ಮೊದಲ ಬಾರಿ ಉದ್ಯೋಗ ಪಡೆದವರಿಗೆ 15 ಸಾವಿರ ರೂಪಾಯಿ ಕೊಡುಗೆ: ವಿತ್ತಸಚಿವೆ ಘೋಷಣೆ

Money
Published on

ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಮಂಡಿಸಿದ ಕೇಂದ್ರ ಬಜೆಟ್​ನಲ್ಲಿ ಉದ್ಯೋಗಿಗಳಿಗೆ ವಿಶೇಷ ಒತ್ತನ್ನು ನೀಡಲಾಗಿದೆ. ಸರ್ಕಾರದ ಒಂಬತ್ತು ಆದ್ಯತೆಗಳಲ್ಲಿ ಒಂದಾದ ಉದ್ಯೋಗ ಮತ್ತು ಕೌಶಲ್ಯ ಅಭಿವೃದ್ಧಿ ಅಡಿಯಲ್ಲಿ ಎಂಪ್ಲಾಯ್ಮೆಂಟ್​ ಲಿಂಕ್ಡ್​ ಇನ್ಸೆಂಟಿವ್​ಗಾಗಿ 3 ಪ್ರಮುಖ ಯೋಜನೆಗಳನ್ನು ಘೋಷಿಸಲಾಗಿದೆ.

ಮೂರು ಯೋಜನೆಗಳನ್ನು ಸ್ಕೀಮ್​ ಎ (ಹೊಸದಾಗಿ ಉದ್ಯೋಗ ಕ್ಷೇತ್ರಕ್ಕೆ ಕಾಲಿಟ್ಟ ಉದ್ಯೋಗಿಗಳಿಗೆ), ಸ್ಕೀಮ್​-ಬಿ (ಉತ್ಪಾದನೆಯಲ್ಲಿ ಉದ್ಯೋಗ ಸೃಷ್ಟಿ) ಮತ್ತು ಸ್ಕೀಮ್​-ಸಿ (ಉದ್ಯೋಗಿಗಳಿಗೆ ಬೆಂಬಲ) ಎಂದು ವಿಂಗಡಿಸಲಾಗಿದೆ.

* ಸ್ಕೀಮ್​-ಎ: ಈ ಯೋಜನೆಯ ಪ್ರಕಾರ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್​ಒ) ಅಡಿಯಲ್ಲಿ ಮೊದಲ ಬಾರಿಗೆ ನೋಂದಾಯಿಸಲಾದ ಎಲ್ಲ ವಲಯದ ಉದ್ಯೋಗಿಗಳಿಗೆ 15,000 ರೂ. ವರೆಗೆ 3 ಕಂತುಗಳಲ್ಲಿ 1 ತಿಂಗಳ ಸಂಬಳವನ್ನು ಕೊಡಗೆ ನೀಡಲಾಗುತ್ತದೆ. ನೇರ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ. ತಿಂಗಳಿಗೆ 1 ಲಕ್ಷ ರೂ.ವರೆಗೂ ಸಂಬಳ ಪಡೆಯುವವರಿಗೆ ಇದು ಅನ್ವಯಿಸುತ್ತದೆ. ಈ ಸ್ಕೀಮ್​ನಿಂದ 2.1 ಕೋಟಿ ಯುವಕರಿಗೆ ಲಾಭವಾಗಲಿದೆ.

* ಸ್ಕೀಮ್​-ಬಿ: ಉದ್ಯೋಗಕ್ಕೆ ಸೇರಿದ ಮೊದಲ 4 ವರ್ಷಗಳಲ್ಲಿ ಅವರ ಇಪಿಎಫ್​ಒ ​​ಕೊಡುಗೆ ಆಧಾರದ ಮೇಲೆ ಉದ್ಯೋಗಿ ಮತ್ತು ಉದ್ಯೋಗದಾತರಿಗೆ ನೇರವಾಗಿ ಪ್ರೋತ್ಸಾಹ ಒದಗಿಸಲಾಗುವುದು. ಇದರಿಂದ 30 ಲಕ್ಷ ಯುವಕರು ಮತ್ತು ಉದ್ಯೋಗದಾತರಿಗೆ ಅನುಕೂಲವಾಗಲಿದೆ.

* ಸ್ಕೀಮ್​-ಸಿ: ತಿಂಗಳಿಗೆ 1 ಲಕ್ಷ ರೂ. ಸಂಬಳದೊಳಗಿನ ಎಲ್ಲಾ ವಲಯಗಳಲ್ಲಿರುವ ಹೆಚ್ಚುವರಿ ಉದ್ಯೋಗಕ್ಕೆ 2 ವರ್ಷಗಳವರೆಗೆ ಇಪಿಎಫ್‌ಒ ಶುಲ್ಕಗಳನ್ನು ಸರಿದೂಗಿಸಲು ತಿಂಗಳಿಗೆ ರೂ 3,000 ಒದಗಿಸಲಾಗುತ್ತದೆ. ಇದು 50 ಲಕ್ಷ ಜನರಿಗೆ ಹೆಚ್ಚುವರಿ ಉದ್ಯೋಗವನ್ನು ಉತ್ತೇಜಿಸುತ್ತದೆ.

ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಅಧಿಕಾರ ವಹಿಸಿಕೊಂಡ ನಂತರ ಸರ್ಕಾರ ತನ್ನ ಮೊದಲ ಪೂರ್ಣ ಬಜೆಟ್ ಮಂಡನೆಯಾಗುತ್ತಿದ್ದು, ಹಣಕಾಸು ನಿರ್ಮಲಾ ಸೀತಾರಾಮನ್ ಅವರು ಸತತ ಏಳನೇ ಬಾರಿಗೆ ಬಜೆಟ್ ಮಂಡಿಸುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net