More

    ಯುವ ಭಾರತದ ಅಬ್ಬರಕ್ಕೆ ಮಣಿದ ದಕ್ಷಿಣ ಆಫ್ರಿಕಾ: ಸೂರ್ಯ ಕುಮಾರ್ ಶತಕದ ಬಲದಿಂದ ಸರಣಿ ಸಮಬಲ

    ಜೊಹಾನ್ಸ್‌ಬರ್ಗ್: ವಿಶ್ವ ನಂ.1 ಟಿ20 ಬ್ಯಾಟರ್ ಹಾಗೂ ನಾಯಕ ಸೂರ್ಯಕುಮಾರ್ ಯಾದವ್ (100 ರನ್, 56 ಎಸೆತ, 7 ಬೌಂಡರಿ, 8 ಸಿಕ್ಸರ್) ಸ್ಫೋಟಕ ಶತಕದ ಬಲದಿಂದ ಪ್ರವಾಸಿ ಭಾರತ ತಂಡ 3ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ 106 ರನ್‌ಗಳಿಂದ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ 3 ಪಂದ್ಯಗಳ ಸರಣಿ 1-1ರಿಂದ ಸಮಬಲದಲ್ಲಿ ಅಂತ್ಯಗೊಂಡಿದೆ. ಸರಣಿಯ ಮೊದಲ ಪಂದ್ಯ ಮಳೆಯಿಂದ ರದ್ದಾಗಿತ್ತು.

    ವಾಂಡರರ್ಸ್‌ ಕ್ರೀಡಾಂಗಣದಲ್ಲಿ ಗುರುವಾರ ನಡೆದ ನಿರ್ಣಾಯಕ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಭಾರತ, ಯಶಸ್ವಿ ಜೈಸ್ವಾಲ್ (60 ರನ್, 41 ಎಸೆತ, 6 ಬೌಂಡರಿ, 3 ಸಿಕ್ಸರ್) ಹಾಗೂ ಸೂರ್ಯಕುಮಾರ್ ಅಬ್ಬರದ ಜತೆಯಾಟದ ನೆರವಿನಿಂದ 7 ವಿಕೆಟ್‌ಗೆ 201 ರನ್ ಕಲೆಹಾಕಿತು. ಪ್ರತಿಯಾಗಿ ಕುಲದೀಪ್ ಯಾದವ್ (17ಕ್ಕೆ 5) ಸ್ಪಿನ್ ದಾಳಿಗೆ ತತ್ತರಿಸಿದ ದಕ್ಷಿಣ ಆಫ್ರಿಕಾ 13.5 ಓವರ್‌ಗಳಲ್ಲಿ 95 ರನ್‌ಗಳಿಗೆ ಸರ್ವಪತನ ಕಂಡಿತು.

    ಸವಾಲಿನ ಮೊತ್ತ ಬೆನ್ನಟ್ಟಿದ್ದ ಆಫ್ರಿಕಾ 44 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ತತ್ತರಿಸಿತು. ನಾಯಕ ಮಾರ್ಕ್ರಮ್ (25), ಹೆನ್ರಿಕ್ ಕ್ಲಾಸೆನ್ (5) ವಿಕೆಟ್ ಬೇಗನೆ ಕಬಳಿಸಿ ಭಾರತ ಪಂದ್ಯದಲ್ಲಿ ಹಿಡಿತ ಸಾಧಿಸಿತು. ಅನುಭವಿ ಡೇವಿಡ್ ಮಿಲ್ಲರ್ (35) ಏಕಾಂಗಿ ಹೋರಾಟ ಸೋಲಿನ ಅಂತರ ತಗ್ಗಿಸಲಷ್ಟೇ ಶಕ್ತವಾಯಿತು. ಇನಿಂಗ್ಸ್‌ನ 3ನೇ ಓವರ್‌ನಲ್ಲಿ ಪಾದದ ಗಾಯಕ್ಕೆ ತುತ್ತಾಗಿ ಸೂರ್ಯ ಅಂಗಣ ತೊರೆದ ಬಳಿಕ ಉಪನಾಯಕ ರವೀಂದ್ರ ಜಡೇಜಾ (25ಕ್ಕೆ 2) ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts