

ನವದೆಹಲಿ: ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಬಳದಾರರಿಗೆ ಬಂಪರ್ ಕೊಡುಗೆ ಕೊಟ್ಟಿದ್ದಾರೆ. ಹೊಸ ತೆರಿಗೆ ಪದ್ಧತಿಯಲ್ಲಿ 50 ಸಾವಿರ ಇದ್ದ ಸ್ಟಾಂಡರ್ಡ್ ಡಿಡಕ್ಷನ್ ಅನ್ನು 75 ಸಾವಿರಕ್ಕೆ ಏರಿಕೆ ಮಾಡಿದ್ದಾರೆ. ಅಲ್ಲದೆ, ಹೊಸ ತೆರಿಗೆ ಪದ್ಧತಿಯಲ್ಲಿ ಬದಲಾದ ತೆರಿಗೆ ವರ್ಗೀಕರಣ ಈ ಕಳೆಗಿನಂತಿದೆ. ಮತ್ತೆ ಯಾವುದೇ ಪ್ರಮುಖ ಬದಲಾವಣೆಗಳನ್ನು ಹಳೆಯ ತೆರಿಗೆ ಪದ್ಧತಿಯಲ್ಲಾಗಲಿ ಅಥವಾ ಹೊಸ ತೆರಿಗೆ ಪದ್ಧತಿಯಲ್ಲಾಗಲಿ ಮಾಡಲು ಕೈಹಾಕಿಲ್ಲ.
ಈ ಸ್ಟಾಂಡರ್ಡ್ ಡಿಡಕ್ಷನ್ ಏರಿಕೆಯಿಂದ ಆದಾಯ ತೆರಿಗೆ ಪಾವತಿಯಲ್ಲಿ ಒಟ್ಟು 17,500 ರೂ.ಗಳನ್ನು ತೆರಿಗೆದಾರರು ಉಳಿತಾಯ ಮಾಡಬಹುದಾಗಿದೆ.
ಆದಾಯ ತೆರಿಗೆಯನ್ನು ಪ್ರಸ್ತಾಪಿಸಿದ ನಿರ್ಮಲಾ ಸೀತಾರಾಮನ್, ವೈಯಕ್ತಿಕ ಆದಾಯ ತೆರಿಗೆ ದರಗಳಿಗೆ ಬರುವುದಾದರೆ, ಹೊಸ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡುವವರಿಗೆ ನಾನು ಎರಡು ಪ್ರಮುಖ ಘೋಷಣೆಗಳನ್ನು ಮಾಡುತ್ತೇನೆ. ಮೊದಲನೆಯದಾಗಿ, ಸಂಬಳದ ಉದ್ಯೋಗಿಗಳ ಸ್ಟ್ಯಾಂಡರ್ಡ್ ಡಿಡಕ್ಷನ್ ಅನ್ನು 50,000 ರೂ. ನಿಂದ 75,000 ರೂ.ಗೆ ಹೆಚ್ಚಿಸಲು ಪ್ರಸ್ತಾಪಿಸಲಾಗಿದೆ. ಅದೇ ರೀತಿ, ಪಿಂಚಣಿದಾರರಿಗೆ ಕುಟುಂಬ ಪಿಂಚಣಿ ಮೇಲಿನ ಸ್ಟ್ಯಾಂಡರ್ಡ್ ಡಿಡಕ್ಷನ್ ಅನ್ನು 15,000 ರೂ.ಗಳಿಂದ 25,000 ರೂ.ಗೆ ಹೆಚ್ಚಿಸಲು ಉದ್ದೇಶಿಸಲಾಗಿದ್ದು, ಇದು ಸುಮಾರು 4 ಕೋಟಿ ವೇತನದಾರರು ಮತ್ತು ಪಿಂಚಣಿದಾರರಿಗೆ ಪರಿಹಾರವನ್ನು ನೀಡುತ್ತದೆ ಎಂದು ವಿತ್ತಸಚಿವೆ ಹೇಳಿದರು.
ಹೊಸ ತೆರಿಗೆ ಪದ್ಧತಿಯಲ್ಲಿ ಬದಲಾದ ತೆರಿಗೆ ವರ್ಗೀಕರಣ ಹೀಗಿದೆ.. * 0 ರಿಂದ 3 ಲಕ್ಷ ರೂ.ವರೆಗಿನ ಆದಾಯ ಮೇಲೆ ಯಾವುದೇ ತೆರಿಗೆ ಇಲ್ಲ * 3 ರಿಂದ 7 ಲಕ್ಷ ರೂ.ವರೆಗಿನ ಆದಾಯದ ಮೇಲೆ ಶೇ. 5 ರಷ್ಟು ತೆರಿಗೆ * 7 ರಿಂದ 10 ಲಕ್ಷ ರೂ.ವರೆಗಿನ ಆದಾಯದ ಮೇಲೆ ಶೇ.10 ರಷ್ಟು ತೆರಿಗೆ * 10 ರಿಂದ 12 ಲಕ್ಷ ರೂ.ವರೆಗಿನ ಆದಾಯದ ಮೇಲೆ ಶೇ.15 ರಷ್ಟು ತೆರಿಗೆ * 12 ರಿಂದ 15 ಲಕ್ಷ ರೂ.ವರೆಗಿನ ಆದಾಯದ ಮೇಲೆ ಶೇ.20 ರಷ್ಟು ತೆರಿಗೆ * 15 ಲಕ್ಷ ರೂ.ಗಿಂತ ಹೆಚ್ಚಿನ್ನ ಮೊತ್ತದ ಆದಾಯಕ್ಕೆ ಶೇ. 30 ರಷ್ಟು ತೆರಿಗೆ
ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಅಧಿಕಾರ ವಹಿಸಿಕೊಂಡ ನಂತರ ಸರ್ಕಾರ ತನ್ನ ಮೊದಲ ಪೂರ್ಣ ಬಜೆಟ್ ಮಂಡನೆಯಾಗುತ್ತಿದ್ದು, ಹಣಕಾಸು ನಿರ್ಮಲಾ ಸೀತಾರಾಮನ್ ಅವರು ಸತತ ಏಳನೇ ಬಾರಿಗೆ ಬಜೆಟ್ ಮಂಡಿಸುತ್ತಿದ್ದಾರೆ. (ಏಜೆನ್ಸೀಸ್)