

ಗುವಾಹಟಿ: ಅಸ್ಸಾಂನಲ್ಲಿ ಪ್ರವಾಹ ರಣಕೇಕೆ ಹಾಕುತ್ತಿದೆ. ಭಾರಿ ಮಳೆಗೆ ಮತ್ತೆ ಏಳು ಮಂದಿ ಪ್ರಾಣಕಳೆದುಕೊಂಡಿದ್ದು, ಸಾವಿನ ಸಂಖ್ಯೆ 90 ಕ್ಕೆ ಏರಿದೆ.
ಶನಿವಾರದ ವೇಳೆಗೆ ಅಸ್ಸಾಂನಲ್ಲಿ ಇನ್ನೂ 7 ಜನ ಸಾವನ್ನಪ್ಪಿದ್ದಾರೆ. "ಗೋಲ್ಪಾರಾ ಜಿಲ್ಲೆಯಲ್ಲಿ ದೋಣಿ ಮುಳುಗಿದ ಘಟನೆಯಲ್ಲಿ ಐದು ಜನರು ಸಾವನ್ನಪ್ಪಿದ್ದರೆ, ನಾಗಾವ್ ಮತ್ತು ಜೋರ್ಹತ್ ಜಿಲ್ಲೆಯಲ್ಲಿ ಒಬ್ಬ ವ್ಯಕ್ತಿ ನೀರಿನಲ್ಲಿ ಕೊಚ್ಚಿಹೋಗಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ ಇಲ್ಲಿಯವರೆಗೆ 90 ಕ್ಕೆ ಏರಿದೆ" ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎಎಸ್‌ಡಿಎಂಎ) ವರದಿ ತಿಳಿಸಿದೆ.
ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಸ್ವಲ್ಪಮಟ್ಟಿಗೆ ಕಡಿಮೆಯಾಗುತ್ತಿದೆ. ಆದರೆ 24 ಜಿಲ್ಲೆಗಳಲ್ಲಿ 12.33 ಲಕ್ಷಕ್ಕೂ ಹೆಚ್ಚು ಜನರು ಇನ್ನೂ ಪ್ರವಾಹದಿಂದ ಸಂತ್ರಸ್ತರಾಗಿದ್ದಾರೆ. 2406 ಗ್ರಾಮಗಳು ಮತ್ತು 32924.32 ಹೆಕ್ಟೇರ್ ಬೆಳೆ ಜಲಾವೃತವಾಗಿದೆ.
ಕಾಜಿರಂಗ ರಾಷ್ಟ್ರೀಯ ಉದ್ಯಾನದಲ್ಲಿ ಇದುವರೆಗೆ 10 ಘೇಂಡಾಮೃಗಗಳು ಸೇರಿದಂತೆ 180 ಕಾಡು ಪ್ರಾಣಿಗಳು ಪ್ರವಾಹದಲ್ಲಿ ಮೃತಪಟ್ಟಿವೆ. ಅರಣ್ಯ ಇಲಾಖೆ ಎರಡು ಘೇಂಡಾಮೃಗ, ಎರಡು ಆನೆ ಮರಿಗಳು ಸೇರಿದಂತೆ 135 ಪ್ರಾಣಿಗಳನ್ನು ರಕ್ಷಿಸಿದೆ. ರಾಷ್ಟ್ರೀಯ ಉದ್ಯಾನದ 35 ಅರಣ್ಯ ಶಿಬಿರಗಳು ಇನ್ನೂ ಜಲಾವೃತವಾಗಿವೆ. ಅಸ್ಸಾಂನಲ್ಲಿ ಬ್ರಹ್ಮಪುತ್ರ ನದಿಯಲ್ಲಿ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.