

ಇಂಫಾಲ್: ಪುರುಷರ ಗುಂಪೊಂದು ಇಬ್ಬರು ಮಹಿಳೆಯರನ್ನು ರಸ್ತೆಯಲ್ಲಿ ಬೆತ್ತಲೆಯಾಗಿ ಮೆರವಣಿಗೆ ಮಾಡಿರುವ ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರೀ ಖಂಡನೆ ವ್ಯಕ್ತವಾಗಿದೆ. ಅಲ್ಲದೆ, ಕಠಿಣ ಕ್ರಮ ಜರುಗಿಸಲು ಒತ್ತಾಯಿಸಲಾಗಿದೆ.
ಈ ಘಟನೆ ಮಣಿಪುರದ ಕೊಂಗ್ಪೊಕ್ಪಿ ಜಿಲ್ಲೆಯಲ್ಲಿ ಮೇ 4 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸಂತ್ರಸ್ತ ಮಹಿಳೆಯರಿಬ್ಬರನ್ನು ಗ್ಯಾಂಗ್ರೇಪ್ ಮಾಡಿದ್ದಾರೆ ಎಂದು ಸ್ಥಳೀಯ ಬುಡಕಟ್ಟು ನಾಯಕರ ವೇದಿಕೆ ಆರೋಪ ಮಾಡಿದೆ. ಮಣಿಪುರ ರಾಜಧಾನಿ ಇಂಫಾಲ್ನಿಂದ 35 ಕಿ.ಮೀ. ಅಂತರದಲ್ಲಿ ಈ ಅಮಾನುಷ ಘಟನೆ ನಡೆದಿದ್ದು, ಈ ಸಂಬಂಧ ಎಫ್ಐಆರ್ ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಹೆಚ್ಚಿನ ಆದ್ಯತೆ ನೀಡಿ ಈ ಪ್ರಕರಣವನ್ನು ತನಿಖೆ ನಡೆಸುವಂತೆ ಮಣಿಪುರ ಸಿಎಂ ಎನ್. ಬೈರೆನ್ ಸಿಂಗ್ ಆದೇಶಿಸಿದ್ದಾರೆ. ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ ಅವರು ಘಟನೆಯ ಬಗ್ಗೆ ನನ್ನೊಂದಿಗೆ ಮಾತನಾಡಿದ್ದಾರೆ. ಶೀಘ್ರದಲ್ಲೇ ಆರೋಪಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದೇನೆ ಎಂದರು.
ಸ್ಮೃತಿ ಇರಾನಿ ಅವರು ಟ್ವೀಟ್ ಸಹ ಮಾಡಿದ್ದು, ಮಣಿಪುರದ ಇಬ್ಬರು ಮಹಿಳೆಯರ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯದ ಭಯಾನಕ ವಿಡಿಯೋ ಅಂತ್ಯಂತ ಖಂಡನೀಯ ಮತ್ತು ಅಮಾನವೀಯವಾಗಿದೆ. ಸಿಎಂ ಬೈರೆನ್ ಸಿಂಗ್ ಅವರೊಂದಿಗೆ ಮಾತನಾಡಿದ್ದೇನೆ. ಪ್ರಸ್ತುತ ತನಿಖೆ ನಡೆಯುತ್ತಿದೆ ಎಂದು ನನಗೆ ತಿಳಿಸಿದರು ಮತ್ತು ಅಪರಾಧಿಗಳನ್ನು ನ್ಯಾಯಾಲಯದ ಮುಂದೆ ತರಲು ಯಾವುದೇ ಪ್ರಯತ್ನವನ್ನು ನಾವು ಬಿಡುವುದಿಲ್ಲ ಎಂದು ಭರವಸೆ ನೀಡಿದರು ಎಂದು ಇರಾನಿ ಟ್ವೀಟ್ ಮಾಡಿದ್ದಾರೆ.
ಪರಿಶಿಷ್ಟ ಪಂಗಡಗಳ (ST) ಸ್ಥಾನಮಾನಕ್ಕಾಗಿ ಮೈತೀಸ್ ಸಮುದಾಯ ಇಟ್ಟಿರುವ ಬೇಡಿಕೆಯ ಕುರಿತು ಮಣಿಪುರದ ಮೈತೀಸ್ ಮತ್ತು ಕುಕಿ ಬುಡಕಟ್ಟುಗಳ ನಡುವೆ ಘರ್ಷಣೆಗಳು ಸಂಭವಿಸಿರುವ ಬೆನ್ನೆಲ್ಲೇ ಈ ಭಯಾನಕ ಘಟನೆಯೂ ನಡೆದಿದೆ.
ಈ ಕೃತ್ಯ ಮೇ 4ರಂದು ಕಾಂಗ್ಪೊಕ್ಪಿ ಜಿಲ್ಲೆಯಲ್ಲಿ ನಡೆದಿದ್ದು, ಅಸಹಾಯಕ ಮಹಿಳೆಯರ ಮೇಲೆ ಪುರುಷರು ನಿರಂತರವಾಗಿ ದೌರ್ಜನ್ಯ ಎಸಗಿರುವುದು ಕಂಡುಬಂದಿದೆ. ಎಷ್ಟೇ ಕಣ್ಣೀರಿಟ್ಟು, ಗೊಗರೆದರು ಸಂತ್ರಸ್ತೆಯರನ್ನು ದುಷ್ಟರು ಹೀನಾಯವಾಗಿ ನಡೆಸಿಕೊಂಡಿದ್ದಾರೆ. ಈ ಸಂಬಂಧ ಸ್ಥಳೀಯ ಬುಡಕಟ್ಟು ನಾಯಕರ ವೇದಿಕೆ ಕೇಂದ್ರ ಮಹಿಳಾ ಆಯೋಗ ಮತ್ತು ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗದ ಮೊರೆ ಹೋಗಿದೆ. (ಏಜೆನ್ಸೀಸ್)