More

    ಜಿಲ್ಲೆಯಲ್ಲಿ ಗೃಹಲಕ್ಷ್ಮೀ ಯೋಜನೆಗೆ 4,79,393 ಮಹಿಳೆಯರು ಅರ್ಹರು: ಜಿಲ್ಲಾಧಿಕಾರಿ ಡಾ.ಕುಮಾರ ಮಾಹಿತಿ

    ಮಂಡ್ಯ: ರಾಜ್ಯ ಸರ್ಕಾರದ ಗೃಹಲಕ್ಷ್ಮೀ ಯೋಜನೆಗೆ ಜಿಲ್ಲೆಯಲ್ಲಿ 4,79,393 ಮಹಿಳೆಯರು ನೋಂದಣಿ ಮಾಡಿಸಲು ಅರ್ಹರಾಗಿದ್ದಾರೆ. ಇನ್ನು ಜು.20ರಿಂದ ನೋಂದಣಿ ಪ್ರಕ್ರಿಯೆಗೆಂದು ಜಿಲ್ಲಾಡಳಿತ ಅಗತ್ಯ ಸಿದ್ಧತೆ ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.
    ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ರೇಷನ್ ಕಾರ್ಡ್ ಪ್ರಕಾರ ಕುಟುಂಬದ ಯಜಮಾನಿಯಾಗಿರುವ 4,79,393 ಮಹಿಳೆಯರು ಯೋಜನೆಗೆ ನೋಂದಣಿ ಮಾಡಿಕೊಳ್ಳಬಹುದು. ಅಂತ್ಯೋದಯ ಅನ್ನಭಾಗ್ಯ, ಬಿಪಿಎಲ್ ಮತ್ತು ಎಪಿಎಲ್ ಸೇರಿದಂತೆ ಜಿಲ್ಲೆಯಲ್ಲಿ 5,34,919 ಪಡಿತರ ಕಾರ್ಡ್‌ಗಳನ್ನು ವಿತರಿಸಲಾಗಿದೆ. ಈ ಪೈಕಿ 4,79,393 ಕಾರ್ಡ್‌ಗಳಲ್ಲಿ ಮಹಿಳೆಯರೇ ಕುಟುಂಬದ ಯಜಮಾನಿಯಾಗಿದ್ದು, 51,912 ಕಾರ್ಡ್‌ಳಲ್ಲಿ ಪುರುಷರು ಮುಖ್ಯಸ್ಥರಾಗಿದ್ದಾರೆ ಎಂದು ವಿವರಿಸಿದರು.
    ಈಗ ನೋಂದಣಿ ಮಾಡಿಸಿದರೂ ಆಗಸ್ಟ್ ತಿಂಗಳಿಂದ ಫಲಾನುಭವಿಗಳ ಬ್ಯಾಂಕ್ ಖಾತೆ ಯೋಜನೆಯಡಿ 2 ಸಾವಿರ ರೂ ಜಮೆಯಾಗಲಿದೆ. ಪಡಿತರ ಚೀಟಿಯಲ್ಲಿರುವ ಯಜಮಾನಿ ಮಹಿಳೆ ಅಥವಾ ಆಕೆಯ ಪತಿ ಆದಾಯ ತೆರಿಗೆ ಅಥವಾ ಜಿಎಸ್‌ಟಿ ಪಾವತಿಸುತ್ತಿದ್ದರೆ ಅವರಿಗೆ ಯೋಜನೆ ಸವಲತ್ತು ದೊರೆಯುವುದಿಲ್ಲ. ಮಕ್ಕಳು ಆದಾಯ ತೆರಿಗೆ ಪಾವತಿಸುತ್ತಿದ್ದರೂ ತಾಯಿಗೆ ಹಣ ಸಿಗಲಿದೆ. ಯೋಜನೆಯ ಸೌಲಭ್ಯ ಪಡೆಯಲು ಲಿಂಗತ್ವ ಅಲ್ಪಸಂಖ್ಯಾತ ಕೂಡ ಅರ್ಹರಾಗಿದ್ದಾರೆ. ಪ್ರಮುಖವಾಗಿ ನೋಂದಣಿ ಮಾಡಿಸಿಕೊಳ್ಳಲು ಅಂತಿಮ ದಿನಾಂಕ ನಿಗದಿ ಮಾಡಿಲ್ಲ. ಆದ್ದರಿಂದ ಯಾವುದೇ ರೀತಿಯ ಒತ್ತಡ ಹಾಗೂ ಆತಂಕವಿಲ್ಲದೆ ನೋಂದಣಿ ಮಾಡಿಸಿಕೊಳ್ಳಬಹುದು. ಜತೆಗೆ ಕೇಂದ್ರಗಳ ಎದುರು ಜಮಾಯಿಸುವ ಅಗತ್ಯವಿಲ್ಲ. ತಮ್ಮ ಮೊಬೈಲ್‌ಗೆ ಎಸ್‌ಎಂಎಸ್ ಸಂದೇಶ ಬಂದ ನಂತರ ನಿಗದಿಪಡಿಸಿರುವ ಕೇಂದ್ರಕ್ಕೆ ತೆರಳಿ ನೋಂದಣಿ ಮಾಡಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು.
    ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಮಂಡ್ಯ ಉಪ ವಿಭಾಗಾಧಿಕಾರಿ ಶಿವಮೂರ್ತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಎಸ್.ರಾಜಮೂರ್ತಿ, ಜಿಲ್ಲಾ ವಾರ್ತಾಧಿಕಾರಿ ಎಸ್.ಎಚ್.ನಿರ್ಮಲಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts