

ನವದೆಹಲಿ: ಚಂಡೀಗಢ ಯುನಿವರ್ಸಿಟಿ ಹಾಸ್ಟೆಲ್ನಲ್ಲಿ ವಿದ್ಯಾರ್ಥಿನಿಯರ ಸ್ನಾನದ ದೃಶ್ಯ ವಿಡಿಯೋ ಮಾಡಿ, ಬಹಿರಂಗಗೊಳಿಸಿದ ಬೆನ್ನಿಗೇ ಐಐಟಿ ಕ್ಯಾಂಪಸ್ವೊಂದರಲ್ಲಿ ಕೂಡ ಅಂಥದ್ದೇ ಒಂದು ಪ್ರಕರಣ ವರದಿಯಾಗಿದೆ.
ಐಐಟಿ ಮುಂಬೈ ಕ್ಯಾಂಪಸ್ನಲ್ಲಿನ ಕ್ಯಾಂಟೀನ್ನಲ್ಲಿ ಕೆಲಸ ಮಾಡುತ್ತಿದ್ದವ, ಅದೇ ಕ್ಯಾಂಪಸ್ನಲ್ಲಿದ್ದ ಲೇಡಿಸ್ ಹಾಸ್ಟೆಲ್ನ ಬಾತ್ರೂಮ್ನೊಳಕ್ಕೆ ಇಣುಕಿ ನೋಡಲು ಹೋಗಿ ಸಿಕ್ಕಿಬಿದ್ದಿದ್ದಾನೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಪೆಸ್ಟ್ ಕಂಟ್ರೋಲ್ ಕೆಲಸದ ಹಿನ್ನೆಲೆಯಲ್ಲಿ ಐಐಟಿ ಕ್ಯಾಂಟೀನ್ಗೆ ರಜೆ ನೀಡಲಾಗಿತ್ತು. ಅದಾಗ್ಯೂ ಈತ ಕ್ಯಾಂಪಸ್ನಲ್ಲೇ ಉಳಿದುಕೊಂಡಿದ್ದು, ಭಾನುವಾರ ರಾತ್ರಿ ಅಲ್ಲಿನ ಲೇಡಿಸ್ ಹಾಸ್ಟೆಲ್ ಬಾತ್ರೂಮ್ನೊಳಕ್ಕೆ ಇಣುಕಿ ನೋಡಲು ಹೋಗಿದ್ದ. ಇದನ್ನು ಗಮನಿಸಿದ ವಿದ್ಯಾರ್ಥಿನಿಯೊಬ್ಬಳು ಬೇರೆಯವರಿಗೆ ತಿಳಿಸಿ ಈತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾಳೆ.
ಆತ ಕೆಲವು ವಿಡಿಯೋ ಮಾಡಿಕೊಂಡಿದ್ದಾನೆ ಎಂಬ ಆರೋಪ ವ್ಯಕ್ತವಾಗಿದ್ದರೂ, ಪೊಲೀಸರು ಆತನ ಮೊಬೈಲ್ ಫೋನ್ ವಶಕ್ಕೆ ಪಡೆದು ಪರಿಶೀಲಿಸಿದಾಗ ಯಾವುದೇ ಅಶ್ಲೀಲ ವಿಡಿಯೋ ಕಂಡುಬಂದಿಲ್ಲ. ಆತನನ್ನು ನಾಳೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಡಿಸಿಪಿ ಮಹೇಶ್ವರ್ ರೆಡ್ಡಿ ತಿಳಿಸಿದ್ದಾರೆ.