ದಕ್ಷಿಣ ಆಫ್ರಿಕಾ ನೆಲದಲ್ಲಿ ಭಾರಿ ಅನ್ಯಾಯವಾದ್ರೂ ಗೆದ್ದು ಬೀಗಿದ ಭಾರತ!

South Africa
Published on

ಜೊಹಾನ್ಸ್‌ಬರ್ಗ್: ವಿಶ್ವ ನಂ.1 ಟಿ20 ಬ್ಯಾಟರ್ ಹಾಗೂ ನಾಯಕ ಸೂರ್ಯಕುಮಾರ್ ಯಾದವ್ (100 ರನ್, 56 ಎಸೆತ, 7 ಬೌಂಡರಿ, 8 ಸಿಕ್ಸರ್) ಸ್ಫೋಟಕ ಶತಕದ ಬಲದಿಂದ ಪ್ರವಾಸಿ ಭಾರತ ತಂಡ 3ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ 106 ರನ್‌ಗಳಿಂದ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ 3 ಪಂದ್ಯಗಳ ಸರಣಿ 1-1ರಿಂದ ಸಮಬಲದಲ್ಲಿ ಅಂತ್ಯಗೊಂಡಿದೆ. ಸರಣಿಯ ಮೊದಲ ಪಂದ್ಯ ಮಳೆಯಿಂದ ರದ್ದಾಗಿತ್ತು.

ಒಂದರ ಹಿಂದೆ ಒಂದು ವಿಕೆಟ್​ ಬೀಳುತ್ತಿದ್ದರು ಕೆಲ ಕಾಲ ಕ್ರೀಸ್​ನಲ್ಲಿ​ ಕಚ್ಚಿಕೊಂಡಿದ್ದ ಡೇವಿಡ್​ ಮಿಲ್ಲರ್​ (35 ರನ್​, 25 ಎಸೆತ, 2 ಬೌಂಡರಿ, 2 ಸಿಕ್ಸರ್​) ದಕ್ಷಿಣ ಆಫ್ರಿಕಾ ತಂಡಕ್ಕೆ ಭರವಸೆ ಮೂಡಿಸಿದ್ದರು. ರವೀಂದ್ರ ಜಡೇಜಾ ಎಸೆದ 9ನೇ ಓವರ್​ನಲ್ಲಿ ಎರಡು ಸಿಕ್ಸರ್​ ಬಾರಿಸಿದ ಮಿಲ್ಲರ್​, ನಾಲ್ಕನೇ ಎಸೆತದಲ್ಲಿ ಚೆಂಡು ಬ್ಯಾಟ್​ಗೆ ತಾಗಿ ವಿಕೆಟ್​ ಕೀಪರ್​ ಜಿತೇಶ್​ ಶರ್ಮಾ ಕೈಗೆ ತಲುಪಿತು. ಮನವಿ ಮಾಡಿದರೂ ಅಂಪೈರ್​ ನಾಟೌಟ್​ ಎಂದು ತೀರ್ಪು ನೀಡಿದರು. ಡಿಆರ್​ಎಸ್​ ಯಂತ್ರ ಕೈಕೊಟ್ಟಿದ್ದರಿಂದ ಡಿಆರ್​ಎಸ್​ ಮನವಿ ಸಹ ಮಾಡಲಾಗಲಿಲ್ಲ. ರೀಪ್ಲೇ ನೋಡಿದಾಗ ಮಿಲ್ಲರ್​ ಔಟಾಗಿರುವುದು ಸ್ಪಷ್ಟವಾಗಿ ಗೋಚರವಾಗಿತ್ತು. ಮುಂದಿನ ಓವರ್​ನಲ್ಲಿ ಡಿಆರ್​ಎಸ್​ ಲಭ್ಯವಾದರೂ ಕೂಡ ಕಾಲ ಮಿಂಚಿತ್ತು.

ಆದರೆ, ಡಿಆರ್​ಎಸ್​ ಲೋಪ ಭಾರತಕ್ಕೆ ಹೆಚ್ಚು ಪರಿಣಾಮ ಬೀರಲಿಲ್ಲ. ಏಕೆಂದರೆ, ಭಾರತೀಯ ಬೌಲರ್​ಗಳನ್ನು ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿ ಹರಿಣಗಳ ಪಡೆಯನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕಿದರು.

ವಾಂಡರರ್ಸ್‌ ಕ್ರೀಡಾಂಗಣದಲ್ಲಿ ಗುರುವಾರ ನಡೆದ ನಿರ್ಣಾಯಕ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಭಾರತ, ಯಶಸ್ವಿ ಜೈಸ್ವಾಲ್ (60 ರನ್, 41 ಎಸೆತ, 6 ಬೌಂಡರಿ, 3 ಸಿಕ್ಸರ್) ಹಾಗೂ ಸೂರ್ಯಕುಮಾರ್ ಅಬ್ಬರದ ಜತೆಯಾಟದ ನೆರವಿನಿಂದ 7 ವಿಕೆಟ್‌ಗೆ 201 ರನ್ ಕಲೆಹಾಕಿತು. ಪ್ರತಿಯಾಗಿ ಕುಲದೀಪ್ ಯಾದವ್ (17ಕ್ಕೆ 5) ಸ್ಪಿನ್ ದಾಳಿಗೆ ತತ್ತರಿಸಿದ ದಕ್ಷಿಣ ಆಫ್ರಿಕಾ 13.5 ಓವರ್‌ಗಳಲ್ಲಿ 95 ರನ್‌ಗಳಿಗೆ ಸರ್ವಪತನ ಕಂಡಿತು.

ಸವಾಲಿನ ಮೊತ್ತ ಬೆನ್ನಟ್ಟಿದ್ದ ಆಫ್ರಿಕಾ 44 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ತತ್ತರಿಸಿತು. ನಾಯಕ ಮಾರ್ಕ್ರಮ್ (25), ಹೆನ್ರಿಕ್ ಕ್ಲಾಸೆನ್ (5) ವಿಕೆಟ್ ಬೇಗನೆ ಕಬಳಿಸಿ ಭಾರತ ಪಂದ್ಯದಲ್ಲಿ ಹಿಡಿತ ಸಾಧಿಸಿತು. ಅನುಭವಿ ಡೇವಿಡ್ ಮಿಲ್ಲರ್ (35) ಏಕಾಂಗಿ ಹೋರಾಟ ಸೋಲಿನ ಅಂತರ ತಗ್ಗಿಸಲಷ್ಟೇ ಶಕ್ತವಾಯಿತು. ಇನಿಂಗ್ಸ್‌ನ 3ನೇ ಓವರ್‌ನಲ್ಲಿ ಪಾದದ ಗಾಯಕ್ಕೆ ತುತ್ತಾಗಿ ಸೂರ್ಯ ಅಂಗಣ ತೊರೆದ ಬಳಿಕ ಉಪನಾಯಕ ರವೀಂದ್ರ ಜಡೇಜಾ (25ಕ್ಕೆ 2) ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net