗಳನ್ನು ಬಳಸುವುದು ಒಳ್ಳೆಯದು. ಜ್ವರ, ಡೆಂಘ, ಚಿಕೂನ್​ಗುನ್ಯಾಎಚ್1ಎನ್1 ಸೇರಿ ಯಾವುದೇ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಂಡ ಸಂದರ್ಭದಲ್ಲಿ ಪ್ರತ್ಯೇಕವಾಸ ಹಾಗೂ ವೈಯಕ್ತಿಕ ವಸ್ತುಗಳ ಬಳಕೆಯಲ್ಲಿ ಪ್ರತ್ಯೇಕತೆ ಇದ್ದರೆ ಒಳ್ಳೆಯದು. ಮನೆಯ ಒಳಗೆ ಹಾಗೂ ಹೊರಗೆ ನೀರು ನಿಲ್ಲದಂತೆ, ಸೊಳ್ಳೆಗಳು ಉತ್ಪತ್ತಿಯಾಗದಂತೆ ಸ್ವಚ್ಛತೆ ಕಾಪಾಡಿಕೊಳ್ಳಬೇಕು.

| ಡಾ. ವಿ. ರವಿ, ವೈರಾಣು ತಜ್ಞ, ನಿಮ್ಯಾನ್ಸ್

ಬಾಯಿ-ದಂತ ಕಡೆಗಣಿಸದಿರಿ

ಮನುಷ್ಯ ಆರೋಗ್ಯವಾಗಿರಲು ಬಾಯಿ ಮತ್ತು ದಂತ (ಹಲ್ಲಿನ) ಆರೋಗ್ಯ ವಿಶೇಷ ಪಾತ್ರ ವಹಿಸುತ್ತದೆ. ಇವುಗಳ ನೈರ್ಮಲ್ಯವನ್ನು ಕಡೆಗಣಿಸಿದರೆ ದೀರ್ಘಕಾಲದಲ್ಲಿ ಅದು ಒಟ್ಟಾರೆ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಆದರೆ ಜನರು ಹಲ್ಲು ನೋವು ಬರುವವರೆಗೂ ಈ ಬಗ್ಗೆ ಗಮನ ಹರಿಸುವುದೇ ಇಲ್ಲ. ಬಾಯಿ ಮತ್ತು ದಂತ ನೈರ್ಮಲ್ಯ ನಿರ್ಲಕ್ಯ ಮಾಡಿದಲ್ಲಿ ದಂತಕುಳಿಗಳು ಮತ್ತು ವಸಡಿನ ಕಾಯಿಲೆಗಳಿಗೆ ಕಾರಣವಾಗುತ್ತದೆ. ಆದ್ದರಿಂದ ಬಾಯಿ ಮತ್ತು ದಂತ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಹಲ್ಲುಗಳನ್ನು ಶುಭ್ರವಾಗಿ ಇಟ್ಟುಕೊಳ್ಳಲು ಮೃದುವಾದ ಬ್ರಿಸ್ಟಲ್​ಗಳುಳ್ಳ ಬಾಯಿಯ ಎಲ್ಲ ಮೂಲೆಗಳಿಗೂ (ಡವಡೆಯ ಮೂಲೆ) ಮುಟ್ಟಬಲ್ಲ ಸಣ್ಣ ತಲೆಯ ಬ್ರಶ್​ಗಳನ್ನು ಉಪಯೋಗಿಸಬೇಕು. ಗಡುಸಾದ ಬ್ರಶ್ ಬಳಕೆಯಿಂದ ವಸಡಿಗೆ ಹಾನಿ ಉಂಟು ಮಾಡುತ್ತದೆ. ಉತ್ತಮ ಪೇಸ್ಟ್ ಆಯ್ಕೆ ಮಾಡಿಕೊಳ್ಳಬೇಕು. ಗರಿಷ್ಠ ಐದು ನಿಮಿಷಗಳ ಕಾಲ ಬ್ರಶ್ ಮಾಡಿದರೆ ಸಾಕು. ಬೆಳಗ್ಗೆ ಮಾತ್ರವಲ್ಲದೆ ರಾತ್ರಿ ಮಲಗುವ ಮುನ್ನ ಬ್ರಶ್ ಮಾಡಬೇಕು. ಇದರಿಂದ ಬಾಯಿಯಲ್ಲಿ ಬ್ಯಾಕ್ಟೀರಿಯಾ ಬೆಳವಣಿಗೆ ತಪ್ಪಿಸಬಹುದು. ಸಿಹಿ ತಿಂದಾಗ ಮೌತ್​ವಾಶ್ ಬಳಸಿ ಬಾಯಿಯನ್ನು ಮುಕ್ಕಳಿಸಬೇಕು.

| ಡಾ. ಜಿ. ಗಿರೀಶ್, ದಂತ ವೈದ್ಯರು, ಚಿನ್ಮಯಿ ದಂತ ಚಿಕಿತ್ಸಾಲಯ

ಮೂತ್ರಪಿಂಡ ಎಚ್ಚರಿಕೆ!

