

| ಶಿವಾನಂದ ಹಿರೇಮಠ ಗದಗ
ರಾಜ್ಯದಲ್ಲಿ ತಲೆದೋರಿರುವ ಸರ್ಕಾರಿ ನೇಮಕಾತಿ ಗೊಂದಲಗಳಲ್ಲಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ವಿಚಾರವೂ ಸೇರ್ಪಡೆಗೊಂಡಿದೆ. 2021- 22ರ ಅಧಿಸೂಚನೆ ಅಡಿ ನೇಮಕಗೊಂಡಿದ್ದ 13,500 ಅಭ್ಯರ್ಥಿಗಳ ಪೈಕಿ 3000ಕ್ಕೂ ಅಧಿಕ ಅಭ್ಯರ್ಥಿಗಳ ದಾಖಲೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದ್ದು, ಪ್ರಕರಣ ಶೀಘ್ರ ರ್ತಾಕ ಅಂತ್ಯ ಕಾಣಲಿ ಎಂದು ಅಭ್ಯರ್ಥಿಗಳು ಕಾದು ಕುಳಿತಿದ್ದಾರೆ. ಆದರೆ, ಹಿಂದಿನ ವಿಚಾರಣೆಗೆ ರಾಜ್ಯ ಸರ್ಕಾರದ ಪರ ವಕೀಲರು ಹಾಜರಾಗದ ಪರಿಣಾಮ ಪ್ರಕರಣ ಮುಂದೂಡಲಾಗಿದೆ. ಕಳೆದ ಮೂರು ವರ್ಷಗಳಿಂದ ಗೊಂದಲದ ಗೂಡಾಗಿರುವ ಈ ಪ್ರಕರಣಕ್ಕೆ ರ್ತಾಕ ಅಂತ್ಯ ಕಾಣಿಸುವಲ್ಲಿ ಶಿಕ್ಷಣ ಇಲಾಖೆಯ ಮುತುವರ್ಜಿ ಕುಂಠಿತಗೊಂಡಿದೆ.
ಏನಿದು ಪ್ರಕರಣ?: ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ 15000 ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿತ್ತು. 13500ಕ್ಕೂ ಅಧಿಕ ಅಭ್ಯರ್ಥಿಗಳು ನೇಮಕಗೊಂಡಿದ್ದರು. ಅದರಲ್ಲಿ 3000ಕ್ಕೂ ಅಧಿಕ ಅಭ್ಯರ್ಥಿಗಳ ದಾಖಲೆಗೆ ಸಂಬಂಧಿಸಿದಂತೆ ಗೊಂದಲ ಏರ್ಪಟ್ಟಿತ್ತು. ವಿವಾಹಿತೆಯ ನೇಮಕಾತಿಗೆ ಸಂಬಂಧಿಸಿದಂತೆ ಪತಿಯ ಆದಾಯ ಪ್ರಮಾಣಪತ್ರ ಪರಿಗಣಿಸಬೇಕೇ? ಅಥವಾ ತಂದೆ ಆದಾಯ ಪ್ರಮಾಣ ಪತ್ರ ಪರಿಗಣಿಸಬೇಕೇ? ಎಂಬ ಪ್ರಕರಣ ಇದಾಗಿದೆ. ಈ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಬೆನ್ನಲ್ಲೇ ನೇಮಕಾತಿ ಪ್ರಕ್ರಿಯೆಯಲ್ಲಿ ಯಾವುದೇ ಗೊಂದಲ ಇರದೇ ಕೌನ್ಸೆಲಿಂಗ್ ಪೂರ್ಣಗೊಂಡಿದ್ದ 1000ಕ್ಕೂ ಅಧಿಕ ಸಾಮಾನ್ಯ ವರ್ಗದ (ಜಿಎಂ) ನೇಮಕಾತಿ ಆದೇಶ ನೀಡಲು ಶಿಕ್ಷಣ ಇಲಾಖೆ ಹಿಂದೇಟು ಹಾಕುತ್ತಿದೆ.
ನಿಯಮವೇನು?: 1986ರ ಡಿ.12ರ ಡಿಪಿಎಆರ್ ನಿಯಮದ ಪ್ರಕಾರ ವಿವಾಹಿತ ಮಹಿಳೆಯು ಸರ್ಕಾರಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಪತಿಯ ಆದಾಯ ಪತ್ರ ಮತ್ತು ಅವಿವಾಹಿತೆಯು ತಂದೆಯ ಆದಾಯ ಪ್ರಮಾಣ ಪತ್ರ ಸಲ್ಲಿಸಬೇಕು. ಸಿ ಆಂಡ್ ಆರ್ ನಿಯಮಗಳ ಪ್ರಕಾರ ಚಾಲ್ತಿಯಲ್ಲಿ ಇರುವ ನೇಮಕಾತಿ ಪ್ರಕ್ರಿಯೆ (ಡಿಪಿಎಆರ್) ಪ್ರಕಾರ ಪ್ರಮಾಣ ಪತ್ರ ಪಡೆಯಬೇಕು ಎಂಬ ನಿಯಮವಿದೆ. ಕೆಎಎಸ್, ಪಿಡಿಒ, ಗ್ರಾಮ ಲೆಕ್ಕಾಧಿಕಾರಿ ಸೇರಿ ಇತರ ನೇಮಕಾತಿಗೂ ಇದೇ ನಿಯಮಗಳ ಅಡಿಯಲ್ಲಿ ನೇಮಕಾತಿ ಜರುಗಿಸಲಾಗಿದೆ. ಆದರೆ, ಈ ಪ್ರಕರಣದಲ್ಲಿ ಈ ದ್ವಂದ್ವ ನೀತಿ ಉಲ್ಬಣಗೊಂಡಿದೆ.
ಮೇ 7ರಂದು ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ವಿಚಾರಣೆ ಇತ್ತು. ಅಂದು ಸರ್ಕಾರಿ ವಕೀಲರು ಗೈರಾಗಿದ್ದರಿಂದ ದಿನಾಂಕ ಮುಂದೂಡಲಾಯಿತು. ಸರ್ಕಾರದ ವಿಳಂಬ ನೀತಿಯಿಂದ ಸಾವಿರಾರು ಅಭ್ಯರ್ಥಿಗಳಿಗೆ ತೊಂದರೆ ಆಗುತ್ತಿದೆ. ಇದು ಇಷ್ಟೊಂದು ದೊಡ್ಡ ಪ್ರಕರಣವೇ ಅಲ್ಲ. ಸರ್ಕಾರದ ಗೊಂದಲಗಳಿಂದ ಈ ಪ್ರಕರಣ ಗೋಜಲಾಗುತ್ತಿದೆ.
| ಲೀಲಾವತಿ ಎಂ. , ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಹಾಕಿರುವವರು