ಹೀಗೊಂದು ವಿಶೇಷ ಮದುವೆ: ಹಿಂದೂ ವಧುವಿಗೆ ಮುಸ್ಲಿಂ ದಂಪತಿಯಿಂದ ಕನ್ಯಾದಾನ

marriageweb
Published on

ಲುಧಿಯಾನಾ (ಪಂಜಾಬ್​): ಲುಧಿಯಾನಾ ಜಿಲ್ಲೆಯ ಭಾಟಿಯಾನ್‌ ಪಟ್ಟಣದಲ್ಲಿ ನಡೆದಿರುವ ವಿವಾಹವೊಂದು ಇದೀಗ ಭಾರಿ ಸುದ್ದಿ ಮಾಡಿದ್ದು, ಅಷ್ಟೇ ಮೆಚ್ಚುಗೆಗೂ ಕಾರಣವಾಗಿದೆ. ಇದಕ್ಕೆ ಕಾರಣ, ಇದು ಹಿಂದೂ ಜೋಡಿಯ ವಿವಾಹವಾಗಿದ್ದು, ಮದುಮಗಳ ಕನ್ಯಾದಾನ ಮಾಡಿದ್ದು ಮುಸ್ಲಿಂ ದಂಪತಿ ಎನ್ನುವ ಕಾರಣಕ್ಕೆ!

ಇಂಥದ್ದೊಂದು ಅಪರೂಪದ ಘಟನೆಗೆ ಸಾಕ್ಷಿಯಾದದ್ದು ಸುದೇಶ್​ಕುಮಾರ್​ ಹಾಗೂ ಪೂಜಾ ಜೋಡಿಯ ವಿವಾಹ. ಇವರ ವಿವಾಹವನ್ನು ಜೂನ್​ 3ರಂದು ನಿಗದಿ ಮಾಡಲಾಗಿತ್ತು. ಪೂಜಾ ಅವರದ್ದು ಕೃಷಿ ಕುಟುಂಬವಾಗಿದ್ದು, ಇವರು ಉತ್ತರ ಪ್ರದೇಶದ ಮೊರಾದಾಬಾದ್‌ನವರು, ಇಡೀ ಕುಟುಂಬ ಲಾಕ್​ಡೌನ್​ಗಿಂತ ಮುಂಚೆ ಅಲ್ಲಿ ಹೋಗಿದ್ದರಿಂದ ಅಲ್ಲಿಯೇ ಇದ್ದರು.

ಭಾಟಿಯಾನ್‌ನಲ್ಲಿ ಸುದೇಶ್​ಕುಮಾರ್​ ಪಾಲಕರು ಇದ್ದರು. ಲಾಕ್​ಡೌನ್​ ಹಿನ್ನೆಲೆಯಲ್ಲಿ ಪೂಜಾಳ ಪಾಲಕರಿಗೆ ಮದುವೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. ಆದರೆ ಕರೊನಾ ವೈರಸ್​ ಭೀತಿಯಿಂದಾಗಿ ಮದುವೆಯನ್ನು ಮುಂದೂಡಿದರೂ ಪ್ರಯೋಜನ ಇಲ್ಲ ಎಂಬ ನಿರ್ಧಾರಕ್ಕೆ ಎರಡೂ ಕುಟುಂಬದವರು ಬಂದರು.

ಅವರ ಮನೆಯ ಸಮೀಪವೇ ವಾಸವಿರುವ ಅಬ್ದುಲ್ ಸಾಜೀದ್ ಹಾಗೂ ಸೋನಿ ಸಾಜೀದ್​ ದಂಪತಿ ಪೂಜಾಳನ್ನು ಮಗಳಂತೆಯೇ ಪ್ರೀತಿಸುತ್ತಿದ್ದರು. ಪೂಜಾ ಇವರನ್ನು ಮಾಮ, ಮಾಮಿ ಎಂದು ಕರೆಯುತ್ತಿದ್ದರು. ಆದ್ದರಿಂದ ತಮ್ಮ ಬದಲು ತಮ್ಮ ಮಗಳ ಕನ್ಯಾದಾನವನ್ನು ಈ ದಂಪತಿಯೇ ನೆರವೇರಿಸಲಿ ಎಂದು ಪೂಜಾಳ ಪಾಲಕರು ಹೇಳಿದರು.

ಆದ್ದರಿಂದ ಇದೀಗ ಮುಸ್ಲಿಂ ದಂಪತಿ ಪೂಜಾಳ ಕನ್ಯಾದಾನ ಮಾಡಿದ್ದಾರೆ. ಹಿಂದೂ ಸಂಪ್ರದಾಯದಂತೆ ಎಲ್ಲ ನಡೆದುಕೊಂಡಿದ್ದೇವೆ. ಪಂಡಿತರ ನೇತೃತ್ವದಲ್ಲಿ ಮದುವೆ ನಡೆಸಲಾಗಿದೆ. ಮದುಮಗನ ಕುಟುಂಬಕ್ಕೆ ಅವರ ಸಂಪ್ರದಾಯದಂತೆಯೇ ಭೋಜನವನ್ನು ತಯಾರಿಸಿದ್ದೇವೆ. ಮದುವೆಯಾಗುವ ಮಗಳಿಗೆ ಉಡುಗೊರೆ ನೀಡುವಂತೆ ಪೂಜಾಳಿಗೆ ನಾವು ಕಪಾಟು, ಹಾಸಿಗೆ ಹಾಗೂ ಪಾತ್ರೆಗಳನ್ನು ಉಡುಗೊರೆಯಾಗಿ ನೀಡಿದ್ದೇವೆ ಎಂದಿದ್ದಾರೆ ಅಬ್ದುಲ್​ ಸಾಜೀದ್​.

ಪೂಜಾ ನಮ್ಮನ್ನು ಮಾವ, ಮಾಮಿ ಎಂದು ಕರೆಯುತ್ತಾಳೆ. ಇದರ ಅರ್ಥ ಅಪ್ಪ-ಅಮ್ಮ ಎಂದೇ ಆಗುತ್ತದೆ. ಐದು ವರ್ಷಗಳಿಂದ ನಾವು ಆಕೆಯನ್ನು ಬಲ್ಲೆವು. ಆದ್ದರಿಂದ ಆಕೆಯ ಹೆತ್ತವರ ಅನುಪಸ್ಥಿತಿಯಲ್ಲಿ ಅವರ ಕಾರ್ಯ ನೆರವೇರಿಸಿದ್ದೇವೆ ಎಂದಿದ್ದಾರೆ ದಂಪತಿ. ಈ ಮದುವೆಗೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಶ್ಲಾಘನೆ ವ್ಯಕ್ತವಾಗಿದೆ. (ಎಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net