ಅಪ್ರಾಪ್ತೆ ಜೊತೆ ಅಕ್ರಮ ಸಂಬಂಧ.. ಸಕ್ರಮಗೊಳಿಸಲು ನಿಖಾ ಏರ್ಪಡಿಸಿದ 9 ಮಂದಿ ಅರೆಸ್ಟ್​!

crime
Published on

ಗುವಾಹಟಿ: ಅಸ್ಸಾಂನ ಕರೀಂಗಂಜ್ ಜಿಲ್ಲೆಯಲ್ಲಿ ಬಾಲ್ಯ ವಿವಾಹಕ್ಕೆ ಸಂಬಂಧಿಸಿದಂತೆ ಪೊಲೀಸರು ಕನಿಷ್ಠ ಒಂಬತ್ತು ಜನರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಕರೀಂಗಂಜ್ ಜಿಲ್ಲೆಯ ಪಥರ್ಕಂಡಿ ಪ್ರದೇಶದ ಕಬರಿಬಂದ್ ಗ್ರಾಮದ ಮುಸ್ಲಿಂ ಸಮುದಾಯದ ಬಿಲಾಲ್ ಉದ್ದೀನ್ ಅದೇ ಪ್ರದೇಶದ ಅಪ್ರಾಪ್ತ ಬಾಲಕಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದನು. ಹುಡುಗಿಗೆ ಮದುವೆಗೆ ಕನಿಷ್ಠ ವಯಸ್ಸು ಆಗದಿದ್ದರೂ, ಎರಡು ಕುಟುಂಬಗಳು ಸೋಮವಾರ ರಾತ್ರಿ ಧಾರ್ಮಿಕ ವಿಧಾನಗಳನ್ನು ಅನುಸರಿಸಿ ಹುಡುಗ ಮತ್ತು ಹುಡುಗಿಯ ವಿವಾಹ(ನಿಖಾ)ಕ್ಕೆ ಒಪ್ಪಿಗೆ ಸೂಚಿಸಿದ್ದವು.

ಆದರೆ, ಪೊಲೀಸರು ಮಾಹಿತಿ ಪಡೆದು ಮದುವೆ ಸ್ಥಳಕ್ಕೆ ತಲುಪಿದ್ದಾರೆ. ಅವರು ಬಿಲಾಲ್ ಉದ್ದೀನ್, ಆತನ ತಂದೆ ಜೊಹ್ರುಲ್ ಇಸ್ಲಾಂ ಮತ್ತು ಅಪ್ರಾಪ್ತ ಬಾಲಕಿ ಸೇರಿದಂತೆ ಏಳು ಮಂದಿಯನ್ನು ವಶಕ್ಕೆ ತೆಗೆದುಕೊಂಡರು.

ಬಂಧಿತರನ್ನು ಮಂಗಳವಾರ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಅಪ್ರಾಪ್ತ ಬಾಲಕಿಯನ್ನು ಮಕ್ಕಳ ಕಲ್ಯಾಣ ಸಂಘಕ್ಕೆ ಹಸ್ತಾಂತರಿಸಲಾಗಿದ್ದು, ಉಳಿದವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.

ಈ ಹಿಂದೆ ಫೆಬ್ರವರಿ 2023 ರಲ್ಲಿ ಅಸ್ಸಾಂ ಪೊಲೀಸರು ರಾಜ್ಯದಲ್ಲಿ ಬಾಲ್ಯವಿವಾಹದ ವಿರುದ್ಧ ಬೃಹತ್ ಶಿಸ್ತುಕ್ರಮವನ್ನು ಪ್ರಾರಂಭಿಸಿದ್ದರು. ಕಾರ್ಯಾಚರಣೆಯಲ್ಲಿ ಅಸ್ಸಾಂನ ವಿವಿಧ ಭಾಗಗಳಿಂದ 3,500 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ.

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ವಿಧಾನಸಭೆಯ ಹಿಂದಿನ ಬಜೆಟ್ ಅಧಿವೇಶನದಲ್ಲಿ ಮುಂದಿನ ಎರಡು ವರ್ಷಗಳಲ್ಲಿ ರಾಜ್ಯದಿಂದ ಬಾಲ್ಯ ವಿವಾಹದ ಪಿಡುಗು ನಿರ್ಮೂಲನೆ ಮಾಡಲಾಗುವುದು ಎಂದು ಪ್ರತಿಪಾದಿಸಿದ್ದರು. ರಾಜ್ಯದಲ್ಲಿ ಬಾಲ್ಯ ವಿವಾಹ ನಡೆಯಲು ಬಿಡುವುದಿಲ್ಲ ಎಂದು ಹೇಳಿದ್ದರು. 2026ರ ವೇಳೆಗೆ ಬಾಲ್ಯವಿವಾಹ ನಿರ್ಮೂಲನೆಗೆ ರಾಜ್ಯ ಸರ್ಕಾರ ಕ್ರಿಯಾ ಯೋಜನೆ ಸಿದ್ಧಪಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net