ಮಧುಮೇಹ, ಅಧಿಕ ರಕ್ತದೊತ್ತಡ, ಮೂತ್ರಪಿಂಡ ಸಮಸ್ಯೆಯ ಕುಟುಂಬದ ಇತಿಹಾಸ ಹೊಂದಿರುವುದು ಮೂತ್ರಪಿಂಡ ಸಮಸ್ಯೆಗೆ ಪ್ರಮುಖ ಕಾರಣಗಳಾಗಿವೆ. ಹೀಗಾಗಿ ಈ ಸಮಸ್ಯೆಗಳು ಬರದಂತೆ ಎಚ್ಚರವಹಿಸಬೇಕು. ಆರೋಗ್ಯವಂತ ಮೂತ್ರಪಿಂಡಗಳನ್ನು ರಕ್ಷಿಸಿಕೊಳ್ಳಲು ಹೆಚ್ಚುವರಿ ಕಾಳಜಿಯ ಅಗತ್ಯವಿದ್ದು, ಸಮತೋಲನ ಆಹಾರ, ವ್ಯಾಯಾಮ, ಉತ್ತಮ ನಿದ್ರೆ ಸೇರಿ ಶಿಸ್ತುಬದ್ಧ ಜೀವನಶೈಲಿಯಿಂದ ಮಧುಮೇಹ ಹಾಗೂ ರಕ್ತದೊತ್ತಡ ಬರದಂತೆ ಎಚ್ಚರ ವಹಿಸಬಹುದು. ಕೋವಿಡ್ ಸೋಂಕು ಕಿಡ್ನಿಗಳ ಮೇಲೆ ಗಂಭೀರ ಪರಿಣಾಮ ಉಂಟು ಮಾಡಿದೆ ಎಂದು ಸಂಶೋಧನೆಯಿಂದ ದೃಢಪಟ್ಟಿದೆ. ಕಿಡ್ನಿ ಸಂಬಂಧಿತ ಚಿಕಿತ್ಸೆಗೆ ವೈದ್ಯರ ಬಳಿ ಹೋದಲ್ಲಿ ಈ ಹಿಂದೆ ಕೋವಿಡ್ ಸೋಂಕಿಗೆ ಒಳಗಾಗಿದ್ದರೆ ಅದನ್ನು ವೈದ್ಯರ ಗಮನಕ್ಕೆ ತರಬೇಕು.

| ಡಾ. ಎಂ. ಶಿವಲಿಂಗಯ್ಯ ಮೂತ್ರಶಾಸ್ತ್ರ ತಜ್ಞರು, ನೆಫ್ರೋ ಯುರಾಲಜಿ ಸಂಸ್ಥೆ, ಬೆಂಗಳೂರು

ಗರ್ಭಿಣಿ ಆರೋಗ್ಯ

ಗರ್ಭಿಣಿಯರು ಉತ್ತಮ ನಿದ್ರೆ, ವಿಶ್ರಾಂತಿಯ ಜತೆಗೆ ಪೋಷಕಾಂಶ ಇರುವ ಉತ್ತಮ ಆಹಾರ ಸೇವಿಸುವುದು ಅತೀ ಮುಖ್ಯ. ಗರ್ಭಿಣಿಯರು ಆಹಾರ ಕ್ರಮದ ಬಗ್ಗೆ ಬಹಳ ಎಚ್ಚರಿಕೆ ವಹಿಸಬೇಕು. ಗರ್ಭಿಣಿಯರಿಗೆ ಸಾಮಾನ್ಯಕ್ಕಿಂತಲು ಹೆಚ್ಚಿನ ಪ್ರಮಾಣದಲ್ಲಿ ಕಬ್ಬಿಣಾಂಶ ಸೇವನೆ ಮಾಡಬೇಕಾಗುತ್ತದೆ. ಜತೆಗೆ ಕ್ಯಾಲ್ಸಿಯಂ ಹಾಗೂ ಐಯೋಡಿನ್ ಸಹ ಅಗತ್ಯವಿರುತ್ತದೆ. ಇದು ಮಗುವಿನ ಮೂಳೆ ಮತ್ತು ಮಿದುಳಿನ ಬೆಳವಣಿಗೆಗೆ ಅತ್ಯವಶ್ಯಕ. ಒಟ್ಟಾರೆ ತಾಯಿ ಮತ್ತು ಮಗು ಇಬ್ಬರ ಆರೋಗ್ಯದ ಕಾಳಜಿ ಅತೀ ಮುಖ್ಯವಾಗಿರುವುದರಿಂದ ನಿಯಮಿತವಾಗಿ ವೈದ್ಯರಲ್ಲಿ ತಪಾಸಣೆ ಮಾಡಿಸಿಕೊಳ್ಳುವುದರ ಜತೆಗೆ ಅವರು ನೀಡುವ ಸಲಹೆಗಳನ್ನು ತಪ್ಪದೆ ಪಾಲಿಸಬೇಕು. ಮದ್ಯಪಾನ, ಧೂಮಪಾನ, ಮಾದಕ ವ್ಯಸನಗಳಿಂದ ದೂರವಿರಬೇಕು. ತಂಪು ಪಾನೀಯ ಹಾಗೂ ಸಂಸ್ಕರಿಸಿದ ಆಹಾರ ಮತ್ತು ಪಾನೀಯ ಸೇವನೆ ಮಾಡಬಾರದು.

| ಡಾ. ವಿದ್ಯಾಭಟ್ ಸ್ತ್ರೀರೋಗ ತಜ್ಞೆ, ರಾಧಾಕೃಷ್ಣ ಸೂಪರ್​ಸ್ಪೆಷಾಲಿಟಿ ಆಸ್ಪತ್ರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net