

ಬೆಂಗಳೂರು: ಜೂನ್ 18 ರಂದು ನಡೆಯಲಿರುವ ದ್ವಿತೀಯ ಪಿಯುಸಿ ಇಂಗ್ಲೀಷ್ ಪರೀಕ್ಷೆಗೆ ಸಂಬಂಧಿಸಿದ ತಾತ್ಕಾಲಿಕ ಪಟ್ಟಿಯನ್ನು ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದೆ.
ವಿದ್ಯಾರ್ಥಿಗಳು ಮತ್ತು ಅವರ ಪರೀಕ್ಷಾ ಕೇಂದ್ರದ ವಿವರವುಳ್ಳ ತಾತ್ಕಾಲಿಕ ಪಟ್ಟಿ ಇದಾಗಿದೆ.
ಕರೊನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಇರುವ ಜಿಲ್ಲೆಯಲ್ಲೇ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿರುವ ನಿಟ್ಟಿನಲ್ಲಿ ಈ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
ವಿದ್ಯಾರ್ಥಿನಿಲಯ ತಾವು ವಾಸಿಸಿರುವ ಊರುಗಳಲ್ಲಿ ಹಾಗೂ ಬೇರೆ ಬೇರೆ ಊರುಗಳಲ್ಲಿ ಕಲಿಯುತ್ತಿರುವ ಮಕ್ಕಳು ಲಾಕ್ಡೌನ್ ಹಿನ್ನೆಲೆಯಲ್ಲಿ ತಮ್ಮೂರಿಗೆ ವಾಪಸಾಗಿರುವ ಕಾರಣ, ಅವರಿಗೂ ಅನುಕೂಲ ಆಗುವ ನಿಟ್ಟಿನಲ್ಲಿ ಅವರಿರುವ ಸ್ಥಳದ ಸಮೀಪದ ಜಿಲ್ಲೆಯ ಅಥವಾ ತಾಲೂಕಿನಲ್ಲಿ ಅವರು ಬಯಸುವ ಪರೀಕ್ಷಾ ಕೇಂದ್ರಗಳಲ್ಲೇ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿತ್ತು. ಇದರ ಆಧಾರದ ಮೇಲೆ ತಾತ್ಕಾಲಿಕ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
ಇದು ಕೇವಲ ತಾತ್ಕಾಲಿಕ ಪಟ್ಟಿಯಾಗಿದೆ. ಇದರಲ್ಲಿ ಯಾವುದೇ ರೀತಿಯ ತಿದ್ದುಪಡಿಗಳು ಇದ್ದರೆ ಸಂಬಂಧ ಪಟ್ಟ ಕಾಲೇಜುಗಳ ಪ್ರಾಚಾರ್ಯರ ಮೂಲಕ ತಿದ್ದುಪಡಿ ಮಾಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ತಿದ್ದುಪಡಿಗೆ ಇನ್ನೆರಡು ದಿನಗಳ ಅವಕಾಶ ಇವೆ. ಎಂದರೆ ಜೂನ್ 5ರವೆರೆಗೆ ಅವಕಾಶ ಕಲ್ಪಿಸಲಾಗಿದೆ. ತಿದ್ದುಪಡಿಯಾದ ನಂತರ ಅಂತಿಮ ಪಟ್ಟಿಯನ್ನು ಜೂನ್ 7 ರಂದು ಶಿಕ್ಷಣ ಇಲಾಖೆ ಪ್ರಕಟಿಸಲಿದೆ.
ಒಟ್ಟು 16,229 ವಿದ್ಯಾರ್ಥಿಗಳು ಪ್ರಸ್ತುತ ತಾವಿರುವ ಸಮೀಪದ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲು ಇಚ್ಛೆ ವ್ಯಕ್ತಪಡಿಸಿರುವುದಾಗಿ ನಿನ್ನೆಯಷ್ಟೇ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದರು. ರಾಜ್ಯದಲ್ಲಿ ಪಿಯು ವ್ಯಾಸಂಗ ಮಾಡುತ್ತಿದ್ದ ಹೊರ ರಾಜ್ಯದ ವಿದ್ಯಾರ್ಥಿಗಳು ತಮ್ಮ ಊರಿಗೆ ತೆರಳಿದ್ದು, ಅವರ ಇಚ್ಛೆಯಂತೆ ಆ ರಾಜ್ಯದ ಗಡಿ ಭಾಗದ ನಮ್ಮ ರಾಜ್ಯದ ಜಿಲ್ಲೆಗಳಲ್ಲಿ ಪರೀಕ್ಷೆ ಬರೆಯಬಹುದಾಗಿದೆ ಎಂದೂ ಅವರು ಹೇಳಿದ್ದರು.
ತಾತ್ಕಾಲಿಕ ಪಟ್ಟಿಯನ್ನು ಈ ಲಿಂಕ್ನಲ್ಲಿ ನೋಡಬಹುದು http://pue.kar.nic.in
ವಿವರಗಳಿಗೆ ಪಿಯು ಮಂಡಳಿಯ ಸಹಾಯವಾಣಿ ಸಂಖ್ಯೆ- 080-23083900 ನ್ನು ಸಂಪರ್ಕಿಸಬಹುದಾಗಿದೆ.