

ಮುಂಬೈ: 'ಬಾವಾಲ್' ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿರುವ ಬಾಲಿವುಡ್ ನಟ ವರುಣ್ ಧವನ್ ಇದೀಗ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದು, ವ್ಯಾಪಕ ಟ್ರೋಲ್ಗೆ ತುತ್ತಾಗಿದ್ದಾರೆ.
ವರುಣ್ ಧವನ್ ಮತ್ತು ಜಾನ್ವಿ ಕಪೂರ್ ಮೊದಲ ಬಾರಿಗೆ ಜೋಡಿಯಾಗಿ ನಟಿಸಿರುವ 'ಬಾವಾಲ್' ಚಿತ್ರದ ಪ್ರಚಾರಕ್ಕಾಗಿ ಫೋಟೋ ಶೂಟ್ ನಡೆಸಲಾಗಿತ್ತು. ಫೋಟೋ ತೆಗೆಸಿಕೊಳ್ಳಲು ಇಬ್ಬರು ಕಪ್ಪು ಬಣ್ಣದ ಉಡುಗೆಯನ್ನು ತೊಟ್ಟು ಮಿಂಚಿದರು. ಈ ವೇಳೆ ವರುಣ್, ನಟಿ ಜಾನ್ವಿ ಅವರ ಕಿವಿಯನ್ನು ತಮಾಷೆಯಾಗಿ ಕಚ್ಚುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಇದನ್ನು ಗಮನಿಸಿದ ನೆಟ್ಟಿಗರು ನಟನ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ವ್ಯಾಪಕವಾಗಿ ಟ್ರೋಲ್ ಮಾಡಿದ್ದಾರೆ.
ಸದ್ಯ ಯೂಟ್ಯೂಬ್ನಲ್ಲಿ ಬಿಡುಗಡೆಗೊಂಡಿರುವ 'ಬಾವಾಲ್' ಚಿತ್ರದ ಟ್ರೇಲರ್ ವೀಕ್ಷಿಸಿದ ಸಿನಿಪ್ರೇಕ್ಷಕರು ನಟ ವರುಣ್ ಧವನ್ ಮತ್ತು ಜಾನ್ವಿ ಕಪೂರ್ ಜೋಡಿಯನ್ನು ಮೆಚ್ಚಿಕೊಂಡಿದ್ದಾರೆ. ನಿತೇಶ್ ತಿವಾರಿ ನಿರ್ದೇಶಿಸಿರುವ ಈ ಚಿತ್ರವು, ವಲ್ಡ್ ವಾರ್ 2ರ ಹಿನ್ನೆಲೆಯನ್ನು ಆಧರಿಸಿದೆ ಎಂದು ಹೇಳಲಾಗಿದೆ.
ಸಾಜಿದ್ ನಾಡಿಯಾಡ್ವಾಲಾ ಮತ್ತು ಅಶ್ವಿನಿ ಅಯ್ಯರ್ ತಿವಾರಿ ನಿರ್ಮಿಸಿದ ಈ ಸಿನಿಮಾದ ಕಥೆಯೂ, ಇಬ್ಬರು ನವವಿವಾಹಿತರು ತಮ್ಮ ಹನಿಮೂನ್ಗಾಗಿ ಯುರೋಪ್ಗೆ ಪ್ರಯಾಣಿಸುವ ಮತ್ತು ಅವರ ವೈವಾಹಿಕ ಜೀವನದಲ್ಲಿ ಎದುರಾಗುವ ಸಮಸ್ಯೆಗಳ ಸುತ್ತ ಸುತ್ತುವರಿದಿದೆ ಎಂದು ಸಿನಿ ವರದಿ ಹೇಳಿದೆ,(ಏಜೆನ್ಸೀಸ್).