Sambhal Violence ಮಾಸ್ಟರ್​ ಮೈಂಡ್​ ಇವರೇ; ಎಸ್​ಪಿ ಪಕ್ಷದ ಸಂಸದನ ಮೇಲೆ ಪೊಲೀಸರ ಗಂಭೀರ ಆರೋಪ..

Untitled design - 2024-11-25T171344.935
Published on

ಲಖನೌ: ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿ ಭಾನುವಾರ (ನವೆಂಬರ್ 25) ಬೆಳಗ್ಗೆ ಶಾಹಿ ಜಾಮಾ ಮಸೀದಿಯ ಸಮೀಕ್ಷೆ ವೇಳೆ ನಡೆದ ಹಿಂಸಾಚಾರದಲ್ಲಿ(Sambhal Violence) ಇದುವರೆಗೆ ನಾಲ್ವರು ಮೃತಪಟ್ಟಿದ್ದಾರೆ. ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷದ ಸಂಸದ ಜಿಯಾವುರ್ ರೆಹಮಾನ್ ಬರ್ಕೆ ಮತ್ತು ಎಸ್‌ಪಿ ಶಾಸಕ ಇಕ್ಬಾಲ್ ಮಹಮೂದ್ ಅವರ ಪುತ್ರ ಸೊಹೈಲ್ ಇಕ್ಬಾಲ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

ಸಂಸದ ಜಿಯಾವುರ್ ರೆಹಮಾನ್ ಬಾರ್ಕ್ ಮತ್ತು ಸೊಹೈಲ್ ಇಕ್ಬಾಲ್ ಅವರು ಜನರನ್ನು ಪ್ರೇರೇಪಿಸಿದ್ದಾರೆ ಎಂದು ಆರೋಪಿಸಲಾಗಿದೆ. ಇವರು ಪ್ರೇರೇಪಿಸಿರುವುದರಿಂದಲೇ ಭಾನುವಾರದ ಹಿಂಸಾಚಾರಕ್ಕೆ ಕಾರಣವಾಯಿತು. ಈ ಘಟನೆಯಲ್ಲಿ ನಾಲ್ವರು ಮೃತಪಟ್ಟಿದ್ದು, ಡಜನ್​​ಗಟ್ಟಲೆ ಜನರು ಗಾಯಗೊಂಡಿದ್ದಾರೆ. ಇದುವರೆಗೂ ಒಟ್ಟು ಏಳು ಎಫ್‌ಐಆರ್‌ಗಳು ದಾಖಲಾಗಿವೆ. 2,750 ಇತರರನ್ನು ಹೊರತುಪಡಿಸಿ ಎಫ್‌ಐಆರ್‌ಗಳಲ್ಲಿ ಆರೋಪಿಗಳಾಗಿ ಹೆಸರಿಸಲಾದ ಆರು ಜನರಲ್ಲಿ ಬಾರ್ಕ್ ಮತ್ತು ಇಕ್ಬಾಲ್ ಹೆಸರು ಇದೆ.

ಭಾನುವಾರ ಮಧ್ಯಾಹ್ನದಿಂದ ಜಿಲ್ಲೆಯಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಜಿಲ್ಲಾಧಿಕಾರಿ ರಾಜೇಂದ್ರ ಪೆನ್ಸಿಯಾ ಮತ್ತು ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಸಂಭಾಲ್ ಕೃಷ್ಣ ಕುಮಾರ್ ಬಿಷ್ಣೋಯ್ ಸೋಮವಾರ(ನವೆಂಬರ್​ 25) ತಿಳಿಸಿದರು. ವಿಡಿಯೋ ದೃಶ್ಯಾವಳಿಗಳ ಆಧಾರದ ಮೇಲೆ ಗಲಭೆಕೋರರನ್ನು ಗುರುತಿಸಿ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗುವುದು ಎಂದ ಹೇಳಿದ್ದಾರೆ.

ವಿಷಯ ಏನು?

ಉತ್ತರ ಪ್ರದೇಶದ ಕಾಶಿ ಮತ್ತು ಮಥುರಾ ನಂತರ ಇದೀಗ ಸಂಭಾಲ್‌ನ ಶಾಹಿ ಜಾಮಾ ಮಸೀದಿ ವಿವಾದಕ್ಕೀಡಾಗಿದೆ. ಈ ಸ್ಥಳವು 1529ರಲ್ಲಿ ಬಾಬರನಿಂದ ಕೆಡವಲ್ಪಟ್ಟ ಶ್ರೀ ಹರಿಹರ ದೇವಾಲಯವಾಗಿತ್ತು. ಅಲ್ಲಿ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತಿದೆ. ಮಸೀದಿಯಲ್ಲಿ ಶಿವಲಿಂಗವಿದೆ ಎಂಬುದಾಗಿಯೂ ಹೇಳಲಾಗುತ್ತಿದೆ.

ನ್ಯಾಯಾಲಯದ ಆದೇಶದ ಮೇರೆಗೆ ಶಾಹಿ ಜಾಮಾ ಮಸೀದಿಯ ಸರ್ವೆ ಕಾರ್ಯ ನಡೆಯುತ್ತಿದೆ. ಮಸೀದಿಯನ್ನು ಸರ್ವೆ ಮಾಡಿ ಏಳು ದಿನಗಳೊಳಗೆ ವರದಿ ಸಲ್ಲಿಸುವಂತೆ ನ್ಯಾಯಾಲಯ ಸೂಚಿಸಿತ್ತು. ನವೆಂಬರ್ 19(ಮಂಗಳವಾರ) ರಂದು ನಡೆಸಿದ ಮೊದಲ ಸಮೀಕ್ಷೆಯ ನಂತರ ತಂಡವು ನವೆಂಬರ್ 24( ಭಾನುವಾರ) ರಂದು ಬೆಳಗ್ಗೆ ಎರಡನೇ ಸಮೀಕ್ಷೆಗೆ ಆಗಮಿಸಿತು. ಸಮೀಕ್ಷಾ ತಂಡ ಜಾಮಾ ಮಸೀದಿ ತಲುಪುತ್ತಿದ್ದಂತೆಯೇ ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸಿ ಪ್ರತಿಭಟನೆ ಆರಂಭಿಸಿದರು. ಸ್ವಲ್ಪ ಸಮಯದಲ್ಲೇ ಪ್ರತಿಭಟನೆ ಗದ್ದಲಕ್ಕೆ ತಿರುಗಿತು. ಸಮೀಕ್ಷಾ ವರದಿಯನ್ನು ನ.26ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದು 29ಕ್ಕೆ ವಿಚಾರಣೆ ನಿಗದಿಯಾಗಿದೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net